ಏರ್ಪೋರ್ಟ್ ಸಮೀಪ ಉತ್ತರ ಬೆಂಗಳೂರಿನಲ್ಲಿ ಪ್ರೆಸ್ಟೀಜ್ ಐಷಾರಾಮಿ ವಸತಿ ಯೋಜನೆ, ₹2850 ಕೋಟಿ ಆದಾಯ ನಿರೀಕ್ಷೆ!

Published : Sep 25, 2026, 05:53 PM IST
Real estate

ಸಾರಾಂಶ

ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿ 'ಪ್ರೆಸ್ಟೀಜ್ ಪಾರ್ಕ್‌ಲೇನ್' ಎಂಬ ನೂತನ ವಸತಿ ಯೋಜನೆಯನ್ನು ಪ್ರಾರಂಭಿಸಿದೆ. 11.91 ಎಕರೆ ವಿಸ್ತೀರ್ಣದ ಈ ಯೋಜನೆಯು ₹1,750 ಕೋಟಿ ಮೌಲ್ಯ ಹೊಂದಿದ್ದು, 1,788 ಮನೆಗಳನ್ನು ಒಳಗೊಂಡಿದೆ. ಪರಿಸರ ಸ್ನೇಹಿ ವಿನ್ಯಾಸ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ 2030ರ ವೇಳೆಗೆ ಇದು ಪೂರ್ಣಗೊಳ್ಳಲಿದೆ.

ದೇಶದ ಮುಂಚೂಣಿ ರಿಯಲ್ ಎಸ್ಟೇಟ್ ಸಂಸ್ಥೆಯಾದ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್, ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ನೂತನ ವಸತಿ ಯೋಜನೆಯಾದ 'ಪ್ರೆಸ್ಟೀಜ್ ಪಾರ್ಕ್‌ಲೇನ್' ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಎರಡು ಹೊಸ ವಸತಿ ಯೋಜನೆಗಳ ಮೂಲಕ ಒಟ್ಟು ₹2,850 ಕೋಟಿ ಆದಾಯವನ್ನು ನಿರೀಕ್ಷಿಸುತ್ತಿರುವ ಕಂಪನಿಗೆ ಈ ಯೋಜನೆ ಅತ್ಯಂತ ಪ್ರಮುಖವಾಗಿದೆ. ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್ ಹಂತ 2 ರಲ್ಲಿ ನೆಲೆಗೊಂಡಿರುವ ಈ ಯೋಜನೆಯು ಸುಮಾರು ₹1,750 ಕೋಟಿ ಒಟ್ಟು ಅಭಿವೃದ್ಧಿ ಮೌಲ್ಯವನ್ನು (GDV) ಹೊಂದಿದ್ದು, ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಕಂಪನಿಯ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಲಿದೆ.

ಈ ಯೋಜನೆಯು ಒಟ್ಟು 11.91 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಸರಿಸುಮಾರು 1.7 ಮಿಲಿಯನ್ ಚದರ ಅಡಿ ಮಾರಾಟ ಮಾಡಬಹುದಾದ ಪ್ರದೇಶವನ್ನು ಹೊಂದಿದೆ. ಒಂಬತ್ತು ಎತ್ತರದ ಗೋಪುರಗಳಲ್ಲಿ ಮೂರು ನೆಲಮಾಳಿಗೆಗಳು, ಒಂದು ನೆಲ ಮಹಡಿ ಮತ್ತು 24 ಮೇಲಿನ ಮಹಡಿಗಳನ್ನು ಒಳಗೊಂಡಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ವರ್ಗದ ಮನೆ ಖರೀದಿದಾರರ ಅಗತ್ಯಗಳನ್ನು ಪೂರೈಸಲು ಇಲ್ಲಿ ಒಟ್ಟು 1,788 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳಲ್ಲಿ 1, 2 ಮತ್ತು 3 BHK ವಸತಿ ಅಪಾರ್ಟ್‌ಮೆಂಟ್‌ ಇರಲಿದೆ. ಈ ಯೋಜನೆಯು ಕರ್ನಾಟಕ ರೇರಾ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು, ಡಿಸೆಂಬರ್ 31, 2030 ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಯೋಜನೆ ಹಾಕಲಾಗಿದೆ.

ಭೌಗೋಳಿಕವಾಗಿ 'ಪ್ರೆಸ್ಟೀಜ್ ಪಾರ್ಕ್‌ಲೇನ್' ಅತ್ಯಂತ ಬೇಡಿಕೆಯ ಸ್ಥಳದಲ್ಲಿದೆ. ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯಿಂದ (STRR) ಕೇವಲ ಎರಡು ನಿಮಿಷಗಳ ಅಂತರದಲ್ಲಿರುವ ಈ ಯೋಜನೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಹತ್ತಿರದಲ್ಲಿದೆ. ದೇವನಹಳ್ಳಿಯ ಕೆಐಎಡಿಬಿ ಹೈಟೆಕ್, ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ವಲಯದಲ್ಲಿ ಪ್ರಮುಖ ಏರೋಸ್ಪೇಸ್, ರಕ್ಷಣೆ, ತಂತ್ರಜ್ಞಾನ ಹಾಗೂ ಉತ್ಪಾದನಾ ಕಂಪನಿಗಳು ಬೆಳೆದುನಿಂತಿರುವುದರಿಂದ, ಈ ಪ್ರದೇಶವು ನಗರದ ಪ್ರಮುಖ ಕೈಗಾರಿಕಾ ಮತ್ತು ಉದ್ಯೋಗ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

ಪರಿಸರ ಸ್ನೇಹಿ ವಿನ್ಯಾಸ

ಪ್ರೆಸ್ಟೀಜ್ ಪಾರ್ಕ್‌ಲೇನ್ ಯೋಜನೆಯು ಮುಕ್ತ ವಾತಾವರಣ ಹಾಗೂ ಸಮುದಾಯ ಆಧಾರಿತ ಜೀವನಶೈಲಿಗೆ ಹೆಚ್ಚಿನ ಒತ್ತು ನೀಡಿದೆ. ಯೋಜನೆಯ ಒಟ್ಟು ಪ್ರದೇಶದಲ್ಲಿ ಸುಮಾರು 4 ಎಕರೆ ಜಾಗವನ್ನು ಹಸಿರು ಭೂದೃಶ್ಯಕ್ಕಾಗಿ ಕಾಯ್ದಿರಿಸಲಾಗಿದೆ. ಜೊತೆಗೆ 30,000 ಚದರ ಅಡಿ ವಿಸ್ತೀರ್ಣದ ಬೃಹತ್ ಕ್ಲಬ್‌ಹೌಸ್ ಅನ್ನು ರೂಪಿಸಲಾಗಿದ್ದು, ಇದರಲ್ಲಿ ವ್ಯಾಪಾರ ಕೇಂದ್ರ, ಅತಿಥಿ ಕೊಠಡಿಗಳು, ಎರಡು ಡಬಲ್-ಹೈಟ್ ಬ್ಯಾಡ್ಮಿಂಟನ್ ಕೋರ್ಟ್‌ಗಳು, ಅತ್ಯಾಧುನಿಕ ಜಿಮ್, ಸ್ಪಾ, ಶಿಶುವಿಹಾರ, ಔಷಧಾಲಯ, ಸೂಪರ್ ಮಾರ್ಕೆಟ್, ಸಲೂನ್, ಪಾರ್ಟಿ ಹಾಲ್ ಮತ್ತು ಮೇಲ್ಛಾವಣಿಯ ವೀಕ್ಷಣಾ ಡೆಕ್ ಸೇರಿದಂತೆ ಹತ್ತಾರು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಜುಕೊಳಗಳು, ವಿವಿಧ ಕ್ರೀಡಾ ಕೋರ್ಟ್‌ಗಳು, ಜಾಗಿಂಗ್ ಟ್ರ್ಯಾಕ್, ಮಕ್ಕಳ ಆಟದ ಪ್ರದೇಶಗಳು ಮತ್ತು ಸಮುದಾಯ ಕೂಟಗಳಿಗಾಗಿ ಮುಕ್ತ ಸ್ಥಳಗಳು ಕೂಡ ಇರಲಿದೆ.

ಉತ್ತರ ಬೆಂಗಳೂರಿನಲ್ಲಿ ಮೂಲಸೌಕರ್ಯ ಜಾಲ ಬೆಳೆಯುತ್ತಿದ್ದಂತೆ, ಪ್ರೀಮಿಯಂ ಹಾಗೂ ಉನ್ನತ ಮಟ್ಟದ ವಸತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 25, 2026 ರಂದು ಚಾಲನೆ ನೀಡಲಾದ ಈ ಯೋಜನೆಯು ಮುಂದಿನ ದಿನಗಳಲ್ಲಿ ಉದ್ಯೋಗ ಕೇಂದ್ರಗಳ ಸೌಲಭ್ಯ ಬಯಸುವ ಮನೆ ಖರೀದಿದಾರರು, ಬಾಡಿಗೆದಾರರು, ಲಕ್ಷುರಿ ಜೀವನ ನಡೆಸುವವರನ್ನು ತಲುಪುವ ಗುರಿ ಹೊಂದಿದೆ. ದೇವನಹಳ್ಳಿಯ ನಿರಂತರ ವಾಣಿಜ್ಯ ಬೆಳವಣಿಗೆಯು ಪ್ರೆಸ್ಟೀಜ್ ಸಂಸ್ಥೆಯ ಭವಿಷ್ಯದ ಆದಾಯದ ಹರಿವಿಗೆ ದೊಡ್ಡ ಬೆಂಬಲ ನೀಡಲಿದೆ.

PREV
Read more Articles on
click me!

Recommended Stories

'ನನ್ನ ಬ್ರೈನ್ ಕ್ರ್ಯಾಶ್ ಆಗಿ ರೀಸ್ಟಾರ್ಟ್ ಆಯ್ತು' ಪುಣೆಯ 3BHK ಫ್ಲಾಟ್‌ನ ಬಾಡಿಗೆ ರೇಟ್ ಕೇಳಿ ಬೆಂಗಳೂರು ಟೆಕ್ಕಿ ಸೈಕ್
ಭಾರತದ ಟೆಕ್ ಸ್ಟಾರ್ಟ್‌ಅಪ್ ಫಂಡಿಂಗ್ 2026: ದೇಶದ ಎಲ್ಲಾ ಪ್ರತಿಸ್ಪರ್ಧಿ ನಗರ ಹಿಂದಿಕ್ಕಿ ಬೆಂಗಳೂರಿಗೆ ಅಗ್ರಸ್ಥಾನ!