
ಬೆಂಗಳೂರು: ಪ್ರಮುಖ ಐಟಿ ಬಿಟಿ ಕಂಪನಿಗಳಿರುವ ಕೆ.ಆರ್.ಪುರ- ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯನ್ನು (ಒಆರ್‌ಆರ್) ₹450 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಎ), ಐಟಿ ಪಾರ್ಕ್ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಶನಿವಾರ ಸಮಾಲೋಚನಾ ಸಭೆ ನಡೆಸಿ ಮಾತನಾಡಿ, ಪ್ರಮುಖ ಜಂಕ್ಷನ್‌ಗಳು, ಸರ್ವಿಸ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಮೆಟ್ರೋ ಕಾಮಗಾರಿಗಳು, ಮಳೆನೀರು ಚರಂಡಿಗಳು, ಸಾರ್ವಜನಿಕ ಸಾರಿಗೆ ಸಂಪರ್ಕ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ನಾಗರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಒಆರ್‌ಆರ್ ದೇಶದ ಆರ್ಥಿಕತೆಗೆ ಮತ್ತು ಐಟಿ ಕ್ಷೇತ್ರದ ಅಭಿವೃದ್ಧಿ ಪ್ರಮುಖ ಮಾರ್ಗ. ಆದರೆ, ಕಳೆದ 30-40 ವರ್ಷಗಳಿಂದ ಅನಧಿಕೃತ ಹಾಗೂ ನಿಯಮಬಾಹಿರವಾಗಿ ಲೇಔಟ್‌ಗಳು ಮತ್ತು ಕಟ್ಟಡಗಳು ನಿರ್ಮಾಣಗೊಂಡ ಕಾರಣ ಅದ್ವಾನವಾಗಿದೆ. ಸಮರ್ಪಕ ರಸ್ತೆ, ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳ ಅಭಾವ ಎದುರಾಗಿದೆ. ಈ ಭಾಗದಲ್ಲಿನ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಶೇ.8ರಷ್ಟು ಜಾಗ ಮಾತ್ರ ರಸ್ತೆ ಮತ್ತು ಮೂಲಸೌಕರ್ಯಗಳಿಗೆ ಲಭ್ಯವಿದೆ ಎಂದು ಸಚಿವರು ತಿಳಿಸಿದರು.
ಅಕ್ರಮ ಕಟ್ಟಡಗಳಿಂದ ಪಾರ್ಕಿಂಗ್ ಜಾಗವಿಲ್ಲದೆ ವಾಹನಗಳು ರಸ್ತೆಯಲ್ಲೇ ನಿಲ್ಲಿಸಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಕೇವಲ ರಸ್ತೆಯ ಮೇಲ್ಮೈ ಸರಿಪಡಿಸುವುದರಿಂದ ದಟ್ಟಣೆ ಕಡಿಮೆಯಾಗುವುದಿಲ್ಲ. ಮೂಲಸೌಕರ್ಯ ವ್ಯವಸ್ಥೆಯನ್ನು ಸರಿಪಡಿಸುವುದು ಒಆರ್‌ಆರ್ ಸಮಗ್ರ ಅಭಿವೃದ್ಧಿಯ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ನಗರದಲ್ಲಿ 2 ಸಾವಿರ ಕೋಟಿ. ರು ವೆಚ್ಚದಲ್ಲಿ 260 ಕಿ.ಮೀ ರಾಜಕಾಲುವೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 400 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದು ಸಚಿವರು ತಿಳಿಸಿದರು.
ರಿಂಗ್ ರಸ್ತೆಯಲ್ಲಿನ ಪ್ರತಿಯೊಂದು ಜಂಕ್ಷನ್ ಭಿನ್ನವಾಗಿವೆ. ಹೀಗಾಗಿ, ಅಲ್ಲಿನ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕ ವಿನ್ಯಾಸಗಳನ್ನು ರೂಪಿಸಿ ಫ್ರಿ ಲೆಫ್ಟ್ ಟರ್ನ್, ಯು ಟರ್ನ್ ಸೇರಿದಂತೆ ಹೊಸ ಪ್ರಯೋಗಗಳನ್ನು ಮಾಡುವ ಉದ್ದೇಶವಿದೆ. 3 ತಿಂಗಳ ಅವಧಿಗೆ ಪ್ರಯೋಗಾತ್ಮಕವಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಅದು ಯಶಸ್ವಿಯಾದರೆ ಮುಂದುವರೆಸಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರವರೆಗಿನ ಮೆಟ್ರೋ ರೈಲು ಮಾರ್ಗವನ್ನು ಮುಂದಿನ ವರ್ಷದ ವೇಳೆಗೆ ಪೂರ್ಣಗೊಳಿಸಿ ಜನರ ಓಡಾಟಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಮೆಟ್ರೋ ಮಾರ್ಗದುದ್ದಕ್ಕೂ ಸ್ಕೈವಾಕ್ ಹಾಗೂ ನಿಲ್ದಾಣಗಳಿಗೆ ಬಸ್ ಸಂಪರ್ಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಉದ್ಘಾಟನೆಗೂ ಮೊದಲೇ ವಾಲಿಕೊಂಡ ಕೂಡ್ಲುನಲ್ಲಿರುವ ವಸತಿ ಕಟ್ಟಡ, 18 ಮಹಡಿ ಅಪಾರ್ಟ್‌ಮೆಂಟ್ ಕೆಡವಲು ನಿರ್ಧಾರ
ಜಗತ್ತಿನ ಪ್ರಮುಖ ಐಟಿ ಕಂಪನಿಗಳಿರುವ ಔಟರ್ ರಿಂಗ್ ರಸ್ತೆಯನ್ನು ಮಾದರಿಯಾಗಿ, ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಮೆಟ್ರೋ ಕಾಮಗಾರಿ ಮುಗಿಯುತ್ತಿದ್ದಂತೆ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲೇ ಅತ್ಯಂತ ಜನಪ್ರಿಯ ಇಂಟರ್‌ಸಿಟಿ ಮಾರ್ಗವಾಗಿ ಹೊರಹೊಮ್ಮಿದ ಬೆಂಗಳೂರು-ಮೈಸೂರು
ಇದನ್ನೂ ಓದಿ: ಬೆಂಗಳೂರು ಟೆಕ್ಕಿ ಸಿಂಗಲ್ ಇದ್ದಾಗ ₹80 ಲಕ್ಷಕ್ಕೆ 1BHK ಖರೀದಿಸಿ, ಮದುವೆಯಾದ್ಮೇಲೆ 2BHK ಅಪ್‌ಗ್ರೇಡ್ ಆಗ್ಬೇಕಾ