
ಬೆಂಗಳೂರು (ಅ.31) ಬೆಂಗಳೂರು ಹಾಗೂ ಚೆನ್ನೈ ನಡುವೆ ಸಾಕಷ್ಟು ರೈಲು ಸೇವೆ ಲಭ್ಯವಿದೆ. ಇಷ್ಟೇ ಅಲ್ಲ ಈ ಎರಡು ನಗರ ನಡುವೆ ಜನರ ಓಡಾಟವು ಹೆಚ್ಚು, ಸಂಪರ್ಕವೂ ಹೆಚ್ಚು. ಉದ್ಯೋಗ, ವ್ಯಾಪಾರ ವಹಿವಾಟು, ವೈಯುಕ್ತಿಕ ಕೆಲಸಗಳಿಗೆ ಈ ಎರಡು ನಗರ ನಡುವೆ ಸಂಚಾರ ದಟ್ಟಣೆ ಇದ್ದೇ ಇದೆ. ಆದರೆ ಬೆಂಗಳೂರಿನಿಂದ ಚೆನ್ನೈಗೆ ಕೇವಲ 165 ರೂಪಾಯಿಯಲ್ಲಿ ಪ್ರಯಾಣಿಸಬಹುದು. ಅದು ಕೂಡ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನ್ನೋದು ವಿಶೇಷ. 500 ರಿಂದ 1500 ರೂಪಾಯಿ ಟಿಕೆಟ್ ದರ ನಡುವೆ ಅರಾಮದಾಯಕವಾಗಿ ಕೇವಲ 165 ರೂಪಾಯಿಯಲ್ಲಿ ಪ್ರಯಾಣ ಹೇಗೆ ಅನ್ನೋದನ್ನು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ಬೆಂಗಳೂರಿನಿಂದ ಚೆನ್ನೈಗೆ ಕೇವಲ 165 ರೂಪಾಯಿಯಲ್ಲಿ ಅತ್ಯಂತ ಕಂಫರ್ಟೇಬಲ್ ಪ್ರಯಾಣ ಮಾಡಬಹುದು ಎಂದು ಮಹಿಳೆ ವಿಡಿಯೋ ಮೂಲಕ ಹೇಳಿದ್ದಾರೆ. ನಂದಿನಿ ಅನ್ನೋ ಮಹಿಳೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಲಾಲ್‌ಬಾಗ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (Lalbagh Superfast Express - Train No. 12608) ರೈಲಿನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಪ್ರಯಾಣ ಸಾಧ್ಯ ಎಂದಿದ್ದಾರೆ. ಹಗಲಿನಲ್ಲಿ ಪ್ರಯಾಣಕ್ಕೆ ಲಾಲ್‌ಬಾಗ್ ಎಕ್ಸ್‌ಪ್ರೆಸ್ ಅತ್ಯಂತ ಅನುಕೂಲಕರ ಹಾಗೂ ಅತ್ಯಂತ ಅಗ್ಗದ ರೈಲಾಗಿದೆ ಎಂದಿದ್ದಾರೆ.
ಮಹಿಳೆ ತಾನು ಕೆಆರ್ ಪರುಂ ರೈಲು ನಿಲ್ದಾಣದಿಂದ ಬೆಳಗ್ಗೆ 6.50ಕ್ಕೆ ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲು ಹತ್ತಿ ಪ್ರಯಾಣ ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ತನಗೆ ಕೆಲಸದ ಒತ್ತಡವಿದ್ದ ಕಾರಣ ರೈಲಿನಲ್ಲಿ ಕೆಲಸ ಮಾಡಬೇಕಿತ್ತು. ಹೀಗಾಗಿ ಎಸಿ ಚೇರ್ ಕಾರ್ ಬುಕ್ ಮಾಡಿದ್ದೆ. ಎಸಿ ಕೋಚ್‌ನಲ್ಲಿ ಪ್ರಯಾಣ ದರ ಕೇವಲ 555 ರೂಪಾಯಿ. ಆದರೆ ಇದೇ ರೈಲಿನಲ್ಲಿ ಜನರಲ್ ಹಾಗೂ ನಾನ್ ಎಸಿ ಕೋಚ್ ಟಿಕೆಟ್ ದರ ಕೇವಲ 165 ರೂಪಾಯಿ ಮಾತ್ರ ಎಂದು ಮಹಿಳೆ ಹೇಳಿದ್ದಾರೆ.
ಕಡಿಮೆ ಟಿಕೆಟ್ ದರದಲ್ಲಿ ಪ್ರಯಾಣ ಮಾಡಲು ಬಯಸುವವರು 165 ರೂಪಾಯಿ ದರದ ನಾನ್ ಎಸಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ನಾನ್ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣ ಕಿರಿಕಿರಿ ಆಗಬಹುದು. ಹೀಗಾಗಿ ಪ್ರಯಾಣ, ಅಗತ್ಯಕ್ಕೆ ತಕ್ಕಂತೆ ಟಿಕೆಟ್ ಬುಕ್ ಮಾಡಿಕೊಳ್ಳುವುದು ಉತ್ತಮ ಎಂದು ಮಹಿಳೆ ಸಲಹ ನೀಡಿದ್ದಾರೆ.
ಬೆಳಿಗ್ಗೆ ಬೆಂಗಳೂರಿನಿಂದ ಹೊರಟ ಈ ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಸರಿಯಾಗಿ ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ತಲಪುತ್ತದೆ. ಕೇವಲ 6 ಗಂಟೆಗಳಲ್ಲಿ ಯಾವುದೇ ದಣಿವಿಲ್ಲದೆ ಅತ್ಯಂತ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂದಿದ್ದಾರೆ.
ಲಾಲ್‌ಬಾಗ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ದಿನನಿತ್ಯ ಬೆಳಿಗ್ಗೆ 6:25 ಕ್ಕೆ ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:20 ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಈ ರೈಲಿನಲ್ಲಿ ಎರಡನೇ ದರ್ಜೆ ಕುಳಿತುಕೊಳ್ಳುವ ಸೀಟುಗಳು (2S) ಮತ್ತು ಎಸಿ ಚೇರ್ ಕಾರ್ (CC) ಲಭ್ಯವಿದ್ದು, ಎಸಿ ಕೋಚ್‌ನಲ್ಲಿ ಪ್ರಯಾಣಿಸುವವರಿಗೆ ಐಆರ್‌ಸಿಟಿಸಿ ಕಡೆಯಿಂದ ಆಹಾರ ಸರಬರಾಜು ಸೇವೆಯೂ (Catering Service) ಸಿಗಲಿದೆ. ವಾರಾಂತ್ಯದ ಪ್ರವಾಸ ಅಥವಾ ದಿಢೀರ್ ಪ್ರಯಾಣ ಮಾಡುವವರಿಗೆ ಇದು ಅತ್ಯುತ್ತಮ ಬಜೆಟ್ ಪ್ರಯಾಣದ ಆಯ್ಕೆಯಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.