GBA ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಲೂಟಿ ಆರೋಪ.. ಬೆಚ್ಚಿ ಬೀಳಿಸುತ್ತೆ ಅಂಕಿ-ಅಂಶ..!

Published : Aug 04, 2026, 05:26 PM IST
gba

ಸಾರಾಂಶ

ಬೆಂಗಳೂರಿನ ಶಾಂತಿನಗರ ಪಾಲಿಕೆ ಕಚೇರಿಯಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಖರೀದಿ ಹೆಸರಿನಲ್ಲಿ ಸುಮಾರು 8.91 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಏನಿದು ಆರೋಪ? ಸ್ಟೋರಿ ಓದಿ..

ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಮತ್ತೊಂದು ಬೃಹತ್ ಭ್ರಷ್ಟಾಚಾರದ ವಾಸನೆಯ ಆರೋಪ ಕೇಳಿಬಂದಿದೆ. ಬೆಂಗಳೂರು ಕೇಂದ್ರ ಪಾಲಿಕೆಯ ಶಾಂತಿನಗರ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಕಂಪ್ಯೂಟರ್, ಪ್ರಿಂಟರ್ ಮತ್ತು ಕಾಪಿಯರ್ ಯಂತ್ರಗಳ ಖರೀದಿ ಹೆಸರಿನಲ್ಲಿ ಬರೋಬ್ಬರಿ 8.91 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಎನ್.ಆರ್.ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಹಗರಣದ ಹಿನ್ನೆಲೆ

ಕಳೆದ ಐದು ವರ್ಷಗಳಿಂದ ಶಾಂತಿನಗರ ವಿಭಾಗದ ಕಚೇರಿಗೆ ಪದೇ ಪದೇ ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಪೂರೈಕೆ ಮಾಡಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ದೂರು ದಾಖಲಿಸಲಾಗಿದೆ. ಒಟ್ಟು 8,91,46,526 ರೂಪಾಯಿ ಮೌಲ್ಯದ ಬಿಲ್‌ಗಳನ್ನು ಈ ಅವಧಿಯಲ್ಲಿ ಪಾವತಿಸಲಾಗಿದೆ ಎಂದು ಬಿಜೆಪಿ ಮುಖಂಡ ಎನ್‌ಆರ್ ರಮೇಶ್ ಅವರು ಆರೋಪಿಸಿದ್ದಾರೆ.

FDA ರವಿಕುಮಾರ್ ವಿರುದ್ಧ ಆರೋಪ

ಈ ಹಗರಣದ ಕೇಂದ್ರ ಬಿಂದು ಪಾಲಿಕೆಯ ಎಫ್‌ಡಿಎ (FDA) ಎನ್. ರವಿಕುಮಾರ್ ಎಂದು ಹೇಳಲಾಗುತ್ತಿದೆ. ರವಿಕುಮಾರ್ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ M/s N.S. Enterprises ಎಂಬ ಸಂಸ್ಥೆಯ ಮೂಲಕ ಈ ಪೂರೈಕೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಮೇ ತಿಂಗಳಲ್ಲಿ ಈ ಅಕ್ರಮದ ವಾಸನೆ ಹಬ್ಬುತ್ತಿದ್ದಂತೆಯೇ, ತರಾತುರಿಯಲ್ಲಿ ಸಂಸ್ಥೆಯ ಹೆಸರನ್ನು N.S.R Enterprises ಎಂದು ಬದಲಾಯಿಸಿ ಜೂನ್ ತಿಂಗಳಲ್ಲೂ ಲಕ್ಷಾಂತರ ರೂಪಾಯಿ ಬಿಲ್ ಸಲ್ಲಿಸಲಾಗಿದೆ ಎಂದು ದೂರಲಾಗಿದೆ.

ಆರೋಗಳ ಪ್ರಕಾರ ಬಿಲ್ ಪಾವತಿ ವಿವರ

  • 2021-22: 35.41 ಲಕ್ಷ ರೂ.
  • 2022-23: 69.63 ಲಕ್ಷ ರೂ.
  • 2023-24: 3.16 ಕೋಟಿ ರೂ.
  • 2024-25: 2.61 ಕೋಟಿ ರೂ.
  • 2025-26 (ಚಾಲ್ತಿ): 1.61 ಕೋಟಿ ರೂ.

ಕಳೆದ ಕೇವಲ ಮೂರು ತಿಂಗಳಲ್ಲೇ 47.44 ಲಕ್ಷ ರೂಪಾಯಿ ಬಿಲ್ ಸೃಷ್ಟಿಸಲಾಗಿದೆ ಎನ್ನಲಾಗಿದೆ. ಶಾಂತಿನಗರದ ಒಂದೇ ಕಚೇರಿಗೆ ಐದು ವರ್ಷಗಳಲ್ಲಿ 8.91 ಕೋಟಿ ಮೌಲ್ಯದ ಕಂಪ್ಯೂಟರ್‌ಗಳ ಅಗತ್ಯವಿದೆಯೇ? ಅಲ್ಲಿ ಖರೀದಿಸಲಾಗಿದೆ ಎನ್ನಲಾದ ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳು ಈಗ ಎಲ್ಲಿವೆ? ಪಾಲಿಕೆಯಲ್ಲಿ ಖರೀದಿಸುವ ಎಲೆಕ್ಟ್ರಾನಿಕ್ ವಸ್ತುಗಳ ಆಯಸ್ಸು ಕೇವಲ ಆರು ತಿಂಗಳೇ? ಎಂಬ ಪ್ರಶ್ನೆಗಳನ್ನು ಮಾಜಿ ಬಿಜೆಪಿ ನಾಯಕ ಎನ್.ಆರ್. ರಮೇಶ್ ಎತ್ತಿದ್ದಾರೆ.

ಲೋಕಾಯುಕ್ತಕ್ಕೆ ದೂರು

ಈ ಹಗರಣಕ್ಕೆ ಸಂಬಂಧಿಸಿದಂತೆ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಕಮಿಷನರ್ ಹಾಗೂ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಿ, ಎಫ್‌ಡಿಎ ರವಿಕುಮಾರ್ ಸೇರಿದಂತೆ ಭಾಗಿಯಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಕಡತಗಳಲ್ಲಿನ ಅನುಮಾನಾಸ್ಪದ ನಡೆ ಕಂಡು ಡಿಸಿಎಫ್ (DCF) ಕಚೇರಿಯು ಫೈಲ್‌ಗಳನ್ನು ವಾಪಸ್ ಕಳುಹಿಸಿದೆ ಎನ್ನಲಾಗಿದ್ದು ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

PREV
Read more Articles on
click me!

Recommended Stories

ಆ ದಿನಗಳಲ್ಲಿ ಆಫೀಸ್‌ಗೆ ಬರಬೇಕಿಲ್ಲ, ಬೆಂಗಳೂರು ಸ್ಟಾರ್ಟ್‌ಅಪ್‌ನ ಈ ನಿಯಮಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜೈಕಾರ
ನನಸಾಗುತ್ತಿದೆ ಶಂಕರ್‌ನಾಗ್‌ ಕನಸು, ನಾಲ್ಕು ವರ್ಷದ ಕಾಯುವಿಕೆಯ ಬಳಿಕ ನಂದಿ ಬೆಟ್ಟ ರೋಪ್‌ವೇ ಪ್ರಾಜೆಕ್ಟ್‌ ಕಾಮಗಾರಿ ಶುರು