
ಗಿರೀಶ್ ಗರಗ
ರಾಜ್ಯದಲ್ಲಿ ಪೊಲೀಸ್ ಪೇದೆ ಹುದ್ದೆ ನೇಮಕಾತಿ ವಯೋಮಿತಿ ಸಡಿಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಕನಿಷ್ಠ ವಯೋಮಿತಿಯನ್ನು 19 ರಿಂದ 18 ವರ್ಷಕ್ಕೆ ಹಾಗೂ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 27 ಮತ್ತು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರಿಗೆ 30 ವರ್ಷಕ್ಕೆ ನಿಗದಿ ಮಾಡಲು ಉದ್ದೇಶಿಸಲಾಗಿದೆ.
ಪೊಲೀಸ್ ಪೇದೆ ಹುದ್ದೆ ನೇಮಕಕ್ಕೆ ವಯೋಮಿತಿ ಸಡಿಲಿಕೆ ಕುರಿತ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಡಿಜಿಐಜಿ ಎಂ.ಎ.ಸಲೀಂ ಅವರಿಗೆ ಸೂಚನೆ ನೀಡಿದ್ದು, ತನ್ಮೂಲಕ ಪೊಲೀಸ್ ಪೇದೆ ಹುದ್ದೆ ಆಕಾಂಕ್ಷಿಗಳು ಹಲವು ವರ್ಷಗಳಿಂದ ವಯೋಮಿತಿ ಸಡಿಲಿಸುವಂತೆ ನಡೆಸುತ್ತಿದ್ದ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಿದಂತಾಗಿದೆ.
ಗುರುವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಈ ಸಂಬಂಧ ಪೊಲೀಸ್ ಪೇದೆ ನೇಮಕಾತಿಗೆ ಸದ್ಯ ನಿಗದಿಯಾಗಿರುವ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎರಡರಲ್ಲೂ ಸಡಿಲಿಕೆ ಮಾಡಿ ಪ್ರಸ್ತಾವನೆಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಪರಮೇಶ್ವರ್ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮೂಲಗಳ ಪ್ರಕಾರ ದಸರಾ ಹಬ್ಬಕ್ಕೂ ಮುನ್ನ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.
ಕನಿಷ್ಠ 18ಕ್ಕೆ ಇಳಿಕೆ:
ಸದ್ಯ ರಾಜ್ಯದಲ್ಲಿ ಪೊಲೀಸ್ ಪೇದೆ ನೇಮಕಾತಿಗೆ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಪೂರೈಸಬೇಕಿದೆ. ಅದೇ ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿ ಇನ್ನಿತರ ರಾಜ್ಯಗಳಲ್ಲಿ ವಯೋಮಿತಿ 18 ವರ್ಷಕ್ಕೆ ಸೀಮಿತ ಮಾಡಲಾಗಿದೆ. ಅದೇ ಮಾದರಿಯನ್ನು ಇದೀಗ ರಾಜ್ಯದಲ್ಲೂ ಅಳವಡಿಸಲಾಗುತ್ತಿದ್ದು, ಕನಿಷ್ಠ ವಯೋಮಿತಿ 18ಕ್ಕೆ ಇಳಿಸುವ ಚರ್ಚೆ ಮಾಡಲಾಗಿದೆ. ಈ ಕುರಿತು ಪ್ರಸ್ತಾವನೆಯಲ್ಲಿ ಉಲ್ಲೇಖಿಸುವಂತೆಯೂ ಅಧಿಕಾರಿಗಳಿಗೆ ಸಚಿವ ಡಾ.ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಗರಿಷ್ಠ 27-30ಕ್ಕೆ ನಿಗದಿ:
ಕನಿಷ್ಠ ವಯೋಮಿತಿಯ ಜತೆಗೆ ಗರಿಷ್ಠ ವಯೋಮಿಯಲ್ಲೂ ಬದಲಾವಣೆ ತರಲಾಗುತ್ತಿದೆ. ಹಾಲಿ ಸಾಮಾನ್ಯ ವರ್ಗದ ಗರಿಷ್ಠ ವಯೋಮಿತಿ 25 ವರ್ಷವಿದ್ದು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರಿಗೆ 27 ವರ್ಷವಿದೆ. ಸಾಮಾನ್ಯ ವರ್ಗದ ಗರಿಷ್ಠ ವಯೋಮಿತಿಯನ್ನು 27 ವರ್ಷಕ್ಕೆ ಹಾಗೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರ ಗರಿಷ್ಠ ವಯೋಮಿತಿಯನ್ನು 30 ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ.
ಈ ವಯೋಮಿತಿ ಸಡಿಲಿಕೆ ಎಲ್ಲ ಪ್ರಕಾರದ ಪೇದೆ ಹುದ್ದೆಗಳಿಗೆ ಅನ್ವಯವಾಗುವಂತೆ ಮಾಡಲಾಗುತ್ತಿದೆ. ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್), ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ), ನಾಗರಿಕ (ಸಿವಿಲ್) ವಿಭಾಗದ ಪೇದೆ ಹುದ್ದೆಗಳ ನೇಮಕಾತಿಯಲ್ಲೂ ಒಂದೇ ಬಗೆಯ ವಯೋಮಿತಿ ನಿಗದಿ ಮಾಡಲು ಗೃಹ ಇಲಾಖೆ ನಿರ್ಧರಿಸಿದೆ.
8 ಸಾವಿರ ಹುದ್ದೆಗಳು ಖಾಲಿ:
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಈ ಹಿಂದೆ ನೀಡಿದ ಮಾಹಿತಿಯಂತೆ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 8 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿಯಾಗಿವೆ. ಆ ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರ ಆರಂಭಿಸಲು ಗೃಹ ಇಲಾಖೆ ಚಿಂತನೆ ನಡೆಸಿದೆ. ಅದಕ್ಕೂ ಮುನ್ನ ವಯೋಮಿತಿ ಸಡಿಲಿಕೆ ಮಾಡುವುದು ಇಲಾಖೆ ಚಿಂತನೆ. ವಯೋಮಿತಿ ಕುರಿತು ಆದೇಶ ಹೊರಡಿಸಿದ ನಂತರ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆಯೂ ಗೃಹ ಇಲಾಖೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಮೂಲಗಳು ಹೇಳಿವೆ.
ಹಿಂದೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ
ಪೊಲೀಸ್ ಪೇದೆ ಹುದ್ದೆಗೆ ಸಂಬಂಧಿಸಿದ ವಯೋಮಿತಿಯನ್ನು 18 ವರ್ಷಕ್ಕೆ ಇಳಿಸುವುದು ಹಾಗೂ ಸಾಮಾನ್ಯ ವರ್ಗದವರ ಗರಿಷ್ಠ ವಯೋಮಿತಿಯನ್ನು 25ರಿಂದ 30 ವರ್ಷಕ್ಕೆ ಹಾಗೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರ ಗರಿಷ್ಠ ವಯೋಮಿತಿಯನ್ನು 27ರಿಂದ 33 ವರ್ಷಕ್ಕೆ ಹೆಚ್ಚಿಸುವುದು ಹಲವು ವರ್ಷಗಳ ಆಗ್ರಹವಾಗಿತ್ತು. ಅಲ್ಲದೆ, ಈ ಕುರಿತು ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಪೇದೆ ಹುದ್ದೆ ವಯೋಮಿತಿಯಲ್ಲಿ ಬದಲಾವಣೆ ತರುವಂತೆಯೂ ಕೋರಿದ್ದರು. ಇದೀಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ವಯೋಮಿತಿ ಬದಲಾವಣೆಗೆ ಸಂಬಂಧಿಸಿ ಪರಿಶೀಲಿಸುವಂತೆ ಗೃಹ ಇಲಾಖೆಗೆ ಸೂಚನೆ ನೀಡಿದ್ದರು. ಅದರ ಆಧಾರದಲ್ಲಿ ವಯೋಮಿತಿಯಲ್ಲಿ ಬದಲಾವಣೆ ಮಾಡಲು ಇಲಾಖೆ ಮುಂದಾಗಿದೆ.
ಕಾಯ್ದೆಯಲ್ಲಿ ತಿದ್ದುಪಡಿ
ಗೃಹ ಇಲಾಖೆಯಿಂದ ಸಲ್ಲಿಸಲಾಗುವ ಪ್ರಸ್ತಾವನೆಯನ್ನು ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು ಪರಿಶೀಲಿಸುವರು. ನಂತರ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಅಲ್ಲಿ ಅನುಮೋದನೆ ಪಡೆದು ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿನ ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿಗೆ ತಿದ್ದುಪಡಿ ತಂದು, ವಯೋಮಿತಿ ಸಡಿಲಿಕೆ ಅಂಶಗಳನ್ನು ಅಳವಡಿಸಲಾಗುತ್ತದೆ.