ಸಿರ್ಸಿ ವೃತ್ತ ಮೇಲ್ಸೇತುವೆ ದುರಸ್ತಿ ಮರೀಚಿಕೆ!

By Kannadaprabha NewsFirst Published Oct 19, 2019, 8:15 AM IST
Highlights

ಬೆಂಗಳೂರು ಸಿರ್ಸಿ ಸರ್ಕಲ್‌ ಫ್ಲೈಓವರ್‌ ಒಂದು ಬದಿಯ ಕಾಮಗಾರಿ ಪೂರ್ಣಗೊಂಡು ಆರೇಳು ತಿಂಗಳು ಕಳೆದರೂ ಮತ್ತೊಂದು ಬದಿಯ ಕಾಮಗಾರಿ ಕೈಗೊಳ್ಳದೆ ಬಿಬಿಎಂಪಿ ನಿರ್ಲಕ್ಷ್ಯ ತಾಳಿದೆ.

ಬೆಂಗಳೂರು [ಅ.19]:  ಮೆಜೆಸ್ಟಿಕ್‌- ಕೃಷ್ಣರಾಜ ಮಾರುಕಟ್ಟೆಸೇರಿದಂತೆ ನಗರದ ಕೆಲವು ಪ್ರಮುಖ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ (ಸಿರ್ಸಿ ಸರ್ಕಲ್‌ ಫ್ಲೈಓವರ್‌) ಒಂದು ಬದಿಯ ಕಾಮಗಾರಿ ಪೂರ್ಣಗೊಂಡು ಆರೇಳು ತಿಂಗಳು ಕಳೆದರೂ ಮತ್ತೊಂದು ಬದಿಯ ಕಾಮಗಾರಿ ಕೈಗೊಳ್ಳದೆ ಬಿಬಿಎಂಪಿ ನಿರ್ಲಕ್ಷ್ಯ ತಾಳಿದೆ.

ಇದರಿಂದ ದುರಸ್ತಿಯಾಗದ ಮಾರ್ಗದಲ್ಲಿ ರಸ್ತೆಯುದ್ದಕ್ಕೂ ಗುಂಡಿಗಳೂ ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಆದರೂ, ಬಿಬಿಎಂಪಿ ಮಾತ್ರ ಈ ರಸ್ತೆ ದುರಸ್ತಿಗೆ ಟೆಂಡರ್‌ ನೀಡಿರುವ ಗುತ್ತಿಗೆದಾರರಿಂದ ಅದ್ಯಾಕೋ ಏಳೆಂಟು ತಿಂಗಳು ಕಳೆದರೂ ಇನ್ನೊಂದು ಬದಿಯ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ಸಿರ್ಸಿ ಸರ್ಕಲ್‌ ಮೇಲ್ಸೇತುವೆ ದುರಸ್ತಿಗೆ 4.30 ಕೋಟಿ ರು. ಟೆಂಡರ್‌ ನೀಡಿದ್ದ ಬಿಬಿಎಂಪಿ, 2018ರ ಡಿಸೆಂಬರ್‌ನಲ್ಲಿ ಪುರಭವನದ ಮುಂಭಾಗದಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಒಂದು ಮಾರ್ಗದ ದುರಸ್ತಿ ಕಾರ್ಯ ಆರಂಭಿಸಿ ಮಾರ್ಚ್ ವೇಳೆಗೆ ಮುಗಿಸಲಾಗಿತ್ತು. ಆ ನಂತರ 45 ದಿನಗಳಲ್ಲಿ ಮೈಸೂರು ರಸ್ತೆಯಿಂದ ಕೆ.ಆರ್‌.ಮಾರುಕಟ್ಟೆ, ಪುರಭವನ ಕಡೆ ಬರುವ ಮಾರ್ಗದ ದುರಸ್ತಿ ನಡೆಯಬೇಕಿತ್ತು. ಆದರೆ, ಆರೇಳು ತಿಂಗಳಾದರೂ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಇದರಿಂದ ನಿತ್ಯ ನಗರವಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದೂ ಬರುವ ಸಾವಿರಾರು ವಾಹನಗಳು ಸಂಚರಿಸುವ ಈ ಮೇಲ್ಸೇತುವೆ ಮತ್ತಷ್ಟುಹಾಳಾಗಿದ್ದು, ಕೆಲವೆಡೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಆದರೂ, ಬಿಬಿಎಂಪಿ ಮಾತ್ರ ತನಗೂ ಇದಕ್ಕೂ ಸಂಬಂಧ ಇಲ್ಲವೆಂಬಂತೆ ಕೈ ಕಟ್ಟಿಕೂತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಫ್ಲೈ ಓವರ್‌ನ ಪಿಲ್ಲರ್‌ಗಳನ್ನು ಒಂದಕ್ಕೊಂದು ಜೋಡಿಸುವ ಕೊಂಡಿಗಳೇ ಇಲ್ಲಿ ಪ್ರಾಣಕ್ಕೆ ಕಂಟಕವಾಗಿವೆ. ಒಂದು ಎತ್ತರವಿದ್ದರೆ, ಇನ್ನೊಂದು ತಗ್ಗು. ನಯ-ನಾಜೂಕಿಲ್ಲದ ಕೆಲಸ ಮಾಡಲಾಗಿದೆ ಅನ್ನೋದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಕೆಲವು ಕೊಂಡಿಗಳಂತೂ ಕಿತ್ತೇ ಬರುತ್ತವೆ ಅನ್ನುವಷ್ಟುಸಡಿಲವಾಗಿದೆ. ನೆಟ್ಟು, ಬೋಲ್ಟುಗಳು ಸಡಿಲಗೊಂಡಿದ್ದರೆ ಕೆಲವೊಂದು ಕಿತ್ತು ಬಂದಿವೆ. ವಾಹನ ಚಾಲಕರಿಗೆ ಅದರಲ್ಲೂ ದ್ವಿಚಕ್ರ ವಾಹನ ಚಾಲಕರಿಗೆ ಈ ಕೊಂಡಿಗಳು ಅಪಾಯ ಸೃಷ್ಟಿಸಲು ಸಿದ್ಧವಾಗಿರುವಂತೆ ಕಾಣುತ್ತಿವೆ. ವಾಹನಗಳ ಟೈರ್‌ಗೆ ಈ ಬೋಲ್ಟ್‌ಗಳು ತಾಗಿದರೆ ಟಯರ್‌ ಸಿಡಿದು ಅಪಘಾತವಾಗುವ ಸಾಧ್ಯತೆ ದಟ್ಟವಾಗಿದೆ.

ವೈಟ್‌ ಟಾಪಿಂಗ್‌ನಿಂದ ದುರಸ್ತಿಗೆ ತಡೆ

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೈಸೂರು ರಸ್ತೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಯುತ್ತಿದ್ದ ಕಾರಣಕ್ಕೆ ಮೇಲ್ಸೇತುವೆಯ ಎರಡೂ ಬದಿಯ ದುರಸ್ತಿಯನ್ನು ಒಂದೇ ಸಲ ನಡೆಸಿದರೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ತೀವ್ರಗೊಳ್ಳಲಿದೆ ಎಂಬ ಪೊಲೀಸರ ಸಲಹೆ ಮೇರೆಗೆ ಒಂದು ಬದಿಯ ದುರಸ್ತಿಯನ್ನು ಮಾತ್ರ ಮಾಡಲಾಗಿತ್ತು. ಮೈಸೂರು ರಸ್ತೆಯಲ್ಲಿ ಸ್ಥಗಿತಗೊಂಡಿದ್ದ ವೈಟ್‌ಟಾಪಿಂಗ್‌ ಕಾಮಗಾರಿ ಮತ್ತೆ ಪ್ರಾರಂಭವಾಗಿದ್ದರಿಂದ ಮೇಲ್ಸೇತುವೆಯ ಮತ್ತೊಂದು ಬದಿಯ ದುರಸ್ತಿ ಆರಂಭಿಸಲು ಆಗಿರಲಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ.

ಬಿಬಿಎಂಪಿ ಏಳೆಂಟು ತಿಂಗಳ ಹಿಂದೆ ಸಿರ್ಸಿ ಮೇಲ್ಸೇತುವೆಯ ಒಂದು ಭಾಗವನ್ನು ಮಾತ್ರ ದುರಸ್ತಿ ಮಾಡಿದ ಬಿಬಿಎಂಪಿ ಇನ್ನೊಂದು ಮಾರ್ಗದ ದುರಸ್ತಿಯನ್ನು ಮರೆತು ಕೂತಂತಿದೆ. ಇದರಿಂದ ದುರಸ್ತಿಗೊಳ್ಳದ ಮಾರ್ಗ ರಸ್ತೆಗುಂಡಿಗಳಿಂದ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. 2017 ಅಕ್ಟೋಬರ್‌ನಲ್ಲಿ ಈ ಮೇಲ್ಸೇತುವೆಯಲ್ಲಿ ರಸ್ತೆಗುಂಡಿಯಿಂದ ದಂಪತಿ ಸಾವನ್ನಪ್ಪಿದ್ದು ಇನ್ನೂ ಕಣ್ಮುಂದೆ ಇದೆ. ಬಹುಶಃ ಇಂತಹ ದುರ್ಘಟನೆ ನಡೆದಾಗ ಮಾತ್ರ ಬಿಬಿಎಂಪಿ ಎಚ್ಚೆತ್ತುಕೊಳ್ಳಬಹುದು.

-ಮಹದೇವಯ್ಯ, ಚಾಮರಾಜಪೇಟೆ ನಿವಾಸಿ

click me!