
ಬೆಂಗಳೂರು (ಅ.6): ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾರುಣ ಘಟನೆಯಲ್ಲಿ, ಬೃಹತ್ ಅರಳಿ (ಆಲದ) ಮರ ಬಿದ್ದು 23 ವರ್ಷದ ಯುವತಿ ಕೀರ್ತನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೃತ ಕೀರ್ತನಾ ಹೆಬ್ಬಾಳದ ಚೋಳನಾಯಕನಹಳ್ಳಿ ನಿವಾಸಿ ಎಂದು ಗುರುತಿಸಲಾಗಿದ್ದು, ಇವರು ರಾಜೀವ್ ಗಾಂಧಿ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದರು ಎನ್ನಲಾಗಿದೆ. ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಈ ದಾರುಣ ಘಟನೆ ನಡೆದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ರಸ್ತೆಯಲ್ಲಿ ಬೃಹತ್ ಮರ ಹಾಗೂ ಮರದ ಕೊಂಬೆ ಬಿದ್ದು ಈ ದುರ್ಘಟನೆ ನಡೆದಿದೆ.
ಕೀರ್ತನಾ ಅವರು ತಮ್ಮ ಸ್ನೇಹಿತೆ ರಕ್ಷಿತಾ ಅವರ ಕುಟುಂಬದೊಂದಿಗೆ ಸ್ಯಾಂಡಲ್‌ವುಡ್ ಪ್ರೀಮಿಯರ್ ಲೀಗ್ (SPL) ಮ್ಯಾಚ್ ವೀಕ್ಷಿಸಲು ಹೋಗಿದ್ದರು. ಮ್ಯಾಚ್ ಮುಗಿಸಿ ಸ್ನೇಹಿತೆಯೊಂದಿಗೆ ವಾಪಸ್ ಆಗುತ್ತಿದ್ದಾಗ, ಕೀರ್ತನಾ ಸಂಚರಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದಿದೆ. ಈ ಅಪಘಾತದಲ್ಲಿ ಒಂದು ಬೈಕ್‌ನಲ್ಲಿದ್ದ ಕೀರ್ತನಾ ಸಾವನ್ನಪ್ಪಿದ್ದು, ಇನ್ನೊಂದು ಬೈಕ್‌ನಲ್ಲಿದ್ದ ಭಾಸ್ಕರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಭಾಸ್ಕರ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಧಿಕಾರಿಗಳೊಂದಿಗೆ ಸೇರಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಯುವತಿ ಕೀರ್ತನಾ ಅವರ ಮೃತದೇಹವನ್ನು ಮೊದಲು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸೋಮವಾರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸೋಲದೇವನಹಳ್ಳಿ ಪೊಲೀಸರು ಈ ಕುರಿತು ಮಾಹಿತಿ ಕಲೆ ಹಾಕಿ ತನಿಖೆ ಮುಂದುವರೆಸಿದ್ದಾರೆ.