ನಕಲಿ ಖಾತೆ ತೆರೆದು ಅಸಭ್ಯ ಪೋಸ್ಟ್ : ಹೊನ್ನಾವರದ ಟೆಕಿ ಸೆರೆ

By Kannadaprabha NewsFirst Published Oct 19, 2019, 7:28 AM IST
Highlights

ಇನ್‌ಸ್ಟಾಗ್ರಾಮ್‌ ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದು ಅಸಭ್ಯ ರೀತಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ನನ್ನು ಈಗ ಪೊಲೀಸ್ ಅತಿಥಿಯಾಗಿದ್ದಾನೆ. 

ಬೆಂಗಳೂರು [ಅ.19]:  ಸ್ನೇಹಿತೆ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದು ಅಸಭ್ಯ ರೀತಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ನನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಂದೂರು ನಿವಾಸಿ ನಿತಿನ್‌ ಬಂಧಿತ. ಆರೋಪಿ ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನವನಾಗಿದ್ದು, ನಗರದ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದಾನೆ. ಆರೋಪಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಯುವತಿ ಕೆಲಸ ಮಾಡುತ್ತಿದ್ದಳು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಿಂಗಳ ಹಿಂದೆ ಯುವತಿ ಕೆಲಸಕ್ಕೆ ರಾಜೀನಾಮೆ ನೀಡಿ, ಮತ್ತೊಂದು ಕಂಪನಿ ಸೇರಿದ್ದಳು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೇರೆ ಕಂಪನಿಯಲ್ಲಿ ಅಲ್ಲಿನ ಯುವಕನೊಬ್ಬನ ಜತೆ ಯುವತಿ ಸುತ್ತಾಡುತ್ತಿರುವ ಬಗ್ಗೆ ಆರೋಪಿ ಕುಪಿತಗೊಂಡಿದ್ದ. ಅಲ್ಲದೆ, ಸ್ನೇಹಿತೆಗೆ ಕಿರುಕುಳ ನೀಡಲಾರಂಭಿಸಿದ್ದ. ಸ್ನೇಹಿತೆ ಹೆಸರಿನಲ್ಲಿ ನಕಲಿ ಇ-ಮೇಲ್‌ ವಿಳಾಸ ಸೃಷ್ಟಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದಿದ್ದ. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿ ಫೋಟೋ ಹಾಗೂ ಅಸಭ್ಯ ರೀತಿಯ ಪೋಸ್ಟ್‌ಗಳನ್ನು ಹಾಕುತ್ತಿದ್ದ. ಯುವತಿ ಹಾಗೂ ಯುವಕನಿಗೆ ಸಂಬಂಧ ಇರುವುದಾಗಿ ಬಿಂಬಿಸುವ ಪೋಸ್ಟ್‌ ಅಪ್‌ಲೋಡ್‌ ಮಾಡುತ್ತಿದ್ದ.

ವಿಷಯ ತಿಳಿಯುತ್ತಿದ್ದಂತೆ, ಸ್ನೇಹಿತೆ ನಿತಿನ್‌ನನ್ನು ಪ್ರಶ್ನಿಸಿದ್ದರು. ತನಗೂ ಇನ್‌ಸ್ಟಾಗ್ರಾಮ್‌ ಖಾತೆಗೂ ಸಂಬಂಧ ಇಲ್ಲ ಎಂದು ಸಬೂಬು ಹೇಳಿದ್ದ. ಅಲ್ಲದೆ, ಠಾಣೆಗೆ ದೂರು ನೀಡುವಂತೆ ಆತನೇ ಯುವತಿಗೆ ಹೇಳಿದ್ದ. ಯುವತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದಾಗ ಆರೋಪಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು ಎಂದು ಸೈಬರ್‌ ಕ್ರೈಂ ಪೊಲೀಸರು ಮಾಹಿತಿ ನೀಡಿದರು.

click me!