
ಬೆಂಗಳೂರು (ಅ.23) ಬೆಂಗಳೂರಿನಲ್ಲಿ ಕಂಬಳ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿದ ಬೆಂಗಳೂರು ತುಳುಕೂಟ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನರಾಗಿದ್ದಾರೆ. 58 ವರ್ಷದ ಸುಂದರ್ ರಾಜ್ ಮಲ್ಲೇಶ್ವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದವರಾಗಿರುವ ಸುಂದರ್ ರಾಜ್, ಕಳೆದ 3 ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ತುಳು ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಇಂದು ಮಹಾಲಕ್ಷ್ಮಿ ಲೇಔಟ್ ಅಬ್ಬಕ್ಕ ಮೈದಾನದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಶಾಸಕ ಗೋಪಾಲಯ್ಯ ಸೇರಿದಂತೆ ಹಲವು ಗಣ್ಯರು, ಅಭಿಮಾನಿಗಳು ಅಂತಿಮ ದರ್ಶನ ಪಡೆದಿದ್ದರು. ನಾಳೆ(ಅ.24) ಸ್ವಗ್ರಾಮ ಪುತ್ತೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರಿನಲ್ಲಿ ತುಳುಕೂಟದ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಸುಂದರ್ ರಾಜ್, ಇತ್ತೀಚೆಗೆ ಕಾಂತಾರಾ ಸಿನಿಮಾ ಬಿಡುಗಡೆ ಬಳಿಕ ದೈವಾರಾಧನೆ ಕುರಿತು ಹುಚ್ಚಾಟ ಮೆರೆಯುತ್ತಿದ್ದವರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದರು. ಈ ಕುರಿತು ಕಾಂತಾರಾ ಚಿತ್ರತಂಡಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಕಾಂತಾರ ಮೊದಲ ಸಿನಿಮಾ ಬಿಡುಗಡೆ ಬಳಿಕ ದೈವಾರಾಧನೆಯನ್ನು ಲಘುವಾಗಿ ಪರಿಗಣಿಸುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಮನವಿ ಮಾಡಿದ್ದರು. ಟ್ಯಾಬ್ಲೋ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ದೈವಾರಾಧನೆ ಕುರಿತ ಸ್ಥಬ್ಧಚಿತ್ರ ಪ್ರದರ್ಶನ ಮಾಡದಂತೆ ಮನವಿ ಮಾಡಿದ್ದರು.
ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಸುಂದರ್ ರಾಜ್ ರೈ ಬಿಜೆಪಿಯ ರಾಜ್ಯ ಗೋ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು. ಹಲವು ಧಾರ್ಮಿಕ ಕಾರ್ಯಕ್ರಮಗಳು, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲೂ ಯಶಸ್ವಿಯಾಗಿದ್ದರು. ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಷ್ಟ್ರಮಟ್ಟದ ಕುಣಿತ ಭಜನೆ ಆಯೋಜಿಸಲು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದ ಸುಂದರ್ ರಾಜ್ ಇದೀಗ ನಿಧನರಾಗಿದ್ದಾರೆ.
ಮೊದಲ ಬಾರಿಗೆ ತುಳುನಾಡಿನ ಅತ್ಯಂತ ಪ್ರಸಿದ್ಧ ಹಾಗೂ ಜಾನಪದ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಸುಂದರ್ ರಾಜ್ ರೈಗೆ ಸಲ್ಲಲಿದೆ. 2023ರಲ್ಲಿ ಮೊದಲ ಬಾರಿಗೆ ಬೆಂಗಳೂರು ಜನತೆ ಕಂಬಳ ಕ್ರೀಡೆ ಅಸ್ವಾದಿಸಿದ್ದರು. ಎರಡನೇ ಆವೃತ್ತಿ ಕಂಬಳ ಆಯೋಜನೆಗೂ ಪ್ಲಾನ್ ರೂಪಿಸಿದ್ದರು.