HSR ಲೇಔಟ್‌ ಜನರಿಗಾಗಿ ಎಐ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ; ಶುಲ್ಕ ಹೀಗಿದೆ, ಡಿಜಿಟಲ್ ಪಾವತಿ

Published : Nov 22, 2026, 07:33 AM IST
Parking

ಸಾರಾಂಶ

ಬೆಂಗಳೂರಿನ ಎಚ್ಎಸ್‌ಆರ್ ಲೇಔಟ್‌ನಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಎಐ ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರುತ್ತಿದೆ. 12 ವಾಣಿಜ್ಯ ರಸ್ತೆಗಳಲ್ಲಿ ಡಿಜಿಟಲ್ ಪಾವತಿ ಮೂಲಕ ದ್ವಿಚಕ್ರ ಮತ್ತು ಕಾರುಗಳಿಗೆ ನಿಗದಿತ ಶುಲ್ಕದಲ್ಲಿ ಪಾರ್ಕಿಂಗ್ ಲಭ್ಯವಾಗಲಿದೆ.

ಬೆಂಗಳೂರು: ದಕ್ಷಿಣ ನಗರ ಪಾಲಿಕೆ ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಆಯ್ದ ವಾಣಿಜ್ಯ ರಸ್ತೆಗಳಲ್ಲಿ ಎಐ ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಆಯುಕ್ತ ಕೆ.ಎನ್.ರಮೇಶ್ ತಿಳಿಸಿದರು.

12 ವಾಣಿಜ್ಯ ರಸ್ತೆ ಗುರ್ತು: ಕೆ.ಎನ್.ರಮೇಶ್

ಜಯನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿರುವ ಬೆನ್ನಲ್ಲೇ, ಪಾಲಿಕೆ ಎಚ್‌ಎಸ್‌ಆರ್ ಲೇಔಟ್‌ಗಾಗಿ ಪ್ರದೇಶವಾರು ಪಾರ್ಕಿಂಗ್ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಈ ಕುರಿತು ನಡೆಸಲಾದ ಸಮಗ್ರ ಅಧ್ಯಯನದ ಆಧಾರದ ಮೇಲೆ, ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ಒಟ್ಟು 18.02 ಕಿ.ಮೀ. ಉದ್ದದ ಪ್ರಮುಖ 12 ವಾಣಿಜ್ಯ ರಸ್ತೆಗಳನ್ನು ರಸ್ತೆ ಬದಿಯ ಸ್ಮಾರ್ಟ್ ಪಾರ್ಕಿಂಗ್ ಯೋಜನೆಗಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.

627ಕ್ಕೂ ಅಧಿಕ ಪಾರ್ಕಿಂಗ್ ಸ್ಲಾಟ್‌

12 ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಸುಮಾರು 3,355 ಹಾಗೂ ಕಾರುಗಳಿಗೆ 627ಕ್ಕೂ ಅಧಿಕ ಪಾರ್ಕಿಂಗ್ ಸ್ಲಾಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರೊಂದಿಗೆ ಸೈಕಲ್ ಹಾಗೂ ಆಟೋರಿಕ್ಷಾಗಳಿಗೆ ಪ್ರತ್ಯೇಕ ಸ್ಥಳಾವಕಾಶ, ಪ್ರಯಾಣಿಕರ ಪಿಕ್-ಅಪ್ ಮತ್ತು ಡ್ರಾಪ್ ಗೆ ಪ್ರತ್ಯೇಕ ಜಾಗ, ವಿಕಲಚೇತನರು ಮತ್ತು ತುರ್ತು ಸೇವಾ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದರು.

ಡಿಜಿಟಲ್ ಪಾವತಿ

ಪಾರ್ಕಿಂಗ್ ಶುಲ್ಕವಾಗಿ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ₹15 ಹಾಗೂ ಕಾರುಗಳಿಗೆ ₹30 ನಿಗದಿಪಡಿಸಲಾಗಿದ್ದು, ಎಲ್ಲಾ ಪಾವತಿಗಳನ್ನು ಸಂಪೂರ್ಣವಾಗಿ ಡಿಜಿಟಲ್ ವಹಿವಾಟಿನ ಮೂಲಕವೇ ನಡೆಸಲಾಗುತ್ತದೆ. ಪಾರ್ಕಿಂಗ್ ಸ್ಥಳಗಳ ಲಭ್ಯತೆ ನೈಜ ಸಮಯದಲ್ಲಿ ಪತ್ತೆಹಚ್ಚಲು ಮತ್ತು ನಿರಂತರ ಮೇಲ್ವಿಚಾರಣೆ ಮೂಲಕ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಎಐ ಆಧಾರಿತ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದರಿಂದ ಹಸ್ತಚಾಲಿತ ಶುಲ್ಕ ಸಂಗ್ರಹಣೆಯಲ್ಲಿ ಆಗುತ್ತಿದ್ದ ಸೋರಿಕೆ ಮತ್ತು ವಂಚನೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದರು.

ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನಿರ್ವಹಣೆ ಜವಾಬ್ದಾರಿ

ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆ ಮೂಲಕ ಪಾರ್ಕಿಂಗ್ ಸೇವೆ ಒದಗಿಸಲು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಪಾಲಿಕೆ ಹಾಗೂ ಪಾರ್ಕ್‌ಲೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಣ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

PREV
Read more Articles on
click me!

Recommended Stories

ಕಾಡುಗೊಲ್ಲ, ಹಟ್ಟಿಗೊಲ್ಲ ಎಸ್ಟಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ!
ಕೋಣನಕುಂಟೆ ಕ್ರಾಸ್‌ನಲ್ಲಿ 600 ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಾಣ: ಕೃಷ್ಣ ಬೈರೇಗೌಡ