
ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರದ ಜೀವನಾಡಿ ನಮ್ಮ ಮೆಟ್ರೋ (Namma metro) ಮತ್ತಷ್ಟು ವಿಸ್ತರಣೆ ಆಗ್ತಿರೋದು ಹೆಮ್ಮೆಯ ವಿಚಾರ. ಆದರೆ, ಬಿಎಂಆರ್‍ಸಿಎಲ್‌ನ (Bangalore Metro Rail Corporation Limited) ವಿಳಂಬ ನೀತಿಗೆ ಬೇಸತ್ತ ಜನರು ವಿನೂತನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ.
ಹೌದು, ಕಳೆದ ಹಲವು ತಿಂಗಳುಗಳಿಂದ 'ಪಿಂಕ್ ಲೈನ್'ನಲ್ಲಿ ಮೆಟ್ರೋ ಓಡಾಡುತ್ತೆ ಎಂದು ರೀಲು ಬಿಡಲಾಗುತ್ತಿದೆ. ಒಂದೆಲ್ಲ ಒಂದು ಕಾರಣಗಳಿಂದಾಗಿ ಉದ್ಘಾಟನಾ ಸಮಾರಂಬ ಮುಂದೂಡಿಕೆ ಆಗ್ತಿದೆ. ಇದೇ ಕಾರಣಕ್ಕೆ ಬೇಸತ್ತ ಸ್ಥಳೀಯ ನಿವಾಸಿಗಳು ಸಾಂಕೇತಿಕವಾಗಿ ಉದ್ಘಾಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಬೇಗ ಜನರ ಸೇವೆಗೆ ನೀಡುಂತೆ ಬಿಎಂಆರ್‍ಸಿಎಲ್‌ಗೆ ಒತ್ತಾಯ ಮಾಡಿದ್ದಾರೆ. ವಿಳಂಬ ನೀತಿ ವಿರುದ್ಧ ವಿನೂತನವಾಗಿ ಪ್ರತಿಭಟಿಸಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಪಿಂಕ್ ಲೇನ್‌ಗೆ ಆಗಮಿಸಿರುವ ಬನ್ನೇರುಘಟ್ಟದ ಹಿರಿಯ ನಾಗರಿಕರು ಹಾಗೂ ಕೆಲ ಯುವಕರು ಮತ್ತು ಮಕ್ಕಳು ಪಿಂಕ್ ಕಲರ್ ಬಲೂನ್ ಹಿಡಿದು ನಿಂತಿದ್ದಾರೆ. ನಂತರ ಪಿಂಕ್ ರಿಬ್ಬನ್ ಕಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಪದೇ ಪದೆ ವಿಳಂಬ ಆಗುತ್ತಿರೋದನ್ನ ಅಣುಕು ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು.. ಯಾವುದೇ ಗಣ್ಯರಿಗೆ ಕಾಯದೇ ಬೆಂಗಳೂರಿನ ಜನರು ತಮ್ಮ ಮೆಟ್ರೋವನ್ನು ಉದ್ಘಾಟನೆ ಮಾಡಿಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
ಬಿಎಂಆರ್ಸಿಎಲ್ ಎಲಿವೇಟೆಡ್ ವಿಭಾಗದಲ್ಲಿ ಅಕ್ಟೋಬರ್ ಎರಡನೇ ವಾರದಿಂದ ವಾಣಿಜ್ಯ ಸೇವೆ ಆರಂಭಿಸಲು ನಿರ್ಧರಿಸಿದೆ. ಇಲ್ಲಿ ದಟ್ಟಣೆ ಅವಧಿಯಲ್ಲಿ 6 ಹಾಗೂ ಸಾಮಾನ್ಯ ಸಮಯದಲ್ಲಿ 10 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಗುಲಾಬಿ ಮಾರ್ಗದ ಎಲಿವೇಟೆಡ್ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಸಾಗಲಿದೆ. ಕಾಳೇನ ಅಗ್ರಹಾರ, ಹುಳಿಮಾವು, ಜೆಪಿ ನಗರ 4 ನೇ ಹಂತ, ಐಐಎಂಬಿ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಎಂಬ ಆರು ನಿಲ್ದಾಣಗಳನ್ನು ಹೊಂದಿದೆ. ಇದರ ಉದ್ಘಾಟನೆಯೊಂದಿಗೆ ಬೆಂಗಳೂರು ಮೆಟ್ರೋ ಜಾಲವು 103.6 ಕಿ.ಮೀ.ಗೆ ವಿಸ್ತರಿಸಲಿದೆ.
ಪಿಂಕ್ ಲೈನ್ ಕಳೆದ ಆರು ತಿಂಗಳಿಂದ ಉದ್ಘಾಟನೆ ಆಗಲಿದೆ ಎಂದು ಹೇಳಿಕೊಂಡು ಬರುಲಾಗುತ್ತಿದೆ. ಆದರೆ ಉದ್ಘಾಟನೆ ಆಗಿರಲಿಲ್ಲ. ರೈಲುಗಳಿಗೆ ಶಾಸನಬದ್ಧ ಅನುಮೋದನೆ ಪಡೆಯೋದು ವಿಳಂಬಕ್ಕೆ ಕಾರಣವಾಗಿತ್ತು. 7.5 ಕಿ.ಮೀ ಮಾರ್ಗ ಇದಾಗಿದ್ದು, ಆರಂಭದಲ್ಲಿ ಆರು ರೈಲುಗಳನ್ನು ಕಾರ್ಯಾಚರಣೆಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಂಸ್ಥೆ ಪ್ಲಾನ್ ಮಾಡಿದೆ. ಇತ್ತೀಚೆಗೆ ಬಿಎಂಆರ್‌ಸಿಎಲ್ ಸಿಗ್ನಲಿಂಗ್ ಟೆಸ್ಟ್ ನಡೆಸಿ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಾದ (ದಕ್ಷಿಣ ವಲಯ) ವಿ. ವೆಂಕಟಸುಬ್ರಮಣಿಯನ್ ಅವರನ್ನು ಭೇಟಿಯಾಗಿದ್ದರು. ಸುರಕ್ಷತಾ ತಪಾಸಣೆಗಾಗಿ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ತಪಾಸಣೆಗೂ ಮುನ್ನ ಸಿಎಂಆರ್‌ಎಸ್ ಸಮಗ್ರ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದೆ.
ಇನ್ನು, CMRS ಎರಡು ದಿನಗಳ ತಪಾಸಣೆ ನಡೆಸಲಿದೆ. ಕೊತ್ತನೂರು ಡಿಪೋ, ಬನ್ನೇರುಘಟ್ಟ ರಸ್ತೆಯ ಆರು ನಿಲ್ದಾಣಗಳು, ಮೇಲ್ಸೇತುವೆ ಹಳಿಗಳು ಮತ್ತು ಇತರ ವ್ಯವಸ್ಥೆಗಳ ಮೋಟಾರ್ ಟ್ರಾಲಿ ಪರಿಶೀಲನೆ ಕೈಗೊಳ್ಳಲಿದೆ. ಸಿಎಂಆರ್‌ಎಸ್ ಅನುಮೋದನೆ ಸಿಕ್ಕ ತಕ್ಷಣ ಪ್ರಯಾಣಿಕರ ಸೇವೆಗೆ ಪಿಂಕ್ ಲೇನ್ ಸಿದ್ಧವಾಗಲಿದೆ. ಫ್ರೆಂಚ್ ಮೂಲದ 'ಆಲ್ಸ್ಟೋಮ್' ಸಂಸ್ಥೆ ಸಲ್ಲಿಸಿರುವ ವರದಿಯ ಪ್ರಕಾರ, ಈ ಮೆಟ್ರೋ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆ ಮತ್ತು ತಾಂತ್ರಿಕ ಸಂಪರ್ಕಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಬೆಂಗಳೂರಿನ 'ಜೊಡೋವಾ ಟೆಕ್ನಾಲಜೀಸ್' ಕಂಪನಿಯು ಸುರಕ್ಷತಾ (ISA) ಪ್ರಮಾಣಪತ್ರ ನೀಡಿದೆ. ಇನ್ನು ಈ ಮಾರ್ಗಕ್ಕಾಗಿ ಹೊರಗಿನಿಂದ ತರಲಾದ ರೈಲುಗಳನ್ನು ರೈಲ್ವೆ ಸುರಕ್ಷತಾ ಆಯುಕ್ತರ (CMRS) ತಂಡವು ಕಳೆದ ಆಗಸ್ಟ್ 12 ರಿಂದ 14 ರವರೆಗೆ ಪರಿಶೀಲನೆ ನಡೆಸಿತ್ತು.