
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಅವಳಿ ಸುರಂಗ ರಸ್ತೆ ಯೋಜನೆಗೆ ಇದೀಗ ಮತ್ತೊಂದು ದೊಡ್ಡ ಕಾನೂನು ತೊಡಕು ಎದುರಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಜಲಮೂಲಗಳ ಸಂರಕ್ಷಣೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ಆದೇಶಗಳು ಹಾಗೂ ಪರಿಸರ ಸಂರಕ್ಷಣಾ ಕಾಯ್ದೆಗಳನ್ನು ಈ ಯೋಜನೆ ಉಲ್ಲಂಘಿಸುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಯೋಜನೆಯು ಶೀಘ್ರದಲ್ಲೇ ನ್ಯಾಯಾಂಗ ಸಂಘರ್ಷಕ್ಕೆ ಸಿಲುಕುವ ಸಾಧ್ಯತೆಯಿದೆ.
ಈ ಬೃಹತ್ ಯೋಜನೆಗಾಗಿ ಹೆಬ್ಬಾಳ ಕೆರೆಯ 3.45 ಎಕರೆ ಭೂಮಿಯನ್ನು ಭೂಗತ ಕಾಮಗಾರಿಗೆ ಬಳಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ಸಂಬಂಧ ಬಿಡಿಎ, ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ದಿಂದ (KTCDA) ಪ್ರಾಥಮಿಕ ಅನುಮೋದನೆಯನ್ನೂ ಪಡೆದುಕೊಂಡಿದೆ.
ದಾಖಲೆಗಳ ಪ್ರಕಾರ, ಬಿಡಿಎ ಜೂನ್ 29, 2026 ರಂದು ಮೊದಲ ಬಾರಿಗೆ ಕೆಟಿಸಿಡಿಎಯನ್ನು ಸಂಪರ್ಕಿಸಿತ್ತು. ಬಳಿಕ ಜುಲೈ 17 ರಂದು ಮತ್ತೊಮ್ಮೆ ಪತ್ರ ವ್ಯವಹಾರ ನಡೆಸಿದ ನಂತರ, ಕೆಟಿಸಿಡಿಎ ಜುಲೈ 23, 2026 ರಂದು ಕೆಲವು ಷರತ್ತುಗಳೊಂದಿಗೆ ಹೆಬ್ಬಾಳ ಕೆರೆಯ ಕೆಳಭಾಗದ ಭೂಮಿಯನ್ನು ಬಳಸಲು ಅನುಮತಿ ಕೊಟ್ಟಿದೆ.
ಆದರೆ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನಗಳ ಪ್ರಕಾರ , ಯಾವುದೇ ಜೌಗು ಪ್ರದೇಶ (Wetland) ಅಥವಾ ಜಲಮೂಲಗಳನ್ನು ಸಂರಕ್ಷಿಸಬೇಕು ಮತ್ತು ಅವುಗಳನ್ನು ಯಾವುದೇ ಕಾರಣಕ್ಕೂ ಇತರ ಉದ್ದೇಶಗಳಿಗೆ ಬೇರೆಡೆಗೆ ತಿರುಗಿಸಬಾರದು.
ವಿಶೇಷವೆಂದರೆ, 2.25 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಪ್ರತಿಯೊಂದು ಜಲಮೂಲವನ್ನು 'ಜೌಗು ಪ್ರದೇಶ' ಎಂದೇ ಪರಿಗಣಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಮಾನದಂಡವನ್ನು ಅನ್ವಯಿಸಿದರೆ, ರಾಜ್ಯದ ಸುಮಾರು 14,000 ಜಲಮೂಲಗಳು ಈ ಸಂರಕ್ಷಿತ ವ್ಯಾಪ್ತಿಗೆ ಬರುತ್ತವೆ. ಆದರೆ, ಸರ್ಕಾರವು ಇವುಗಳಲ್ಲಿ ಹೆಚ್ಚಿನವುಗಳನ್ನು ತೇವಭೂಮಿ ಎಂದು ಗುರುತಿಸಿ ಸೂಕ್ತ ರಕ್ಷಣೆ ನೀಡಿಲ್ಲ ಎಂದು ಗಂಭೀರ ಆರೋಪ ಮಾಡಿರುವ ಪರಿಸರ ತಜ್ಞರು, ಇದೀಗ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪರಿಸರ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಜೌಗು ಪ್ರದೇಶ ಸಮಿತಿಯ ಸದಸ್ಯರಾದ ಪ್ರೊ. ಟಿ.ವಿ. ರಾಮಚಂದ್ರ ಅವರು ಈ ಪ್ರಕ್ರಿಯೆಯ ಲೋಪಗಳನ್ನು ಬಹಿರಂಗಪಡಿಸಿದ್ದಾರೆ. "ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಬಿಡಿಎ ಮತ್ತು ಕೆಟಿಸಿಡಿಎ ಸಂಸ್ಥೆಗಳು 'ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರ'ದ (KWA) ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಕೆಡಬ್ಲ್ಯುಎ ಈ ಕಡತವನ್ನು ಪರಿಶೀಲಿಸಿ, ಭಾರತ ಜೌಗು ಪ್ರದೇಶ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಜೌಗು ಪ್ರದೇಶ ಸಮಿತಿಗೆ ಚರ್ಚೆ ಮತ್ತು ಅನುಮೋದನೆಗಾಗಿ ರವಾನಿಸಬೇಕಿತ್ತು. ಆದರೆ ಈ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಪ್ರಸ್ತುತ ನೀಡಲಾಗಿರುವ ಅನುಮತಿಯು 2010 ಮತ್ತು 2017 ರ ತೇವಭೂಮಿ (ಸಂರಕ್ಷಣೆ ಮತ್ತು ನಿರ್ವಹಣೆ) ನಿಯಮಗಳ ನಿಯಮಬಾಹಿರ ಉಲ್ಲಂಘನೆಯಾಗಿದೆ. ಅಲ್ಲದೆ, ಅಜ್ಞಾನ ಅಥವಾ ತರಾತುರಿಯಲ್ಲಿ ಕೈಗೊಂಡಿರುವ ಈ ಕ್ರಮವು ಕೋರ್ಟ್ ಆದೇಶಗಳ ನೇರ ಉಲ್ಲಂಘನೆಯಾಗಿದೆ. ಹೆಬ್ಬಾಳ ಕೆರೆಯು ಈಗಾಗಲೇ ಹಲವು ಭಾಗಗಳಲ್ಲಿ ಒತ್ತುವರಿಗೊಳಗಾಗಿದೆ. ಈಗ ಸುರಂಗ ರಸ್ತೆ ಯೋಜನೆಗೆ ಅವಕಾಶ ನೀಡಿದರೆ ಈ ಜಲಮೂಲ ಶಾಶ್ವತವಾಗಿ ನಾಶವಾಗಲಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತ ಅಥವಾ ಪ್ರಸ್ತಾಪ ಇದುವರೆಗೆ ತಮ್ಮ ಪರಿಶೀಲನೆಗೆ ಬಂದಿಲ್ಲ ಎಂದು ಕೆಡಬ್ಲ್ಯುಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೆಟಿಸಿಡಿಎ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕೆರೆಯ ಕೆಳಭಾಗದ ಭೂಮಿಯನ್ನು ಭೂಗತ ಯೋಜನೆಗೆ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಬಿಡಿಎ ಜೌಗು ಪ್ರದೇಶ ಪ್ರಾಧಿಕಾರದಿಂದ ಅನುಮತಿ ಪಡೆಡಿದೆಯೇ ಇಲ್ಲವೇ ಎಂಬ ಮಾಹಿತಿ ನಮಗಿಲ್ಲ ಎಂದಿದ್ದಾರೆ.
ಬಿಡಿಎ ಅಧಿಕಾರಿಗಳು ಮಾತ್ರ ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದು, 2014 ರಲ್ಲಿ ಅಸ್ತಿತ್ವಕ್ಕೆ ಬಂದ ಕೆಟಿಸಿಡಿಎ ರಾಜ್ಯಮಟ್ಟದ ಸಂಸ್ಥೆಯಾಗಿದ್ದು, ಅವರಿಂದ ಪಡೆದ ಅನುಮತಿಯೇ ಸಾಕಾಗುತ್ತದೆ. ಪ್ರತ್ಯೇಕವಾಗಿ ಜೌಗು ಪ್ರದೇಶ ಪ್ರಾಧಿಕಾರದ ಅನುಮತಿ ಅಗತ್ಯವಿಲ್ಲ. ಸದ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕೆರೆಯ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಅವರೇ ಈ ಕಾನೂನು ಅಂಶಗಳನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ನಿಯಮಗಳ ಪ್ರಕಾರ ಕೇಂದ್ರ ಮತ್ತು ರಾಜ್ಯ ಜೌಗು ಪ್ರದೇಶ ಪ್ರಾಧಿಕಾರಗಳ ಒಪ್ಪಿಗೆಯಿಲ್ಲದೆ ಕೈಗೊಳ್ಳುವ ಯಾವುದೇ ಕಾಮಗಾರಿಗೆ ತಡೆಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಬಿಡಿಎ ಅಧಿಕಾರಿಗಳು ಪ್ರಕ್ರಿಯೆಯನ್ನು ಹಗುರವಾಗಿ ಪರಿಗಣಿಸಿರುವುದು ಹಾಗೂ ತಜ್ಞರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವುದು, ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಯ ಮಹತ್ವಾಕಾಂಕ್ಷಿ 'ಅವಳಿ ಸುರಂಗ ರಸ್ತೆ' ಯೋಜನೆಗೆ ಆರಂಭದಲ್ಲೇ ದೊಡ್ಡ ಕಂಟಕವಾಗಿ ಪರಿಣಮಿಸಿದೆ.