
ಬೆಂಗಳೂರು [ಅ.09]: ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದು ಅಕ್ರಮ ದಾಖಲೆ ಸೃಷ್ಟಿಸಿ ಇಲ್ಲಿನ ಪೌರತ್ವ ಪಡೆದು ಪ್ರತಿಷ್ಠಿತ ಕಾಲೇಜಿನಲ್ಲಿ ‘ಉಪನ್ಯಾಸಕ’ನಾಗಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬ ಸಂಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೊಹಮ್ಮದ್ ರಬಿವುಲ್ ಹುಸೇನ್ (29) ಬಂಧಿತ. ಆರೋಪಿಯಿಂದ ನಕಲಿ ಜನನ ಪ್ರಮಾಣ ಪತ್ರ, ಆಧಾರ್‌ಕಾರ್ಡ್, ಭಾರತದ ಪಾಸ್‌ಪೋರ್ಟ್, ಕಾಲೇಜಿನ ಗುರುತಿನ ಚೀಟಿ, ಪಾನ್‌ಕಾರ್ಡ್, ಬ್ಯಾಂಕ್ ಖಾತೆಯ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ನಾಗಶೆಟ್ಟಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. 2009ರಲ್ಲಿ ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದು, ಮತ್ತಿಕೆರೆಯಲ್ಲಿರುವ ಪ್ರತಿಷ್ಠಿತ ರಾಮಯ್ಯ ಕಾಲೇಜಿನಲ್ಲಿ 2016ರ ತನಕ ಆರ್ಕಿಟೆಕ್ಚರ್ ಆಗಿ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ. ಈ ವೇಳೆ ಆರೋಪಿ ಕಾಲೇಜಿನ ಗುರುತಿನ ಚೀಟಿ ಬಳಸಿ ಪಾನ್‌ಕಾರ್ಡ್ ಹಾಗೂ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದ. ನಂತರ ಕೊಲ್ಕತ್ತಾದ ನಕಲಿ ದಾಖಲೆ ನೀಡಿ ಸಂಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮನೆಯ ಕರಾರು ಪತ್ರ ನೀಡಿ ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್‌ಕಾರ್ಡ್ ಮಾಡಿಸಿದ್ದ. ಈ ಎಲ್ಲಾ ದಾಖಲೆಗಳನ್ನು ನೀಡಿ ಭಾರತೀಯನೆಂದು ಹೇಳಿ ಇಲ್ಲಿಯೇ ಪಾಸ್‌ಪೋರ್ಟ್ ಸಹ ಪಡೆದುಕೊಂಡಿದ್ದ. ಅಷ್ಟುಮಾತ್ರವಲ್ಲದೆ, ಭಾರತೀಯನೆಂದು ಇಲ್ಲಿನ ಪೌರತ್ವ ಪಡೆದಿರುವುದಾಗಿ ನಂಬಿಸಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದು ವರ್ಷದಿಂದ ‘ಉಪನ್ಯಾಸಕ’ನಾಗಿ ಕೆಲಸ ಮಾಡುತ್ತಿದ್ದ. ಈತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆರೋಪಿಯ ದಾಖಲೆ ಪರಿಶೀಲನೆ ನಡೆಸಿದಾಗ ಸಂಪೂರ್ಣವಾಗಿ ನಕಲಿ ದಾಖಲೆ ಸೃಷ್ಟಿಸಿ ಭಾರತೀಯ ಪೌರತ್ವ ಪಡೆದಿರುವುದು ಪತ್ತೆಯಾಗಿದೆ. ಅದಕ್ಕೆ ಸಂಬಂಧಪಟ್ಟಎಲ್ಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಕಲಿ ಜನನ ಪ್ರಮಾಣ ಪತ್ರವನ್ನು ಯಾರಿಂದ ಬಾಂಗ್ಲಾದೇಶ ಪ್ರಜೆ ಯಾರಿಂದ ಪಡೆದ, ಇದಕ್ಕೆ ಯಾವ ಸರ್ಕಾರಿ ಅಧಿಕಾರಿ ಸಹಿ ಹಾಕಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಮಹಿಳೆಯರು ಸೇರಿ ಪಾಕಿಸ್ತಾನ ಪ್ರಜೆಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಪಾಕ್ ಪ್ರಜೆಗಳಿಂದ ಹಣ ಪಡೆದು ನಕಲಿ ದಾಖಲೆಗೆ ಸಹಿ ಹಾಕಿದ್ದ ಪ್ರಕರಣದಲ್ಲಿ ವೈದ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದರು.