ಆಶಾ ಹೋರಾಟಕ್ಕೆ ಬೆಂಬಲಿಸಲು ಚೆನ್ನೈನಿಂದ ಬಂದ ವಿನೋದ್ ರಾಜ್; ಬರಿಗೈಯಲ್ಲಿ ಬರದೆ 10 ಮೂಟೆ ಅಕ್ಕಿ, ಧವಸ ಧಾನ್ಯ ತಂದ ನಟ

Published : Nov 25, 2026, 06:36 PM IST
Vinod Raj visit Freedom Park

ಸಾರಾಂಶ

ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ನಟ ವಿನೋದ್ ರಾಜ್ ಬೆಂಬಲ ನೀಡಿದ್ದಾರೆ. 10 ಮೂಟೆ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ನೀಡಿ, ಅವರ ಬೇಡಿಕೆಗಳನ್ನು ಈಡೇರಿಸಲು ಸಿಎಂಗೆ ಮನವಿ ಮಾಡಿದ್ದಾರೆ.

ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಎರಡು ವಾರಗಳಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಗೆ ಕನ್ನಡ ಚಿತ್ರರಂಗದ ಕಲಾವಿದರು ಬೆಂಬಲ ನೀಡಿದ್ದಾರೆ. ಇದೀಗ ಹಿರಿಯ ನಟ ವಿನೋದ್ ರಾಜ್ ಅವರು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಲು ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬರಿಗೈಯಲ್ಲಿ ಬಾರದೆ 10 ಮೂಟೆ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಹೊತ್ತು ತಂದಿದ್ದಾರೆ.

ಆಶಾ ಕಾರ್ಯಕರ್ತೆಯರ ಕಷ್ಟಕ್ಕೆ ಸ್ಪಂದಿಸಿರುವ ನಟ ವಿನೋದ್ ರಾಜ್, ಪ್ರತಿಭಟನಾ ಸ್ಥಳಕ್ಕೆ ಅಕ್ಕಿ, ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ತಂದು ನೆರವಾಗಿದ್ದಾರೆ. ಕೇವಲ ಮಾತಿನ ಬೆಂಬಲವಷ್ಟೇ ಅಲ್ಲದೆ, ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಆಶಾ ಕಾರ್ಯಕರ್ತೆಯರ ಜೊತೆ ನಿಂತಿದ್ದಾರೆ.

ಆಶಾ ಕಾರ್ಯಕರ್ತೆಯರ ಸೇವೆ ಸ್ಮರಿಸಿದ ವಿನೋದ್ ರಾಜ್, ಅವರ ನಿಸ್ವಾರ್ಥ ಕೆಲಸದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಕೊರೋನಾ ಸಮಯದಲ್ಲಿ ಜನರಿಗೆ ಧೈರ್ಯ ತುಂಬಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿದವರು ಆಶಾ ಕಾರ್ಯಕರ್ತೆಯರು. ನನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದ್ದಾಗಲೂ ಸೇವೆ ಮಾಡಿದವರು ಇದೇ ಆಶಾ ಕಾರ್ಯಕರ್ತೆಯರು. ಅವರು ದೇವರ ಸಮಾನ. ನಿಷ್ಕಲ್ಮಶ ಮನಸ್ಸಿನಿಂದ ಸಮಾಜದ ಸೇವೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ಇಂದು ನೋವಾಗಿದೆ. ನಾವೆಲ್ಲರೂ ಅವರ ಜೊತೆ ನಿಲ್ಲಬೇಕು. ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಆದಷ್ಟು ಬೇಗ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ಮನವಿ ಮಾಡಿದ ವಿನೋದ್ ರಾಜ್, ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ, ಅವರಿಗೆ ಒಳ್ಳೆಯ ಸುದ್ದಿ ನೀಡುವಂತೆ ಕೇಳಿಕೊಂಡಿದ್ದಾರೆ. ದಯವಿಟ್ಟು ಬೇಗ ಒಳ್ಳೆಯ ಸುದ್ದಿ ಕೊಡಿ ಸಿಎಂ ಅವರೇ. ಆಶಾ ಕಾರ್ಯಕರ್ತೆಯರ ಕಷ್ಟಗಳನ್ನು ಸರಿಪಡಿಸಿ. ಅವರ ಬೇಡಿಕೆಗಳನ್ನು ಈಡೇರಿಸಿದರೆ ನನಗೆ ಹಾಲು ಕುಡಿದಷ್ಟು ಸಂತೋಷವಾಗುತ್ತದೆ ಎಂದು ವಿನೋದ್ ರಾಜ್ ಹೇಳಿದ್ದಾರೆ.

ಆಶಾ ಹೋರಾಟಕ್ಕೆ ಸ್ಯಾಂಡಲ್‌ವುಡ್ ಬೆಂಬಲ

ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಚಿತ್ರರಂಗ ಬೆಂಬಲ ನೀಡಿದೆ. ನಟಿ ರಮ್ಯಾ, ಸುಮಲತಾ ಅಂಬರೀಶ್ ಸೇರಿದಂತೆ ಹಲವು ಕಲಾವಿದರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದ್ದರು. ನಟಿ ಕಾರುಣ್ಯ ರಾಮ್ ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಇದೀಗ ಹಿರಿಯ ನಟಿ ಪಂಕಜಾ ಕೂಡ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧ್ವನಿಯಾಗಿದ್ದಾರೆ. ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಹಿರಿಯ ನಟಿ ಪಂಕಜಾ, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರ್ಯಕರ್ತೆಯರ ಸಮಸ್ಯೆಗಳನ್ನು ಮಾನವೀಯತೆಯಿಂದ ಅರ್ಥಮಾಡಿಕೊಂಡು ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಕಸದ ಟೆಂಡರ್‌ನಲ್ಲಿ ₹660 ಕೋಟಿ ಅಕ್ರಮ ಆರೋಪ: ED ಮತ್ತು ಲೋಕಾಯುಕ್ತಕ್ಕೆ ಎನ್.ಆರ್. ರಮೇಶ್ ದೂರು
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಕಾರ್ಯಾಚರಣೆಗೆ ಅವಕಾಶ ಕೊಡಿ; ಸಿಎಂ ಮೊರೆಹೋದ ಹೋಟೆಲ್ ಮಾಲೀಕರ ಸಂಘ!