ಡಿಸಿಪಿಯನ್ನೂ ಬಿಡಲಿಲ್ಲ ದುಷ್ಟರು.. ಬೆಂಗಳೂರಲ್ಲಿ ವಂಚನೆಯ ಜಾಲ ಹೆಂಗಿದೆ ಅಂದ್ರೆ..

Published : Jul 14, 2026, 12:01 PM IST
dcp narayana

ಸಾರಾಂಶ

ಆನ್‌ಲೈನ್ ವಂಚನೆ ಪ್ರಕರಣಗಳು ಇತ್ತೀಚೆಗಿನ ದಿನಗಳಲ್ಲಿ ತೀರಾಸಾಮಾನ್ಯವಾಗಿ ಬಿಟ್ಟಿದೆ. ಜನ ಎಷ್ಟೇ ಎಚ್ಚೆತ್ತುಕೊಂಡಿದ್ದರೂ, ಖದೀಮರು ಇನ್ಯಾವುದೋ ರೂಪದಲ್ಲಿ ಯಾಮಾರಿಸ್ತಿದ್ದಾರೆ. ಇದೀಗ ಐಪಿಎಸ್ ಅಧಿಕಾರಿ ಒಬ್ಬರ ಹೆಸರಲ್ಲೇ ಮಹಾವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.

ಬೆಂಗಳೂರು: ಸೈಬರ್ ಲೋಕದ ಖದೀಮರು ದಿನದಿಂದ ದಿನಕ್ಕೆ ಅದೆಷ್ಟು ಧೈರ್ಯವಂತರಾಗುತ್ತಿದ್ದಾರೆ ಎಂದರೆ ಈಗ ನೇರವಾಗಿ ಕಾನೂನು ರಕ್ಷಕರ ಹೆಸರನ್ನೇ ಬಳಸಿಕೊಂಡು ಜನರಿಗೆ ಟೋಪಿ ಹಾಕಲು ಶುರು ಮಾಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ (DCP) ಅವರ ಹೆಸರನ್ನೇ ಬಳಸಿ ವಂಚನೆ ಮಾಡುತ್ತಿರುವ ಪ್ರಕರಣ ಈಗ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಐಪಿಎಸ್ ಹೆಸರಲ್ಲಿ ಮೋಸ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿದ್ದಾರೆ. ಐಪಿಎಸ್ ಅಧಿಕಾರಿಯ ಫೋಟೋ ಮತ್ತು ಹೆಸರನ್ನು ಬಳಸಿ ಜನರನ್ನು ನಂಬಿಸುತ್ತಿರುವ ಈ ವಂಚಕರು, ಅಸಲಿ ಅಧಿಕಾರಿಯೇ ಈ ಪೋಸ್ಟ್ ಹಾಕುತ್ತಿದ್ದಾರೆ ಎನ್ನುವಂತೆ ಬಿಂಬಿಸುತ್ತಿದ್ದಾರೆ.

ಈ ನಕಲಿ ಖಾತೆಯ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಅತಿ ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ಪೋಸ್ಟ್ ಹಾಕಲಾಗುತ್ತಿದೆ. ಬಳಸಿದ ಫ್ರಿಡ್ಜ್, ವಾಷಿಂಗ್ ಮಿಷನ್ ಹಾಗೂ ಇತರ ಗೃಹೋಪಯೋಗಿ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ ಎಂದು ನಂಬಿಸಿ ಸಾರ್ವಜನಿಕರನ್ನು ಸೆಳೆಯಲಾಗುತ್ತಿದೆ. ಇದನ್ನು ನಂಬಿ ವಸ್ತುಗಳನ್ನು ಖರೀದಿಸಲು ಮುಂದಾಗುವವರಿಂದ ಯುಪಿಐ (UPI) ಮೂಲಕ ಹಣ ಪಡೆದು ನಂತರ ವಂಚಕರು ಪರಾರಿಯಾಗುತ್ತಿದ್ದಾರೆ.

ವಿಷಯ ಏನೆಂದರೆ, ಈ ಸಂಬಂಧ ಮೇ ತಿಂಗಳಲ್ಲೇ ಪ್ರಕರಣ ದಾಖಲಾಗಿತ್ತು. ಆದರೂ ಖದೀಮರು ಮಾತ್ರ ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಕಳೆದ ಎರಡು-ಮೂರು ದಿನಗಳಲ್ಲಿ ಸುಮಾರು 7 ಜನರು ಈ ನಕಲಿ ಖಾತೆಯನ್ನು ನಂಬಿ ಹಣ ಕಳೆದುಕೊಂಡಿದ್ದಾರೆ. ಒಬ್ಬೊಬ್ಬರಿಂದ 20 ರಿಂದ 30 ಸಾವಿರ ರೂಪಾಯಿಗಳವರೆಗೆ ಹಣ ಲೂಟಿ ಮಾಡಲಾಗಿದೆ.

ಸ್ವತಃ ವಿಡಿಯೋ ಮಾಡಿ ಎಚ್ಚರಿಸಿದ ಡಿಸಿಪಿ

ತಮ್ಮ ಹೆಸರಿನಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಸ್ನೇಹಿತರು ಮಾಹಿತಿ ನೀಡಿದ ತಕ್ಷಣ ಎಚ್ಚೆತ್ತ ಡಿಸಿಪಿ ಎಂ.ನಾರಾಯಣ ಅವರು, ಸಾರ್ವಜನಿಕರ ಜಾಗೃತಿಗಾಗಿ ಸ್ವತಃ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಲ್ಲಿ ನಡೆಯುತ್ತಿರುವ ಇಂತಹ ಯಾವುದೇ ವ್ಯವಹಾರಗಳನ್ನು ನಂಬಬೇಡಿ, ಹಣ ಕಳುಹಿಸಿ ಮೋಸ ಹೋಗಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿರುವ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಸಾಮಾನ್ಯರ ಪಾಡು ಏನು?

ಬೆಂಗಳೂರಿನಂತಹ ಮಹಾನಗರದಲ್ಲಿ ಒಬ್ಬ ಡಿಸಿಪಿ ದರ್ಜೆಯ ಅಧಿಕಾರಿಯ ಹೆಸರನ್ನೇ ಬಳಸಿ ವಂಚನೆ ಮಾಡಲಾಗುತ್ತಿದೆ ಎಂದರೆ, ಸೈಬರ್ ಕ್ರಿಮಿನಲ್‌ಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆಯೇ? ದೊಡ್ಡ ಅಧಿಕಾರಿಗಳ ಹೆಸರನ್ನೇ ಇಷ್ಟು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳುವ ಈ ಖದೀಮರ ಜಾಲಕ್ಕೆ ಸಾಮಾನ್ಯ ಜನರು ಬಲಿಯಾಗುವುದು ಎಷ್ಟು ಸುಲಭ ಎಂಬುದು ಈಗಿನ ಆತಂಕದ ಸಂಗತಿ. ಸೋಷಿಯಲ್ ಮೀಡಿಯಾದಲ್ಲಿ ಯಾರೇ ವಸ್ತುಗಳನ್ನು ಮಾರಾಟಕ್ಕಿಟ್ಟರೂ, ಹಣ ಪಾವತಿಸುವ ಮುನ್ನ ಪರಿಶೀಲಿಸಿ. ಅದರಲ್ಲೂ ಪೊಲೀಸ್ ಅಧಿಕಾರಿಗಳು ಅಥವಾ ಸೆಲೆಬ್ರಿಟಿಗಳ ಹೆಸರಿನಲ್ಲಿ ಬರುವ ಇಂತಹ 'ಆಫರ್'ಗಳ ಬಗ್ಗೆ ಎಚ್ಚರವಿರಲಿ. ಅಪರಿಚಿತ ಯುಪಿಐ ಐಡಿಗಳಿಗೆ ಹಣ ಕಳುಹಿಸುವ ಮುನ್ನ ಹತ್ತು ಬಾರಿ ಯೋಚಿಸಿ.

PREV
Read more Articles on
click me!

Recommended Stories

ಕನ್ನಡದಲ್ಲಿ ವಿಡಿಯೋ ಮಾಡ್ತೀರಾ? ಅಮೆರಿಕದ ವ್ಲಾಗರ್‌ಗೆ ಬೆಂಗಳೂರಿನ ಮುಗ್ದ ಆಟೋ ಚಾಲಕನ ಪ್ರಶ್ನೆ ವೈರಲ್
KRS ಒಳಹರಿವಿನಲ್ಲಿ ಭಾರೀ ಕುಸಿತ, ರೈತರಲ್ಲಿ ಮನೆ ಮಾಡಿದ ಆತಂಕ..!