
ಅಥಣಿ(ಜೂ.09) ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತಕ್ಕೀಡಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಅಥಣಿ ಶಾಸಕರು ತಮ್ಮ ರೇಂಜ್ ರೋವರ್ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಪಿಕ್‌ಅಪ್ ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಶಾಸಕರ ಕಾರು ಜಖಂ
ಕಾರ್ಯಕ್ರಮ ನಿಮಿತ್ತ ಶಾಸಕರು ದರೂರ ಗ್ರಾಮದಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತ ನಡೆದಿದೆ. ಶಾಸಕಕರ ರೇಂಜ್ ರೋವರ್ ಡಿಫೆಂಡರ್ ಕಾರಿಗೆ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದಿದೆ. ಡಿಫೆಂಡರ್ ಕಾರಿನ ಬಲಭಾಗ, ಬಲ ಬದಿ ನಜ್ಜು ಗುಜ್ಜಾಗಿದೆ. ಗರಿಷ್ಠ ಸುರಕ್ಷತೆ ಕಾರಾಗಿದ್ದ ಕಾರಣ ಶಾಸಕ ಲಕ್ಷ್ಮಣ ಸವದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಬಿಜೆಪಿಯ ಹಿರಿಯ ನಾಯಕರಾಗಿದ್ದ ಲಕ್ಷ್ಮಣ ಸವದಿ ಕಳೆದ ವಿಧಾನಸಭೆ ಚುನಾಣವೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದರು. ಕಾಂಗ್ರೆಸ್‌ನಿಂದ ಗೆದ್ದ ಬಂದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಆದರೆ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಲಕ್ಷ್ಮಣ ಸವದಿ ರೀತಿಯಲ್ಲಿ ಜಗದೀಶ್ ಶೆಟ್ಟರ್‌ಗೂ ಟಿಕೆಟ್ ನಿರಾಕರಿಸಲಾಗಿತ್ತು. ಶೆಟ್ಟರ್ ಕೂಡ ಕಾಂಗ್ರೆಸ್ ಸೇರಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದು. ಆದರೆ ಶೆಟ್ಟರ್ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಳಿಕ ಬಿಜೆಪಿಗೆ ವಾಪಾಸ್ಸಾಗಿದ್ದರು.