ಹುಲಿ ದಾಳಿಗೆ ಮೂರು ಕುರಿ ಸಾವು| ಪುಟ್ಟಮರಿ ಜೊತೆಯಲ್ಲಿ ಕಾಣಿಸಿಕೊಂಡ ಹುಲಿ| ಭತ್ತದ ಗದ್ದೆಗಳ ಬಳಿ ಆಕಸ್ಮಿಕವಾಗಿ ಮರಿ ಸಹಿತ ಕಾಣಿಸಿಕೊಂಡ ಹುಲಿ| ಗ್ರಾಮಸ್ಥರಲ್ಲಿ ಆತಂಕ| ಮರಕ್ಕೆ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ದಾಳಿ ನಡೆಸಿದ ಹುಲಿ | ಅವುಗಳ ರುಂಡಗಳನ್ನು ಮುಂಡದಿಂದ ಬೇರ್ಪಡಿಸಿ, ರುಂಡಗಳನ್ನು ಮಾತ್ರ ತನ್ನೊಂದಿಗೆ ಹೊತ್ತೊಯ್ದಿದೆ|
ಖಾನಾಪುರ[ಅ.16]: ಹುಲಿಯೊಂದು ತನ್ನ ಪುಟ್ಟಮರಿಯ ಜೊತೆಯಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಮೂರು ಕುರಿಗಳನ್ನು ಕೊಂದು ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಹೊರವಲಯದಲ್ಲಿ ರೈತ ದೇಮಣ್ಣ ಖನಗಾಂವಿ ಅವರ ತೋಟದ ಮನೆ ಸಮೀಪ ಮಂಗಳವಾರ ನಡೆದಿದೆ.
ಗ್ರಾಮದಿಂದ 4 ಕಿಮೀ ದೂರದ ದುರ್ಗಾಡಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಭತ್ತದ ಗದ್ದೆಗಳ ಬಳಿ ಆಕಸ್ಮಿಕವಾಗಿ ಮರಿ ಸಹಿತ ಕಾಣಿಸಿಕೊಂಡ ಹುಲಿ, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ದೇಮಣ್ಣ ಅವರ ಮನೆಯ ಹಿಂದಿನ ಮರಕ್ಕೆ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ದಾಳಿ ನಡೆಸಿದ ಹುಲಿ ಅವುಗಳ ರುಂಡಗಳನ್ನು ಮುಂಡದಿಂದ ಬೇರ್ಪಡಿಸಿದೆ. ರುಂಡಗಳನ್ನು ಮಾತ್ರ ತನ್ನೊಂದಿಗೆ ಹೊತ್ತೊಯ್ದಿದೆ. ಬಳಿಕ ಮಧ್ಯಾಹ್ನ ಸಮಯದಲ್ಲಿ ಗ್ರಾಮದ ದನಗಾಹಿಗಳಿಗೆ ಹುಲಿಯ ಚೀರಾಟ ಕೇಳಿಸಿದ್ದು, ಹುಲಿಯ ಚೀರಾಟ ಆಲಿಸಿದ ದನಕರುಗಳು ಹುಲ್ಲು ಮೇಯುವುದನ್ನು ಬಿಟ್ಟು ದಿಕ್ಕಾಪಾಲಾಗಿ ಓಡತೊಡಗಿವೆ. ಇದೇ ಸಂದರ್ಭದಲ್ಲಿ ಹುಲಿ ಒಂದು ದನದ ಮೇಲೆ ದಾಳಿ ನಡೆಸಿದೆ ಎಂದು ನಂದಗಡ ಗ್ರಾಮಸ್ಥರು ಹೇಳಿದ್ದಾರೆ. ಆದರೆ ಹುಲಿಯು ದನದ ಮೇಲೆ ದಾಳಿ ನಡೆಸಿರುವುದನ್ನು ಅರಣ್ಯ ಇಲಾಖೆ ನಿರಾಕರಿಸಿದೆ.
ನಂದಗಡ ಹೊರವಲಯದಲ್ಲಿ ಹುಲಿಯ ಆಗಮನದ ಸುದ್ದಿ ಹರಡುತ್ತಲೇ ರೈತರು ತಮ್ಮ ಕೃಷಿ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ತಮ್ಮ ತಮ್ಮ ಮನೆಗಳತ್ತ ಧಾವಿಸಿದ್ದಾರೆ. ದನಗಾಹಿಗಳು ತಮ್ಮ ಜಾನುವಾರುಗಳನ್ನು ಮರಳಿ ಮನೆಗಳಿಗೆ ಸಾಗಿಸಿದ್ದು, ನಂತರ ಈ ವಿಷಯವನ್ನು ಅರಣ್ಯ ಇಲಾಖೆಗೆ ತಲುಪಿಸಿದ್ದಾರೆ. ಸುದ್ದಿ ತಿಳಿದ ಖಾನಾಪುರ ಆರ್‌ಎಫ್‌ಒ ಬಸವರಾಜ ವಾಳದ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಹೆಜ್ಜೆ ಗುರುತು ಪರಿಶೀಲಿಸಿದ್ದಾರೆ.
ಇದೆ ವೇಳೆ ಹುಲಿ ದಾಳಿಯಿಂದ ಪ್ರಾಣ ಕಳೆದುಕೊಂಡ ಕುರಿಗಳ ಮಾಲೀಕರನ್ನು ಶಾಸಕಿ ಡಾ.ಅಂಜಲಿ ನಿಂಬಾಳಕರ, ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ, ಎಸಿಎಫ್ ಶಶಿಧರ, ಲೋಂಡಾ ಆರ್.ಎಫ್.ಒ. ಎಸ್.ಎಸ್ ನಿಂಗಾಣಿ ಹಾಗೂ ಇತರರು ಭೇಟಿ ಮಾಡಿ ಕುರಿಗಳ ಸಾವಿಗೆ ಪ್ರತಿಯಾಗಿ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಈ ಕುರಿತು ಖಾನಾಪುರ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ
ಆತಂಕ ಪಡದಂತೆ ಅರಣ್ಯ ಇಲಾಖೆ ಮನವಿ
ನಂದಗಡ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ನಂದಗಡ, ಹಲಸಾಲ, ಕರಂಜಾಳ ಮತ್ತು ಸಾವರಗಾಳಿ ಪ್ರದೇಶದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ದಟ್ಟಅರಣ್ಯ ವ್ಯಾಪಿಸಿದೆ. ಈ ಅರಣ್ಯದಲ್ಲಿ ಹುಲಿ, ಚಿರತೆ ಸೇರಿ ಅನೇಕ ವನ್ಯಮೃಗಗಳು ವಾಸಿಸುತ್ತಿವೆ. ಈ ಪ್ರಾಣಿಗಳು ಆಹಾರಕ್ಕಾಗಿ ಕಾಡಿನಿಂದ ಹೊರಬಂದು ಕಾಡಿನ ಅಕ್ಕಪಕ್ಕ ಇರುವ ಕೃಷಿ ಜಮೀನುಗಳ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಈ ಹಿಂದೆ ಹುಲಿ ಕುರಿಗಳನ್ನು ಬೇಟೆಯಾಡಿದ ಪ್ರದೇಶದಲ್ಲಿ ಹಲವು ಬಾರಿ ಹುಲಿ, ಚಿರತೆ ಮತ್ತಿತರ ಪ್ರಾಣಿಗಳು ಬಂದು ಹೋಗಿವೆ.
ಸಾಮಾನ್ಯವಾಗಿ ಆಹಾರ ಅರಸಿ ಅರಣ್ಯದಿಂದ ಕೃಷಿ ಭೂಮಿಯತ್ತ ಆಗಮಿಸುವ ವನ್ಯಜೀವಿಗಳು ಕೆಲ ಸಮಯದ ನಂತರ ಮತ್ತೆ ತಮ್ಮ ಸ್ವಸ್ಥಾನಕ್ಕೆ ಹೋಗುತ್ತವೆ. ಅದೇ ರೀತಿ ಪಕ್ಕದ ಅರಣ್ಯದಿಂದ ಆಗಮಿಸಿದ ಹುಲಿ ನಂದಗಡ ಗ್ರಾಮದ ಬಳಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಮರೆಯಾಗಿದೆ. ಹುಲಿ ದಾಳಿಯಿಂದ ಮೃತಪಟ್ಟಕುರಿಗಳ ಮಾಲೀಕರಿಗೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ಹುಲಿ ಕಾಣಿಸಿಕೊಂಡ ಪ್ರದೇಶದಲ್ಲಿ ರೈತರು ಕೆಲ ದಿನಗಳವರೆಗೆ ಓಡಾಡಬಾರದು, ತಮ್ಮ ಪ್ರಾಣಿಗಳನ್ನು ಬಿಡಬಾರದು ಮತ್ತು ಯಾವುದೇ ಕಾರಣಕ್ಕೂ ಹುಲಿಯನ್ನು ಕೆಣಕುವ ಸಾಹಸಕ್ಕೆ ಕೈ ಹಾಕಬಾರದು ಎಂದು ಅರಣ್ಯ ಇಲಾಖೆ ನಂದಗಡ ಹಾಗೂ ಸುತ್ತಮುತ್ತಲಿನ ಭಾಗದ ರೈತರಲ್ಲಿ ಮನವಿ ಮಾಡಿದೆ.