
ಬೆಂಗಳೂರು (ಆ.26): ಒಂದೆಡೆ ಧರ್ಮಸ್ಥಳದಲ್ಲಿ ಎಷ್ಟೇ ಹುಡುಕಿದರೂ, ಚೆನ್ನಯ್ಯ ತೋರಿದ 17 ಸ್ಥಳಗಳಲ್ಲಿ ಜೆಸಿಬಿ, ಗುದ್ದಲಿ ಹಿಡಿದು ಗುಂಡಿ ಅಗೆದರೂ ಬಹುತೇಕ ಸ್ಥಳಗಳಲ್ಲಿ ಮಾನವನ ಮೂಳೆಗಳು ಸಿಕ್ಕಿರಲಿಲ್ಲ. ಇದೇ ಕಾರಣಕ್ಕಾಗಿ ಚೆನ್ನಯ್ಯನಿಗೆ ಎಸ್‌ಐಟಿ ಗ್ರಿಲ್ ಮಾಡುತ್ತಿದೆ. ಆದರೆ, ಬೆಂಗಳೂರಿನ ಪರಪ್ಪನ ಅಗ್ರಹಾರದ ಪ್ರದೇಶದಲ್ಲಿ ಕಸದ ಗುಂಡಿಯಲ್ಲಿ ಮೂಳೆಗಳು ಪತ್ತೆಯಾಗಿವೆ.
ಹೌದು, ಬೆಂಗಳೂರಿನ ಪರಪ್ಪನ ಅಗ್ರಹಾರ ಪ್ರದೇಶದಲ್ಲಿ ಕಸದಲ್ಲಿ ಮೂಳೆ ಕಂಡು ಜನರು ಆತಂಕ ಪಟ್ಟಿದ್ದಾರೆ. ಕಸ ಎಸೆಯುವ ಪ್ರದೇಶದಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿತ್ತು. ಇದನ್ನು ನೋಡು ಜನರು ಭಯಗೊಂಡಿದ್ದರು. ಬಳಿಕ ಪೊಲೀಸರಿಗೆ ಇದರ ಮಾಹಿತಿಯನ್ನು ತಿಳಿಸಲಾಗಿತ್ತು. ಸ್ಥಳಕ್ಕೆ ಬಂದ ಪರಪ್ಪನ ಅಗ್ರಹಾರ ಪೊಲೀಸರು ಸ್ಥಳವನ್ನು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ತನಿಖೆ ವೇಳೆ ಅಸ್ಥಿಪಂಜರದ ಅಸಲಿ ಕಹಾನಿ ಗೊತ್ತಾಗಿದೆ. ಅಧ್ಯಯನಕ್ಕಾಗಿ ಎಂಬಿಬಿಎಸ್ ವಿದ್ಯಾರ್ಥಿನಿ ಮನೆಗೆ ಅಸ್ತಿಪಂಜರ ತಂದಿದ್ದಳು. ಆದರೆ, ಮೂಟೆಯಲ್ಲಿದ್ದ ಅಸ್ತಿಪಂಜರವನ್ನು ವಿದ್ಯಾರ್ಥಿನಿ ತಂದೆ ಕಸದಲ್ಲಿ ಎಸೆದಿದ್ದರು. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೆಡಿಕಲ್ ಓದುತ್ತಿದ್ದ ವಿಧ್ಯಾರ್ಥಿನಿ ತಂದೆಯ ಎಡವಟ್ಟು ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳ ವಿಧ್ಯಾಭ್ಯಾಸಕ್ಕಾಗಿ ಮನೆಗೆ ಮೂಳೆಗಳನ್ನು ತಂದಿಡಲಾಗಿತ್ತು. ಮೂಳೆಗಳ ಅವಶ್ಯಕತೆ ಇಲ್ಲದ ಕಾರಣ ಕೆಲ ದಿನಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದರು. ಮಂಗಳವಾರ ಗೌರಿ ಹಬ್ಬ ಇದ್ದ ಕಾರಣ ಅದನ್ನ ತಂದು ಕಸಕ್ಕೆ ಎಸೆದು ಹೋಗಿದ್ದರು.
ಇಂದು ಮುಂಜಾನೆ ವಿದ್ಯಾರ್ಥಿನಿಯ ತಂದೆ ಮೂಳೆಗಳನ್ನ ತಂದು ಕಸಕ್ಕೆ ಎಸೆದು ಹೋಗಿದ್ದಾರೆ. ಈ ವೇಳೆ ಕಸದ ರಾಶಿ ಬಳಿ ಮನುಷ್ಯನ ಮೂಳೆಗಳನ್ನು ಕಂಡು ಜನ ಗಾಬರಿಯಾಗಿದ್ದರು. ಪೊಲೀಸರು ಬಂದ ಬಳಿಕ ಇಲ್ಲಿ ಮೂಳೆಗಳನ್ನ ತಾನೇ ಹಾಕಿರುವುದಾಗಿ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮೂಳೆಗಳನ್ನ ಹಾಕಿ ವ್ಯಕ್ತಿ ಆತಂಕ ಸೃಷ್ಟಿ ಮಾಡಿದ್ದ ಎನ್ನಲಾಗಿದೆ.