ಬೆಂಗಳೂರು : ಚಲಿಸುತ್ತಿದ್ದ ಮೆಟ್ರೋ ರೈಲು ಬೋಗಿಯಲ್ಲಿ ಹೊಗೆ

By Kannadaprabha NewsFirst Published Oct 21, 2019, 8:54 AM IST
Highlights

ಬೆಂಗಳೂರಿನ ನಮ್ಮ ಮೆಟ್ರೋ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ. ಆದರೆ ಇದರಿಂದ ಯಾವುದೇ ರೀತಿಯ ಅವಘಡಗಳಾಗಿಲ್ಲ. 

ಬೆಂಗಳೂರು [ಅ.21]:  ನಗರದ ಮೆಟ್ರೋ ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ನಿಲ್ದಾಣದಲ್ಲಿ ರೈಲಿನ ಬೋಗಿಯೊಂದರ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ಘಟನೆ ಸಂಜೆ ಜರುಗಿದೆ.

ಸಂಜೆ ಐದು ಗಂಟೆ ಸುಮಾರಿಗೆ ಮೆಟ್ರೋ ರೈಲು ಸ್ವಾಮಿ ವೇಕಾನಂದ ರೈಲು ನಿಲ್ದಾಣಕ್ಕೆ ಬಂದಿದೆ. ಈ ವೇಳೆ ರೈಲಿನ ಬೋಗಿಯೊಂದರ ಕೆಳಭಾಗದಲ್ಲಿ ಅಳವಡಿಸಿರುವ ಬ್ಯಾಟರಿಯಿಂದ ಹೊಗೆ ಬರಲು ಆರಂಭಿಸಿದೆ. ರೈಲು ನಿಲ್ದಾಣ ಪ್ರವೇಶಿಸುವ ಸಂದರ್ಭದಲ್ಲಿ ನಿಲ್ದಾಣದ ಸಿಬ್ಬಂದಿ ಬೋಗಿಯ ಕೆಲಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ರೈಲು ನಿಲ್ದಾಣದಲ್ಲಿ ನಿಂತ ತಕ್ಷಣ ಪ್ರಯಾಣಿಕರನ್ನು ರೈಲಿನಿಂದ ಇಳಿಸಿದ್ದಾರೆ. ಬಳಿಕ ಆ ರೈಲನ್ನು ಬೈಯಪ್ಪನಹಳ್ಳಿ ಡಿಪೋಗೆ ಕಳುಹಿಸಿದ್ದಾರೆ.

ಚಲಿಸುತ್ತಿದ್ದ ರೈಲಿನ ಬೋಗಿಯ ಕೆಳಭಾಗದಿಂದ ಹೊಗೆ ಬರುತ್ತಿರುವುದನ್ನು ಮೊದಲಿಗೆ ಕಂಡ ನಿಲ್ದಾಣದ ಸಿಬ್ಬಂದಿ ಆತಂಕಗೊಂಡಿದ್ದರು. ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ತಮ್ಮ ಮೊಬೈಲ್‌ ಫೋನ್‌ಗಳಿಂದ ಬ್ಯಾಟರಿಯಿಂದ ಹೊಗೆ ಬರುತ್ತಿದ್ದದ್ದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಇದು ಸಹ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಲು ಕಾರಣವಾಯಿತು. ಈ ಹಿಂದೆ ತಾಂತ್ರಿಕ ದೋಷದಿಂದ ಮಾರ್ಗ ಮಾಧ್ಯೆ ರೈಲು ಕೆಟ್ಟು ನಿಲ್ಲುವ ಘಟನೆಗಳು ಜರುಗಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೀಗ ಮೊದಲ ಬಾರಿಗೆ ಚಲಿಸುವ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬೋಗಿಯ ಬ್ಯಾಟರಿಯ ಬಳಿ ಹೊಗೆ ಬಂದಿದೆ. ಆದರೆ ಈ ಹೊಗೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ವೇಳೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿಸಲಾಗಿದೆ. ತಜ್ಞರ ಪರೀಕ್ಷೆಯಿಂದ ಹೊಗೆಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

click me!