ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಕಾದಿದೆ ಹೊಸ ಅಚ್ಚರಿ! ಐವಿಆರ್‌ಎಸ್‌ ಮೇಲ್ದರ್ಜೆಗೆ

Published : Sep 22, 2026, 02:55 PM IST
bengaluru airport

ಸಾರಾಂಶ

ಬೆಂಗಳೂರಿನ ಕೆಂಪೇಗೌಡ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ಅನುಕೂಲಕ್ಕಾಗಿ ತನ್ನ ಐವಿಆರ್‌ಎಸ್ (IVRS) ವ್ಯವಸ್ಥೆಯನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸುತ್ತಿದೆ. ಇದರಿಂದ ಕರೆ ಸ್ವೀಕರಿಸುವ ಸಾಮರ್ಥ್ಯ ಹೆಚ್ಚಾಗಲಿದ್ದು, ಪ್ರಯಾಣಿಕರ ದೂರುಗಳಿಗೆ ಕೇವಲ 15 ನಿಮಿಷಗಳಿಂದ 48 ಗಂಟೆಗಳ ಒಳಗೆ ತ್ವರಿತ ಪರಿಹಾರ ದೊರೆಯಲಿದೆ.

ಬೆಂಗಳೂರು: ಕೆಂಪೇಗೌಡ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ವನ್ನು ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL), ಪ್ರಯಾಣಿಕರ ಅನುಕೂಲ ಹಾಗೂ ಸೇವಾ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತನ್ನ 'ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ ( IVRS) ಆಧುನಿಕ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸಲು ಸಜ್ಜಾಗಿದೆ. ಕೃತಕ ಬುದ್ಧಿಮತ್ತೆ ಹಾಗೂ ಯಾಂತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿ ಈ ವ್ಯವಸ್ಥೆಯನ್ನು ನವೀಕರಣ ಮಾಡಲಾಗುತ್ತಿದೆ.

ಪ್ರಸ್ತುತ ವ್ಯವಸ್ಥೆ ಮತ್ತು ಮೇಲ್ದರ್ಜೆಗೇರಿಸುವಿಕೆ

ಪ್ರಸ್ತುತ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ವಿಚಾರಣೆಗಳು, ವಿಮಾನಗಳ ಆಗಮನ-ನಿರ್ಗಮನ ಸಮಯ, 'ಕಳೆದುಹೋದ ಹಾಗೂ ಸಿಕ್ಕ ವಸ್ತುಗಳ' ಮಾಹಿತಿ ಮತ್ತು ಇತರ ಸಾಮಾನ್ಯ ಸೇವೆಗಳಿಗಾಗಿ 080-66785557 ಹಾಗೂ 080-47406666 ದೂರವಾಣಿ ಸಂಖ್ಯೆಗಳನ್ನು ಬಳಸಲಾಗುತ್ತಿದೆ. ಪ್ರಸ್ತುತ ಈ ಸೇವೆಗಳನ್ನು ಕಾಲ್ ಸೆಂಟರ್ ಪ್ರತಿನಿಧಿಗಳು ನಿರ್ವಹಿಸುತ್ತಿದ್ದಾರೆ.

ಆದರೆ, ನೂತನ ಟರ್ಮಿನಲ್‌ಗಳ ವಿಸ್ತರಣೆ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿರುವುದರಿಂದ, ಮುಂದಿನ 5 ವರ್ಷಗಳಲ್ಲಿ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ಶೇ. 50ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಸಂಪರ್ಕ ಮತ್ತು ವಿಚಾರಣಾ ವ್ಯವಸ್ಥೆಯ ಸಾಮರ್ಥ್ಯವನ್ನು ವಿಸ್ತರಿಸಲು ಬಿಐಎಎಲ್ ಈ ನಿರ್ಧಾರ ತೆಗೆದುಕೊಂಡಿದೆ.

ಸೇವಾ ಸಾಮರ್ಥ್ಯದಲ್ಲಿ ಗಮನಾರ್ಹ ಏರಿಕೆ

ಪ್ರಸ್ತುತ ಚಾಲ್ತಿಯಲ್ಲಿರುವ ಐವಿಆರ್‌ಎಸ್ ವ್ಯವಸ್ಥೆಯು ದಿನಕ್ಕೆ ಗರಿಷ್ಠ ೪೦೦ ಒಳಬರುವ ಕರೆಗಳನ್ನು ಹಾಗೂ ಅತ್ಯಂತ ದಟ್ಟಣೆಯ ವೇಳೆಯಲ್ಲಿ ಗಂಟೆಗೆ 100 ಕರೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ನವೀಕರಿಸಿದ 'ಸ್ಮಾರ್ಟ್ IVRS' ಜಾರಿಯಾದ ಬಳಿಕ, ದೈನಂದಿನ ಕರೆ ಸಾಮರ್ಥ್ಯ ದಿನಕ್ಕೆ ಕನಿಷ್ಠ 600 ಕರೆಗಳಿಗೆ ಹೆಚ್ಚಳವಾಗಲಿದೆ. ಪೀಕ್-ಅವರ್ ಸಾಮರ್ಥ್ಯ ದಟ್ಟಣೆ ಅವಧಿಯಲ್ಲಿ ಗಂಟೆಗೆ 150 ಕರೆಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ.

ಈ ತಂತ್ರಜ್ಞಾನ ಆಧರಿತ ಬದಲಾವಣೆಯು ಕಾಲ್ ಸೆಂಟರ್ ಸಿಬ್ಬಂದಿಯ ಮೇಲಿನ ಒತ್ತಡವನ್ನು ಗಮನಾರ್ಹವಾಗಿ ತಗ್ಗಿಸಲಿದ್ದು, ಕರೆ ಮಾಡುವ ಪ್ರಯಾಣಿಕರಿಗೆ ಸ್ವಯಂಚಾಲಿತ ಧ್ವನಿ ಮೆನುಗಳ ಮೂಲಕ ತತ್‌ಕ್ಷಣವೇ ನಿಖರ ಮಾಹಿತಿ ಸಿಗುವಂತೆ ಮಾಡಲಿದೆ.

ನಿಗದಿತ ಕಾಲಮಿತಿಯಲ್ಲಿ ದೂರು ಪರಿಹಾರ:

ಈ ಯೋಜನೆಯ ವಿನ್ಯಾಸ, ಪೂರೈಕೆ ಮತ್ತು ನಿರ್ವಹಣೆಯನ್ನು ಅನುಭವಿ ಬಾಹ್ಯ ತಾಂತ್ರಿಕ ಪಾಲುದಾರ ಸಂಸ್ಥೆಗೆ ವಹಿಸಲಾಗುತ್ತಿದೆ. ನೂತನ ತಂತ್ರಜ್ಞಾನ ಅಳವಡಿಕೆಯ ನಂತರ, ಪ್ರಯಾಣಿಕರ ದೂರುಗಳು ಮತ್ತು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಕಟ್ಟುನಿಟ್ಟಿನ ಸಮಯಾವಕಾಶವನ್ನು ನಿಗದಿಪಡಿಸಲಾಗಿದೆ.

ತುರ್ತು/ಗಂಭೀರ ಸಮಸ್ಯೆಗಳಿಗೆ ಕೇವಲ 15 ನಿಮಿಷಗಳಲ್ಲಿ ಪರಿಹಾರ. ಹಂತ-1 ರ ಆದ್ಯತೆಯ ಘಟನೆಗಳು ಗರಿಷ್ಠ 2 ಗಂಟೆಗಳಲ್ಲಿ ಇತ್ಯರ್ಥ. ಸಾಮಾನ್ಯ/ಕಡಿಮೆ ಆದ್ಯತೆಯ ವಿಚಾರಣೆಗಳು: ಗರಿಷ್ಠ 48 ಗಂಟೆಗಳ ಒಳಗೆ ಪರಿಹಾರ. ಈ ಆಧುನಿಕ ಧ್ವನಿ ಸಂವಹನ ತಂತ್ರಜ್ಞಾನವು ಕೆಂಪೇಗೌಡ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಡಿಜಿಟಲ್ ಹಾಗೂ ತಡೆರಹಿತ ಸೇವಾ ಅನುಭವವನ್ನು ನೀಡಲಿದೆ.

PREV
Read more Articles on
click me!

Recommended Stories

ಕೃಷ್ಣ ಮೇಲ್ದಂಡೆ ಯೋಜನೆ-3ರ ಮುಳುಗಡೆ ಸಂತ್ರಸ್ತರಿಗೆ ₹3,000 ಕೋಟಿ ಹಂಚಿಕೆ; ಸಚಿವ ಚಲುವರಾಯಸ್ವಾಮಿ
ಬೆಂಗಳೂರು 2 ಫ್ಲೈಓವರ್‌ಗಳಿಗೆ ಗುಜರಾತ್ ಮಾದರಿ ಟೋಲ್; ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ಮೇಲ್ಸೇತುವೆಗೆ ಜಾರಿ!