ಬನ್ನೇರುಘಟ್ಟ ಉದ್ಯಾನವನಕ್ಕೆ 10 ವಿದೇಶಿ ವನ್ಯಜೀವಿ ಶೀಘ್ರದಲ್ಲಿ ಸೇರ್ಪಡೆ: ಸಚಿವ ಈಶ್ವರ ಖಂಡ್ರೆ

Kannadaprabha News   | Kannada Prabha
Published : Jun 19, 2025, 08:06 AM IST
Eshwar khandre

ಸಾರಾಂಶ

ಮುಂಬರುವ ತಿಂಗಳಲ್ಲಿ ಜಾಗ್ವಾರ್‌, ಚಿಂಪಾಂಜಿ, ಕ್ಯಾಪಚೀನ್‌ ಕೋತಿ ಸೇರಿ 10 ವಿದೇಶಿ ವನ್ಯಜೀವಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸೇರ್ಪಡೆಯಾಗಲಿದೆ, ಜೊತೆಗೆ ಬೃಹತ್ ಮತ್ಸ್ಯಾಗಾರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು (ಜೂ.19): ಮುಂಬರುವ ತಿಂಗಳಲ್ಲಿ ಜಾಗ್ವಾರ್‌, ಚಿಂಪಾಂಜಿ, ಕ್ಯಾಪಚೀನ್‌ ಕೋತಿ ಸೇರಿ 10 ವಿದೇಶಿ ವನ್ಯಜೀವಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸೇರ್ಪಡೆಯಾಗಲಿದೆ, ಜೊತೆಗೆ ಬೃಹತ್ ಮತ್ಸ್ಯಾಗಾರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ವಿಕಾಸಸೌಧದಿಂದ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿ, ಮುಂದಿನ ನಾಲ್ಕೈದು ತಿಂಗಳಲ್ಲಿ ಹಂಟಿಂಗ್ ಚೀತಾ, ಕ್ಯಾಪಚಿನ್ ಕೋತಿಯನ್ನು ದಕ್ಷಿಣ ಅಮೇರಿಕದಿಂದ ವಿನಿಮಯ ಮಾಡಿಕೊಳ್ಳಲಾಗುವುದು.

ಮುಂದಿನ ವರ್ಷ ಚಿಂಪಾಂಜಿ, ಜಾಗ್ವಾರ್, ಪೂಮಾ (ಉತ್ತರ ಅಮೆರಿಕ ಸಿಂಹ) ಸೇರಿ ಒಟ್ಟು 10 ವಿದೇಶಿ ವನ್ಯಜೀವಿಗಳು ಬನ್ನೇರುಘಟ್ಟಕ್ಕೆ ಆಗಮಿಸಲಿವೆ ಎಂದು ತಿಳಿಸಿದರು. ಬನ್ನೇರುಘಟ್ಟದಲ್ಲಿ ಸೀಮಿತ ಆವರಣ ಪ್ರದೇಶದೊಳಗೆ ರೂಪಿಸಿರುವ ವನ್ಯಜೀವಿ ಸಫಾರಿಗಳಿಗೆ ಪ್ರಸ್ತುತ ಡೀಸೆಲ್ ವಾಹನಗಳನ್ನು ಬಳಸುತ್ತಿರುವುದರಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣ ತಗ್ಗಿಸಲು ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೇಶದಲ್ಲೇ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ವಾಹನ ಪರಿಚಯಿಸಲಾಗುತ್ತಿದೆ ಎಂದರು. ಇಂದು ಚಾಲನೆ ನೀಡಿರುವ ವಿದ್ಯುತ್ ಚಾಲಿತ ಬಸ್, 22 ಆಸನಗಳನ್ನು ಹೊಂದಿದ್ದು, 100 ಕೆ.ವಿ. ಬ್ಯಾಟರಿ ಸಾಮರ್ಥ್ಯದ್ದಾಗಿದೆ.

2 ಗಂಟೆ ಚಾರ್ಜ್ ಮಾಡಿದರೆ 160 ಕಿ.ಮೀ. ಅಂದರೆ ಎಂಟು ಟ್ರಿಪ್ ಸಂಚರಿಸಲಿದೆ. ಹಾಲಿ ಒಂದು ಬಸ್ ಮಾತ್ರವೇ ಕಾರ್ಯಾರಂಭ ಮಾಡಲಿದ್ದು, 2027ರೊಳಗೆ ಬನ್ನೇರುಘಟ್ಟ ಉದ್ಯಾನವನ್ನು (ಟ್ಯ್ರಾಕ್ಟರ್ ಇತ್ಯಾದಿ ಉಪಯೋಗಿ ವಾಹನ ಹೊರತು ಪಡಿಸಿ) ಪಳೆಯುಳಿಕೆ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸಲಾಗುವುದು ಎಂದರು. ಬನ್ನೇರುಘಟ್ಟ ಮೃಗಾಲಯ ಮತ್ತು ಸಫಾರಿ ವೀಕ್ಷಣೆಗೆ ವಾರಾಂತ್ಯದಲ್ಲಿ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಕಾರಣ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ದಾಖಲೆಯ ಪ್ರವಾಸಿಗರ ಆಗಮನ: ಕಳೆದ ಮೇ ತಿಂಗಳಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸುಮಾರು 2.85 ಸಾವಿರ ಪ್ರವಾಸಿಗರು ಆಗಮಿಸಿದ್ದು, ಇದು ದಾಖಲೆಯಾಗಿದೆ. ಚಿರತೆ ಸಫಾರಿ ಈಗ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದರು.

ಬೃಹತ್ ಮತ್ಯಾಗಾರ ನಿರ್ಮಾಣ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೊಂದು ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಮತ್ಸ್ಯಾಗಾರವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು. ಬನ್ನೇರುಘಟ್ಟ ಉದ್ಯಾನದ ವ್ಯಾಪ್ತಿಯಲ್ಲಿ ಇರುವ ಏಳು ಕೆರೆಗಳ ಜೊತೆಗೆ ಈಗ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಪ್ರಾಣಿಗಳಿಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದಲೂ ನೀರು ಪಡೆಯಲಾಗುತ್ತಿದ್ದು, ಮತ್ಯಾಗಾರಕ್ಕೆ ನೀರಿನ ಕೊರತೆ ಇರುವುದಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೀಬ್ರಾ ಸಾವು ತನಿಖೆಗೆ ಆದೇಶ: ಇತ್ತೀಚೆಗೆ ಬನ್ನೇರುಘಟ್ಟ ಉದ್ಯಾನದಲ್ಲಿ ಜೀಬ್ರಾ ಮತ್ತು ನೀಲಗಾಯ್ ಸಾವಿಗೀಡಾಗಿರುವ ಬಗ್ಗೆ ಸಿಸಿಎಫ್ ಅವರಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮೃಗಾಲಯದಲ್ಲಿ ಮತ್ತು ಜೈವಿಕ ವನದಲ್ಲಿ ಯಾವುದೇ ವನ್ಯಜೀವಿ ಅಸಹಜವಾಗಿ ಸಾವಿಗೀಡಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಕಲಬುರಗಿಯಲ್ಲಿ ನೂತನವಾಗಿ ಮೃಗಾಲಯ ನಿರ್ಮಿಸಲಾಗುತ್ತಿದ್ದು, ಬರುವ ಡಿಸೆಂಬರ್ ಹೊತ್ತಿಗೆ ಸಿದ್ಧವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!