
ಬೆಳಗಾವಿ (ನ.01) ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ರಾಜ್ಯದೆಲ್ಲೆಡೆ ಮನೆ ಮಾಡಿದೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ಇದರ ನಡುವೆ ಎಂದಿನಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕಿರಿಕ್ ಮಾಡಿದ್ದಾರೆ. ನಾಡದ್ರೋಹಿ ಎಂಇಎಸ್ ಸದಸ್ಯರು ಉಪಟಳ ಹೆಚ್ಚಾಗುತ್ತಿದ್ದಂತೆ ಎಂಇಎಸ್ ಮುಖಂಡ ಶುಭಂ ಶಳಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಭಾಷಾ ಸಾಮರಸ್ಯ, ಶಾಂತಿ ಭಂಗ ಸೇರಿ ಹಲವು ಆರೋಪಗಳಡಿಯಲ್ಲಿ ಶುಭಂ ಶಳಕೆಯನ್ನು ವಶಕ್ಕೆ ಪಡೆಯಲಾಗಿದೆ.
ಎಂಇಎಸ್ ಪುಂಡರು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಒಂದಿಲ್ಲ ಒಂದು ಕಿರಿಕ್ ಮಾಡಿ ಕನ್ನಡಿಗರನ್ನು ಕೆರಳಿಸುತ್ತಾರೆ. ಈ ಬಾರಿ ಕನ್ನಡ ರಾಜ್ಯೋತ್ಸವ ಸಂಭ್ರಮದ ದಿನವೇ ಕರಾಳ ದಿನಾಚರಣೆ ಮಾಡಿದ್ದು ಮಾತ್ರವಲ್ಲ, ಅನುಮತಿ ಪಡೆಯದೇ ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. ಹೀಗಾಗಿ ಎಸಿಪಿ ಸಂತೋಷ ಸತ್ಯನಾಯಕ್ ನೇತೃತ್ವದಲ್ಲಿ ಪೊಲೀಸರು ಬೆಳಗಾವಿ ನಗರದ ಗೋವಾವೇಸ್ ಸರ್ಕಲ್ ಬಳಿ ವಶಕ್ಕೆ ಪಡೆದಿದ್ದಾರೆ. ಭಾಷಾ ಸಾಮರಸ್ಯ, ಶಾಂತಿ ಭಂಗ ಸೇರಿ ಶುಭಂ ಶಳಕೆ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿ ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅನುಮತಿ ಇಲ್ಲದೇ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನದ ಮೆರವಣಿಗೆ ನಡೆಸಲಾಗಿದೆ. ಮೆರವಣಿಗೆ ನಡೆಸಿದ ನಾಡದ್ರೋಹಿಗಳ ವಿರುದ್ಧ ಕಠಿಣ ಕ್ರಮವಾಗಲಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದ್ದಾರೆ. ನಾನು ಲಖಿತವಾಗಿಯೂ ಅನುಮತಿ ನೀಡಿಲ್ಲ, ಮೌಖಿಕವಾಗಿಯೂ ಅನುಮತಿ ನೀಡಿಲ್ಲ . ಅನುಮತಿ ನೀಡಿಲ್ಲ ಅಂದರೂ ಮೆರವಣಿಗೆ ಮಾಡಿದ್ದಾರೆ. ಹೀಗಾಗಿ ಎಲ್ಲ ಸಂಘಟಕರ ವಿರುದ್ಧವೂ ದೂರು ದಾಖಲಿಸಿಕೊಳ್ಳುತ್ತೇವೆ. ಬಳಿಕ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಬೋರಸೆ ಎಚ್ಚರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಆಗಬಾರದು ಅನ್ನೋ ಕಾರಣಕ್ಕೆ ಭದ್ರತೆ ನೀಡಲಾಗಿದೆ ಎಂದಿದ್ದಾರೆ. ಇದೇ ವೇಳೆ ಎಂಇಎಸ್ ಪುಂಡನ ಜೊತೆಗೆ ಪೊಲೀಸ್ ಅಧಿಕಾರಿಯ ಸೆಲ್ಫಿ ತೆಗೆದುಕೊಂಡ ವಿಚಾರದ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ನಗರ ಪೊಲೀಸ್ ಆಯುಕ್ತ ಹೇಳಿದ್ದಾರೆ.
ಬೆಳಗಾವಿಯಲ್ಲಿ MES ಪುಂಡಾಟಿಕೆ ವಿಚಾರದ ಕುರಿತು ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಭಾಷೆ ಮೇಲೆ ಆಕ್ರಮಣ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ನೆಲ, ಜಲ, ಭಾಷೆ ಮೇಲೆ ಪದೇ ಪದೇ ದಬ್ಬಾಳಿಕೆಯಾಗುತ್ತಿದೆ. ಇದಕ್ಕೆ ತಿಲಾಂಜಲಿ ಹೇಳಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ಕೇಂದ್ರ ಸರ್ಕಾರ ಆ ರಾಜ್ಯಗಳನ್ನ ಕರೆದು ಮಾತನಾಡಬೇಕು. ಭಾಷೆ, ನೆಲ,ಜಲ, ಪರಿಸ್ಥಿತಿ ನೋಡಿ ತೀರ್ಮಾನ ತೆಗೆದುಕೊಂಡರೆ ಮಾತ್ರ ಸರಿಯಾಗುತ್ತೆ. ರಾಜಕೀಯ ಶಕ್ತಿಯನ್ನ ಒಳಗೊಂಡ ಕೇಂದ್ರ ಸರ್ಕಾರ ಸೂಕ್ತ ನಿರ್ದೇಶನ ಕೊಡದ ಹಿನ್ನಲೆಯಲ್ಲಿ ಈ ಘಟನೆಗಳು ಮರುಕಳಿಸುತ್ತಿದೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.
ನಮ್ಮ ಕನ್ನಡಿಗರ ಕಾಪಾಡಲು ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಅತಿಯಾದ ಕಠಿಣ ಕ್ರಮ ಕೈಗೊಳ್ಳಬಹುದು. ಮಹಾರಾಷ್ಟ್ರದಲ್ಲೂ ಕನ್ನಡಿಗರಿದ್ದಾರೆ, ಮಹಾರಾಷ್ಟ್ರ ಸಹಕಾರ ನಮಗೂ ಬೇಕು, ನಮ್ಮ ಸಹಕಾರ ಅವರಿಗೂ ಬೇಕು. ಎಲ್ಲವನ್ನು ಅವಲೋಕನಾ ಮಾಡಿ ನಮ್ಮ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಅನೇಕಬಾರಿ ನಿರ್ದೇಶನ ಕೊಟ್ಟು ಕ್ರಮ ಕೈಗೊಂಡಿದೆ.
ಇದನ್ನೆಲ್ಲಾ ತಡೆಯುವ ಅಧಿಕಾರ ಕೇಂದ್ರಕ್ಕೆ ಮಾತ್ರ . ತಮಿಳುನಾಡು ಸಮಸ್ಯೆ ಸಮಸ್ಯೆ ನೇ ಅಲ್ಲ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಪಿಲ್ ಸಲ್ಲಿಸಿದ್ರೆ ಒಂದು ದಿನದಲ್ಲಿ ಸರಿಹೋಗುತ್ತೆ. ನೀರು ಇದ್ದಾಗ ಬಿಡ್ತೇವೆ, ಇಲ್ಲ ಅಂದಾಗ ಮಾತ್ರ ಸಮಸ್ಯೆ ಅಷ್ಟೆ. ರಾಜಕೀಯ ಹಿತ ಶಕ್ತಿ ಮೇಲೆ ಈ ರೀತಿ ನಡೆಯುತ್ತೆ. ನಮ್ಮ ಭಾಷೆ, ಜನ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.