
ಬೆಂಗಳೂರು (ಆ.24): ಹೊರ ವರ್ತುಲ ರಸ್ತೆಯಲ್ಲಿ (ORR) ನಿರಂತರವಾಗಿ ಎದುರಾಗುತ್ತಿರುವ ತೀವ್ರ ಸಂಚಾರ ದಟ್ಟಣೆಗೆ (Traffic Congestion) ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಸಂಚಾರ ಪೊಲೀಸ್ (BTP) ವಿಭಾಗವು ಪ್ರಮುಖ ಯೋಜನೆಯೊಂದನ್ನು ರೂಪಿಸಿದೆ. ಪ್ರಮುಖ ರಸ್ತೆಯಲ್ಲಿಯೇ (Main Carriageway) ಬಿಎಂಟಿಸಿ (BMTC) ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ-ಇಳಿಸುವುದೇ ಈ ದಟ್ಟಣೆಗೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಗುರುತಿಸಲಾಗಿದ್ದು, ಇನ್ಮುಂದೆ ಬಸ್ ನಿಲುಗಡೆಗಳನ್ನು ಬೃಹತ್ ಟೆಕ್ ಪಾರ್ಕ್‌ಗಳ ಆವರಣದ ಒಳಗೇ ಸ್ಥಳಾಂತರಿಸಲು ಪೊಲೀಸರು ಪ್ರಸ್ತಾಪಿಸಿದ್ದಾರೆ.
ಈ ಹೊಸ ಪ್ರಸ್ತಾವನೆಯ ಕುರಿತು ಮಾಹಿತಿ ನೀಡಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್ ರೆಡ್ಡಿ, ಪ್ರಮುಖ ರಸ್ತೆಯಲ್ಲಿ ಬಸ್‌ಗಳು ದಿಢೀರನೆ ನಿಲ್ಲುವುದರಿಂದ ಹಿಂದಿನ ವಾಹನಗಳು ಶೀಘ್ರವಾಗಿ ಬ್ರೇಕ್ ಹಾಕಬೇಕಾಗುತ್ತದೆ. "ಬಸ್‌ಗಳು ಮುಖ್ಯ ರಸ್ತೆಯ ಜಾಗವನ್ನು ಅತಿಕ್ರಮಿಸುವುದರಿಂದ ಪೀಕ್ ಅವರ್‌ಗಳಲ್ಲಿ (Peak Hours) ಸತತವಾಗಿ ಹಲವು ಲೇನ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅಷ್ಟೇ ಅಲ್ಲದೆ, ಟೆಕ್ ಪಾರ್ಕ್ ಗೇಟ್‌ಗಳ ಬಳಿ ಪಾದಾಚಾರಿಗಳು, ಬಸ್‌ಗಳು ಮತ್ತು ವೇಗವಾಗಿ ಚಲಿಸುವ ಖಾಸಗಿ ವಾಹನಗಳು ಕಿರಿದಾದ ಜಾಗದಲ್ಲೇ ಸಂಚರಿಸುವುದರಿಂದ ಅಪಘಾತದ ಅಪಾಯವೂ ಹೆಚ್ಚಿರುತ್ತದೆ" ಎಂದು ಅವರು ವಿವರಿಸಿದ್ದಾರೆ.
ಮುಖ್ಯ ರಸ್ತೆಯಲ್ಲಿ ಬಸ್ ನಿಲುಗಡೆಯನ್ನು ಸಂಪೂರ್ಣವಾಗಿ ತಡೆಯಲು ಸಂಚಾರ ಪೊಲೀಸರು ಬಿಎಂಟಿಸಿ ಮತ್ತು ಟೆಕ್ ಪಾರ್ಕ್ ಆಡಳಿತ ಮಂಡಳಿಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿರುವ ಟೆಕ್ ಪಾರ್ಕ್‌ಗಳು ತಮ್ಮ ಖಾಸಗಿ ಆವರಣದ ಒಳಗೇ ಬಿಎಂಟಿಸಿ ಬಸ್‌ಗಳಿಗಾಗಿ ಪ್ರತ್ಯೇಕ 'ಬಸ್ ಬೇ' (Bus Bays) ನಿರ್ಮಿಸಲು ಜಾಗವನ್ನು ಮೀಸಲಿಡಬೇಕು. ಕಚೇರಿ ಕಟ್ಟಡಗಳಿಗೆ ಬಸ್ ನಿಲ್ದಾಣದಿಂದ ಸುರಕ್ಷಿತವಾಗಿ ಸಂಪರ್ಕ ಕಲ್ಪಿಸುವ ಪಾದಚಾರಿ ಮಾರ್ಗಗಳು (Pedestrian Walkways) ಹಾಗೂ ಸ್ಪಷ್ಟವಾದ ದಾರಿ ಸೂಚಕ ಫೈನಾಲ್ ಬೋರ್ಡ್‌ಗಳನ್ನು ಅಳವಡಿಸಬೇಕು.
ನಿಯಮಿತ ನಗರ ಸಾರಿಗೆ ಬಸ್‌ಗಳನ್ನು ಒಪ್ಪಂದ ಮಾಡಿಕೊಂಡ ಟೆಕ್ ಪಾರ್ಕ್‌ಗಳ ಆಂತರಿಕ ರಸ್ತೆಗಳ (Internal Campus Loops) ಮೂಲಕ ಸಂಚರಿಸುವಂತೆ ಮಾರ್ಗ ಬದಲಾಯಿಸುವುದು. ದೊಡ್ಡ ಟೆಕ್ ಪಾರ್ಕ್‌ಗಳ ಒಳಗಿರುವ ಪ್ರತ್ಯೇಕ ಆಫೀಸ್ ಬ್ಲಾಕ್‌ಗಳು ಮತ್ತು ಬೃಹತ್ ಟವರ್‌ಗಳಿಗೆ ಆಂತರಿಕ ಶಟಲ್ (Intra-campus connectivity) ಸೇವೆಯನ್ನು ವಿಸ್ತರಿಸುವುದು.
ಡಬ್ಲ್ಯೂಆರ್‌ಐ ಇಂಡಿಯಾ (WRI India) ಫೆಲೋ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, ಈ ಪ್ರಸ್ತಾವನೆಯು ಬೆಂಗಳೂರಿನ ಮಳೆಗಾಲ ಮತ್ತು ಬೇಸಿಗೆಯ ಸಮಯದಲ್ಲಿ ನೌಕರರಿಗೆ ಅತ್ಯಂತ ಅನುಕೂಲಕರವಾಗಲಿದೆ ಎಂದಿದ್ದಾರೆ. ಬೃಹತ್ ಟೆಕ್ ಕ್ಯಾಂಪಸ್‌ಗಳಲ್ಲಿ ನೌಕರರು ಪ್ರಸ್ತುತ ರಸ್ತೆಬದಿಯ ಬಸ್ ನಿಲ್ದಾಣಗಳಿಂದ ತಮ್ಮ ಕಚೇರಿಗಳಿಗೆ ತಲುಪಲು ಸುಡುವ ಬಿಸಿಲು ಅಥವಾ ಮಳೆಯಲ್ಲೇ ಸಾಕಷ್ಟು ದೂರ ನಡೆಯಬೇಕಾಗಿದೆ. ಬಸ್‌ಗಳು ನೇರವಾಗಿ ಆಫೀಸ್ ಕಟ್ಟಡಗಳ ಬಳಿಗೇ ಬಂದರೆ, ನೌಕರರಿಗೆ ಅನುಕೂಲವಾಗಿ ಅವರು ಸಾರ್ವಜನಿಕ ಸಾರಿಗೆ ಮತ್ತು ಮೆಟ್ರೋ ಫೀಡರ್ ಬಸ್‌ಗಳನ್ನು ಹೆಚ್ಚು ಬಳಸಲು ಪ್ರೋತ್ಸಾಹ ಸಿಗುತ್ತದೆ ಎಂದಿದ್ದಾರೆ.
ಹೆಚ್ಚಿನ ಟೆಕ್ ಪಾರ್ಕ್‌ಗಳು ಈಗಾಗಲೇ ಖಾಸಗಿ ಕಂಪನಿ ಬಸ್‌ಗಳಿಗೆ ಆವರಣದೊಳಗೆ ಬರಲು ಅನುಮತಿ ನೀಡಿವೆ. ಅದೇ ಸೌಲಭ್ಯವನ್ನು ಸಾರ್ವಜನಿಕ ಬಿಎಂಟಿಸಿ ಬಸ್‌ಗಳಿಗೂ ವಿಸ್ತರಿಸುವುದು ತರ್ಕಬದ್ಧ ಮತ್ತು ಪ್ರಾಯೋಗಿಕ ಹೆಜ್ಜೆಯಾಗಿದೆ. ಅಲ್ಲದೆ, ಪೀಕ್ ಅವರ್‌ನಲ್ಲಿ ಟೆಕ್ ಪಾರ್ಕ್‌ಗಳಿಗೆ ನಿಯೋಜಿಸುವ ಬಸ್‌ಗಳನ್ನು ಪೀಕ್ ಇಲ್ಲದ ಸಮಯದಲ್ಲಿ ಇತರ ರಸ್ತೆಗಳಿಗೆ ಬಳಸಿ ಸಂಪನ್ಮೂಲವನ್ನು ಸರಿಯಾಗಿ ನಿರ್ವಹಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಆದರೆ, ಈ ಯೋಜನೆಯನ್ನು ಬಿಡಿ ಪರಿಹಾರವಾಗಿ ನೋಡಬಾರದು ಎಂದು ಸಾರಿಗೆ ಹೋರಾಟಗಾರರು ಎಚ್ಚರಿಸಿದ್ದಾರೆ. ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ (BBTV) ಶಾಹೀನ್ ಶಾಸಾ ಮಾತನಾಡಿ, ಟೆಕ್ ಪಾರ್ಕ್ ಒಳಗಡೆ ಬಸ್ ಬೇ ಮಾಡುವುದು ತಕ್ಷಣದ ಪರಿಹಾರದಂತೆ ಕಾಣಬಹುದು. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಂತಹ ಬಿಡಿ ಪರಿಹಾರದಿಂದ ಸುಧಾರಿಸುವುದಿಲ್ಲ. ನಮ್ಮ ಬಸ್‌ಗಳು ಇಡೀ ನಗರದ ಎಲ್ಲ ವರ್ಗದ ಜನರಿಗೆ ಸೇವೆ ಸಲ್ಲಿಸುತ್ತವೆ," ಎಂದಿದ್ದಾರೆ.
ಕೇವಲ ಟೆಕ್ ಪಾರ್ಕ್‌ಗಳಿಗೆ ಹೆಚ್ಚು ಬಸ್‌ಗಳನ್ನು ನಿಯೋಜಿಸುವುದರಿಂದ ನಗರದ ಇತರ ಭಾಗಗಳಲ್ಲಿ ಬಸ್ ಕೊರತೆ ಎದುರಾಗಬಹುದು. ಕೇವಲ ಪ್ರತ್ಯೇಕ ಎನ್‌ಕ್ಲೇವ್‌ಗಳನ್ನು (Enclaves) ಸೃಷ್ಟಿಸುವುದಕ್ಕಿಂತ, ಒಟ್ಟು ಬಸ್‌ಗಳ ಸಂಖ್ಯೆಯನ್ನು (Fleet Size) ಹೆಚ್ಚಿಸಿ, ನಗರದಾದ್ಯಂತ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದೇ ಅಂತಿಮ ಮೈಲಿ ಸಂಪರ್ಕದ (Last-mile issues) ನೈಜ ಪರಿಹಾರ ಎಂದಿದ್ದಾರೆ.