
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಏನಾಗ್ತಿದೆ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ. ರಾತ್ರಿಯಾಗುತ್ತಿದ್ದಂತೆ ಬೆಂಗಳೂರಿನ ರಸ್ತೆಗಳಲ್ಲಿ ಪುಂಡರ ಕಾಟ ಶುರುವಾಗುತ್ತದೆ. ಸಾಮಾನ್ಯವಾಗಿ ಬೆಂಗಳೂರು ರಸ್ತೆಗಳು ವಾಹನ ದಟ್ಟನೆ ಉಂಟಾಗುತ್ತಿರುತ್ತದೆ. ಬೈಕ್ ಸವಾರರು ಮತ್ತು ಚಾಲಕರು ಅತ್ಯಂತ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕಾಗುತ್ತದೆ. ಒಂದು ಕ್ಷಣ ಮೈಮರೆತರೂ ಅಪಘಾತವಾಗೋದು ನಿಶ್ವಿತ. ಒಬ್ಬರು ಮಾಡುವ ತಪ್ಪಿನಿಂದ ಇತರೆ ವಾಹನಗಳು ಜಖಂ ಆಗುತ್ತವೆ. ಇಂತಹ ಸಂದರ್ಭದಲ್ಲಿ ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆಯುತ್ತವೆ. ಕೆಲವೊಮ್ಮೆ ಈ ಗಲಾಟೆಗಳು ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತವೆ. ಇದೀಗ ಇಂತಹವುದೇ ಒಂದು ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಿಳೆ ಸೇರಿದಂತೆ ಮೂವರು ಜೊತೆಯಾಗಿ ಓರ್ವನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೇ 5ರ ರಾತ್ರಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ವಿಡಿಯೋವನ್ನು 'ನಮ್ಮ ಬೆಂಗಳೂರು' ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿ ಎಲ್ಲರೂ ರೌಡಿಗಳಾಗುತ್ತಿದ್ದರೆ ಎಂದು ಸಾಲನ್ನು ಸಹ ಬರೆದುಕೊಂಡಿದ್ದಾರೆ.
ಘಟನೆಯ ವಿವರ
ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಬೈಕಿಗೆ ಕಾರ್ ಡಿಕ್ಕಿ ಹೊಡೆದಿದೆ. ಕಾರ್ ಚಾಲಕ ಕ್ಷಮೆ ಕೇಳಲು ಒಪ್ಪಿಲ್ಲ. ಮತ್ತೆ ಮುಂದೆ ಮಹಿಳೆಯ ವಾಹನಕ್ಕೂ ಡಿಕ್ಕಿ ಹೊಡೆದಿದ್ದಾನೆ. ಕೊನೆಗೆ ಮಹಿಳೆಯ ಕುಟುಂಬಸ್ಥರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರ್ ಚಾಲಕ ಮದ್ಯ ಸೇವಿಸಿದ್ದ ಎಂದು ವಿಡಿಯೋ ಮೇಲೆ ಬರೆಯಲಾಗಿದೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಬೆಂಗಳೂರಿಗರು, ಇಂತಹ ಘಟನೆಗಳು ಸಾಮಾನ್ಯ. ಕಾರ್ ಚಾಲಕ ಮದ್ಯ ಸೇವಿಸಿಲ್ಲ ಅನ್ನಿಸುತ್ತೆ. ಇದು ಕೇವಲ ಅಪಘಾತಕ್ಕೆ ಸಂಬಂಧಿಸಿದ ಗಲಾಟೆ ಆಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಮಹಿಳೆ ಸೇರಿದಂತೆ ನಾಲ್ವರ ಮಧ್ಯೆ ಜಗಳ ನಡೆಯುತ್ತಿರುತ್ತದೆ. ಮಹಿಳೆಯೂ ಸೇರಿದಂತೆ ಮೂವರು ಒಬ್ಬನನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡುತ್ತಿರುತ್ತಾರೆ. ಈ ಹಲ್ಲೆಗೊಳಗಾದ ವ್ಯಕ್ತಿಯನ್ನು ಕಾರ್ ಚಾಲಕ ಎನ್ನಲಾಗುತ್ತಿದೆ. ಈ ವ್ಯಕ್ತಿಯೂ ಪ್ರತಿಯಾಗಿ ಹಲ್ಲೆ ಮಾಡಿದ್ದಾನೆ. ಎದುರಾಳಿಗಳು ಮೂವರಾಗಿದ್ದರಿಂದ ಈತನ ಮೇಲೆ ಹೆಚ್ಚು ಹಲ್ಲೆಯಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ಮತ್ತು ಹಲ್ಲೆ ನಡೆಸಿದ ಮೂವರು ಯಾರೆಂದು ತಿಳಿದು ಬಂದಿಲ್ಲ. ಈ ನಾಲ್ವರ ಘಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸಹ ನಿರ್ಮಾಣವಾಗಿದ್ದು, ಸುತ್ತಲೂ ಜನರಿದ್ರೂ ಯಾರು ಮಧ್ಯಸ್ಥಿಕೆಗೆ ಹೋಗಿಲ್ಲ.
ಹಲ್ಲೆಯ ವಿಡಿಯೋ ಲಿಂಕ್ https://www.facebook.com/reel/1212731480550405
ಆಟೋಗೆ ಬಸ್ ಡಿಕ್ಕಿಯಾಗಿ ಮೂವರ ಸಾವು
ಕೆಎಸ್‌ಆರ್‌ಟಿಸಿ ಬಸ್ ಮತ್ತು ಅಟೋ ನಡುವೆ ಭೀಕರ ಅಪಘಾತ ಸಂಭವಿಸಿ ಅಟೋದಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಉಳಿದ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-75 ಕುಣಿಗಲ್ ರಸ್ತೆಯ ನೆಲಮಂಗಲದ ಮಲ್ಲರಬಾಣವಾಡಿ ಕ್ರಾಸ್ ಬಳಿ ಸಂಭವಿಸಿದೆ.
ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿ ಹಾಗೂ ಆಟೋ ಚಾಲಕ ಶ್ರೀನಿವಾಸ್(45), ಪುಟ್ಟಮ್ಮ(55), ವರ್ಷಿಣಿ(13) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು. ಪುಟ್ಟಮ್ಮನ ಮಕ್ಕಳಾದ ವೆಂಕಟೇಶ್ (37), ನಾಗರತ್ನಮ್ಮ (38) ಲೇಖನಾ (11) ಗಾಯಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀನಿವಾಸ್ ಹಾಗೂ ಆತನ ಸಂಬಂಧಿಗಳಾದ ಪುಟ್ಟಮ್ಮ, ವೆಂಕಟೇಶ್, ನಾಗರತ್ನಮ್ಮ, ವರ್ಷಿಣಿ, ಲೇಖನಾ ಯಶವಂತಪುರ ನಿವಾಸಿಗಳಾಗಿದ್ದಾರೆ.
ಘಟನಾ ವಿವರ:ಕಳೆದೆರಡು ದಿನಗಳ ಹಿಂದೆ ಶುಭ ಸಮಾರಂಭಕ್ಕಾಗಿ ಶಾಂತಿನಗರಕ್ಕೆ ಪುಟ್ಟಮ್ಮ ಕುಟುಂಬ ತೆರಳಿತ್ತು. ಬೆಂಗಳೂರಿಗೆ ವಾಪಸ್ ಹೋಗಲು ನೆಲಮಂಗಲದಲ್ಲಿ ಆಟೋದಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮಲ್ಲರಬಾಣರವಾಡಿ ಕ್ರಾಸ್ ಬಳಿ ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಆಗಿದೆ. ಇದರಿಂದ ಆಟೋ ಚಾಲಕ ಶ್ರೀನಿವಾಸ್ ಮತ್ತು ಪುಟ್ಟಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ವರ್ಷಿಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಉಳಿದ ವೆಂಕಟೇಶ್ ಚೇತರಿಕೊಂಡಿದ್ದು, ನಾಗರತ್ನ, ಲೇಖನಾ ಗಂಭೀರ ಗಾಯಗೊಂಡಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಯಾವ ಹಾನಿಯೂ ಸಂಭವಿಸಿಲ್ಲ.