
ಬೆಂಗಳೂರು (ನ.09): ದೇಶದ ರಾಜಧಾನಿ ದೆಹಲಿ ಬೆನ್ನಲ್ಲೇ ಇದೀಗ ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರಿನಲ್ಲೂ ವಾಯು ಮಾಲಿನ್ಯದ ಮಟ್ಟ (Air Pollution Level) ಅಪಾಯಕಾರಿ ರೀತಿಯಲ್ಲಿ ಏರಿಕೆಯಾಗಿದೆ. ದೀಪಾವಳಿ ಹಬ್ಬದ ನಿಮಿತ್ತ ಸಾರ್ವಜನಿಕರು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸುತ್ತಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಪರಿಸರ ತಜ್ಞ ರವಿನಾರಾಯಣ ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸರ ತಜ್ಞ ರವಿನಾರಾಯಣ ಅವರು ನೀಡಿರುವ ಮಾಹಿತಿಯಂತೆ, ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಭಾರಿ ಅಂತರದಲ್ಲಿ ಹೆಚ್ಚಿದ್ದು 480% ಕ್ಕೆ ತಲುಪಿದೆ. ಇತ್ತ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೇವಲ 38-40% ಇದ್ದ ಮಾಲಿನ್ಯದ ಪ್ರಮಾಣ, ದೀಪಾವಳಿ ಪಟಾಕಿಯ ಅಬ್ಬರದಿಂದಾಗಿ ಏಕಾಏಕಿ 106% ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಏಕಾಏಕಿ ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದರಿಂದ ಅಸ್ತಮಾ, ಉಸಿರಾಟದ ತೊಂದರೆ ಮತ್ತು ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಭಾರಿ ತೊಂದರೆಯಾಗುತ್ತಿದೆ. ಪಟಾಕಿಗಳಿಂದ ಹೊರಹೊಮ್ಮುವ ವಿಷಕಾರಿ ಹೊಗೆಯು ಭೂಮಿಯ ವಾತಾವರಣವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ, ಕೊನೆಗೆ ಅದನ್ನು ನಾವೇ ಉಸಿರಾಡಬೇಕಾಗುತ್ತದೆ. ಇದರಿಂದ ದೀರ್ಘಕಾಲದ ತೀವ್ರ ಆರೋಗ್ಯ ಸಮಸ್ಯೆಗಳು (Side Effects) ಎದುರಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪಟಾಕಿಯ ಶಬ್ದ ಮತ್ತು ಹೊಗೆಯಿಂದ ಕೇವಲ ಮಾನವರಷ್ಟೇ ಅಲ್ಲದೆ ಮೂಕ ಪ್ರಾಣಿ-ಪಕ್ಷಿಗಳೂ ಸಂಕಷ್ಟಕ್ಕೆ ಸಿಲುಕಿವೆ. ರಾತ್ರಿ ವೇಳೆಯಲ್ಲಿ ಎಲ್ಲಿಗೂ ಹಾರಿಕೊಂಡು ಹೋಗಲಾಗದ ಪಕ್ಷಿಗಳು ತಾವು ವಾಸವಾಗಿದ್ದ ಮರದ ಕೊಂಬೆಗಳ ಮೇಲೆಯೇ ಕುಳಿತು, ಪಟಾಕಿಯ ಕಿವಿಮುrowಚುವ ಶಬ್ದಕ್ಕೆ ಎದೆಯೊಡೆದು ಮರದ ಮೇಲಿಂದ ಬಿದ್ದು ಪ್ರಾಣ ಬಿಡುತ್ತಿವೆ.
ಜನರ ಅತಿಯಾದ ಪಟಾಕಿ ಹುಚ್ಚಿನಿಂದಾಗಿ ನಿಸರ್ಗದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ಹಬ್ಬ ಆಚರಿಸಬೇಕಿದೆ ಎಂದು ರವಿನಾರಾಯಣ ಮನವಿ ಮಾಡಿದ್ದಾರೆ.