ಹೆಬ್ಬಾಳದ 2.3 ಕಿಲೋಮೀಟರ್ ಉದ್ದದ ಸುರಂಗ ರಸ್ತೆಗಾಗಿ ನೂರಾರು ವರ್ಷಗಳ ಹಳೆಯ ಬೆಲೆಬಾಳುವ 1128 ಮರಗಳ ಮಾರಣಹೋಮ!

Published : Sep 22, 2026, 04:12 PM IST
Tunnel Project

ಸಾರಾಂಶ

ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಬಳಿ ನಿರ್ಮಿಸಲು ಉದ್ದೇಶಿಸಿರುವ 2.3 ಕಿ.ಮೀ ಉದ್ದದ ಸುರಂಗ ರಸ್ತೆಗಾಗಿ 1,128 ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ. ಸರ್ಕಾರದ ಅಪೂರ್ಣ ಮಾಹಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕರು, ಸ್ವಯಂಪ್ರೇರಿತ ಸಮೀಕ್ಷೆ ನಡೆಸಿ ಅಪರೂಪದ ಜೀವವೈವಿಧ್ಯ ಮತ್ತು ಅಂತರ್ಜಲ ನಾಶದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ತಗ್ಗಿಸಲು ಬಳ್ಳಾರಿ ರಸ್ತೆಯ ಹೆಬ್ಬಾಳ ಜಂಕ್ಷನ್ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ 2.3 ಕಿಲೋಮೀಟರ್ ಉದ್ದದ ಭೂಗತ ಸುರಂಗ ರಸ್ತೆ ಯೋಜನೆಗೆ ಬೃಹತ್ ಪ್ರಮಾಣದ ಮರಗಳ ಮಾರಣ ಹೋಮವಾಗಲಿದೆ. ಈ ಯೋಜನೆಗಾಗಿ ಒಟ್ಟು 1,128 ಮರಗಳನ್ನು ಕತ್ತರಿಸಲು ತೀರ್ಮಾನಿಸಲಾಗಿದ್ದು, ಸರಾಸರಿ ಪ್ರತಿ ಒಂದು ಕಿಲೋಮೀಟರ್‌ಗೆ 490 ಮರಗಳು ಧರೆಗುರುಳಲಿವೆ. ಬಳ್ಳಾರಿ ರಸ್ತೆ, ಪಶುವೈದ್ಯಕೀಯ ಕಾಲೇಜು ಆವರಣ ಮತ್ತು ಚಾರಿತ್ರಿಕ ಹೆಬ್ಬಾಳ ಕೆರೆಯ ಸುತ್ತಮುತ್ತಲಿನ ಅಪಾರ ಸಸ್ಯರಾಶಿಗೆ ಈ ಯೋಜನೆಯಿಂದ ಕುತ್ತು ಬಂದಿದ್ದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮರಗಳನ್ನು ಸ್ಥಳಾಂತರಿಸುವ ಬಗ್ಗೆ ಕೂಡ ಯಾವುದೇ ಸೂಚನೆಯನ್ನೂ ಕೂಡ ನೀಡಲಾಗಿಲ್ಲ.

ಜಿಬಿಎ ನೋಟಿಸ್ , ನಾಗರಿಕರ ಅಸಮಾಧಾನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಗಾಗಿ ಮರಗಳನ್ನು ಕತ್ತರಿಸಲು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ವೃಕ್ಷ ಅಧಿಕಾರಿ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಿ ಇತ್ತೀಚೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಆದರೆ, ಯಾವ ತಳಿಯ, ಎಷ್ಟು ವರ್ಷ ಹಳೆಯ ಮತ್ತು ಯಾವ ನಿರ್ದಿಷ್ಟ ಸ್ಥಳದ ಮರಗಳನ್ನು ಕತ್ತರಿಸಲಾಗುತ್ತಿದೆ ಎಂಬ ಕನಿಷ್ಠ ವಿವರಗಳನ್ನೂ ಜಿಬಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ. ಪೂರ್ಣ ಪ್ರಮಾಣದ ಮಾಹಿತಿಯನ್ನೇ ನೀಡದೆ ಆಕ್ಷೇಪಣೆ ಸಲ್ಲಿಸುವುದಾದರೂ ಹೇಗೆ ಎಂದು ಪರಿಸರಾಸಕ್ತರು ಹಾಗೂ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗರಿಕರ ಸಮೀಕ್ಷೆ, ಅಪರೂಪದ ಜೀವವೈವಿಧ್ಯ ನಾಶ

ಸರ್ಕಾರ ಮಾಹಿತಿ ಮರೆಮಾಚಿದ ಹಿನ್ನೆಲೆಯಲ್ಲಿ, ಕಳೆದ ಎರಡು ತಿಂಗಳುಗಳಿಂದ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ 'iNaturalist' ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಸಿ ಜೋಡಣೆ ಮಾರ್ಗದಲ್ಲಿ ಜಿಯೋ-ಟ್ಯಾಗ್ ಆಧಾರಿತ ಸಮೀಕ್ಷೆ ನಡೆಸಿದ್ದಾರೆ. 21 ಕ್ಕೂ ಹೆಚ್ಚು ನಾಗರಿಕ ವಿಜ್ಞಾನಿಗಳು ಭಾಗವಹಿಸಿದ ಈ ಸಮೀಕ್ಷೆಯಲ್ಲಿ ಭಾರಿ ವಿವರಣೆ ಸಂಗ್ರಹವಾಗಿದೆ.

ಸುಮಾರು 40 ದೇಶೀಯ ಪ್ರಭೇದಗಳು ಹಾಗೂ 20 ಕ್ಕೂ ಹೆಚ್ಚು ಅಲಂಕಾರಿಕ ತಳಿಯ ಮರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಆಲ, ಅರಳಿ, ಫಿಕಸ್, ನಾಗಲಿಂಗ ಪುಷ್ಪ , ನೆರಳೆ, ಆಮ್ಲ (ನೆಲ್ಲಿ), ಹೊಂಗೆ ಮತ್ತು ಮಳೆ ಮರಗಳು ಸೇರಿವೆ.

ನೂರು ವರ್ಷದ ಪಾರಂಪರಿಕ ಮರಗಳು: ವೆಟರಿನರಿ ಕಾಲೇಜು ಆವರಣದಲ್ಲಿ ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಬೃಹತ್ ಆಲದ ಮರಗಳು ಹಾಗೂ ಅಪರೂಪದ ಅಂಜೂರ ತಳಿಯ ಮರಗಳನ್ನು ದಾಖಲಿಸಲಾಗಿದೆ. ಇವು ಹಕ್ಕಿಗಳು, ಕೀಟಗಳು ಮತ್ತು ಸಣ್ಣ ಸಸ್ತನಿಗಳಿಗೆ ಆಹಾರ ಹಾಗೂ ವಾಸ ಕಲ್ಪಿಸಿವೆ.

ಅಪರೂಪದ ಪಕ್ಷಿ ಸಂಕುಲ: 'eBird' ಡೇಟಾಬೇಸ್ ಪ್ರಕಾರ ಹೆಬ್ಬಾಳ ಕೆರೆಯ ಸುತ್ತಮುತ್ತ 183 ಪಕ್ಷಿ ಪ್ರಭೇದಗಳು ಮತ್ತು ವೆಟರಿನರಿ ಕಾಲೇಜು ಆವರಣದಲ್ಲಿ 95 ಬಗೆಯ ಪಕ್ಷಿ ಪ್ರಭೇದಗಳು ಕಂಡುಬಂದಿವೆ. ಈ ಪ್ರದೇಶದ ಮರಗಳು ಕೆರೆ ಮತ್ತು ಕಾಲೇಜು ಆವರಣದ ನಡುವೆ ತಡೆರಹಿತ 'ಹಸಿರು ಕಾರಿಡಾರ್' ಆಗಿ ಕಾರ್ಯನಿರ್ವಹಿಸುತ್ತಿದ್ದವು.

ಅಂತರ್ಜಲ ಮರುಪೂರಣ ಮತ್ತು ಜಲವಿಜ್ಞಾನಕ್ಕೆ ಕಂಟಕ

ವೆಟರಿನರಿ ಕಾಲೇಜು ಆವರಣವು ಆಳವಾದ ಹಾಗೂ ವಿಸ್ತಾರವಾದ ಬೇರುಗಳನ್ನು ಹೊಂದಿರುವ ಬೃಹತ್ ಮರಗಳಿಂದ ಕೂಡಿದೆ. ಇಂತಹ ಜಲವಿಜ್ಞಾನದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ಪ್ರದೇಶದಲ್ಲಿ ಮರಗಳನ್ನು ಕಡಿದು ಕಾಂಕ್ರೀಟ್ ಸುರಿದರೆ ಅಂತರ್ಜಲ ಮರುಪೂರಣ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ನಿವಾಸಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಹೆಬ್ಬಾಳ ಜಂಕ್ಷನ್ ಮತ್ತು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿ ಗೃಹಗಳ ನಡುವಿನ ಭಾಗದಲ್ಲಿ 'ಕಟ್-ಅಂಡ್-ಕವರ್' ವಿಧಾನದ ಮೂಲಕ ಭೂಗತ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ನಗರದಲ್ಲಿ ಬೃಹತ್ ಮರಗಳನ್ನು ಬೆಳೆಸಲು ಜಾಗದ ಅಭಾವವಿರುವಾಗ, ಇಂತಹ ಸಾಂಸ್ಥಿಕ ಆವರಣಗಳಲ್ಲಿರುವ ನೂರಾರು ವರ್ಷಗಳ ಹಳೆಯ ಹಸಿರು ಸಿರಿಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂಬುದು ನಾಗರಿಕರ ಒಕ್ಕೊರಲ ಆಗ್ರಹವಾಗಿದೆ.

PREV
Read more Articles on
click me!

Recommended Stories

ಬೆಂಗಳೂರು ಹೊರವರ್ತುಲ ಸಂಚಾರಕ್ಕೆ ನೂತನ ದಾರಿ: STRR ಸನ್ನದ್ಧ, ಹೊಸಕೋಟೆ, ಸರ್ಜಾಪುರ, ದೇವನಹಳ್ಳಿಗೆ ತಡೆರಹಿತ ಸಂಪರ್ಕ!
ಬೆಂಗಳೂರು: ಆಸ್ತಿ ದಾಖಲೆಗಳ ನಿರ್ವಹಣೆಗೆ ನೂತನ 'ಇ-ಆಸ್ತಿ 2.0' ವ್ಯವಸ್ಥೆ ಲೋಕಾರ್ಪಣೆ - ಕೃಷ್ಣ ಬೈರೇಗೌಡ