ಕಿಡ್ನಾಪರ್ ಗಳಿಂದ ತಪ್ಪಿಸಿಕೊಂಡು ಪೋಷಕರ ಮಡಿಲಿಗೆ ಒಂದೂವರೆ ವರ್ಷದ ಮಗು

By Web DeskFirst Published Oct 15, 2019, 9:54 AM IST
Highlights

ಕಿಡ್ನಾಪರ್ ಗಳಿಂದ ತಪ್ಪಿಸಿಕೊಂಡು ಒಂದೂವರೆ ವರ್ಷದ ಮಗುವೊಂದು ಬಸ್ಸಿನಲ್ಲಿ ಸಂಚರಿಸಿ  ಪೋಷಕರ ಮಡಿಲು ಸೇರಿದೆ. 

ಬೈಲಹೊಂಗಲ [ಅ.15]:  ದುಷ್ಕರ್ಮಿಗಳು ಅಪಹರಣ ಮಾಡಿದ ಮಗುವೊಂದು ಅವರಿಂದ ತಪ್ಪಿಸಿಕೊಂಡು, ನಾನಾ ರೀತಿಯ ಆಟಗಳನ್ನು ಆಡಿ ಕೊನೆಗೆ ಹೆತ್ತವರ ಮಡಿಲು ಸೇರುತ್ತದೆ.

-ಇದು ಇಂಗ್ಲಿಷ್‌ನ ‘ಬೇಬಿಸ್‌ ಡೇ ಔಟ್‌’ ಚಿತ್ರದ ಒಂದು ಸಾಲಿನ ಚಿತ್ರ ಸಾರಾಂಶ. ಈ ಚಿತ್ರದಂತೆಯೇ ಒಂದೂವರೆ ವರ್ಷದ ಮಗುವೊಂದು ತಾನಾಗಿಯೇ ಬಸ್‌ ಹತ್ತಿಕೊಂಡು ಕೊನೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಪತ್ತೆಯಾಗಿ ಹೆತ್ತವರ ಮಡಿಲು ಸೇರಿದ ಘಟನೆ ಸೋಮವಾರ ನಡೆದಿದೆ.

ಧಾರವಾಡದಿಂದ ಬೈಲಹೊಂಗಲ ನಡುವೆ ಸಂಚರಿಸುವ ಬಸ್‌ ಉಪ್ಪಿನ ಬೆಟಗೇರಿ ಗ್ರಾಮದ ಬಸ್‌ ಸ್ಟಾಪಿನಲ್ಲಿ ಎಂದಿನಂತೆ ನಿಂತಿತ್ತು. ಈ ವೇಳೆ ಬಸ್‌ಸ್ಟಾಪಿನ ಹತ್ತಿರದಲ್ಲಿಯೇ ಇದ್ದ ಮನೆಯೊಂದರ ಒಂದೂವರೆ ವರ್ಷದ ಮಗುವೊಂದು ತನ್ನ ಪಾಲಕರ ಕಣ್ಣು ತಪ್ಪಿಸಿಕೊಂಡು ಬಸ್‌ ಏರಿದೆ. ಮಗುವನ್ನು ಬಸ್‌ನೊಳಗೆ ಕಂಡ ನಿರ್ವಾಹಕ ಕೂಡ ಮಗು ಯಾರದ್ದೋ ಪ್ರಯಾಣಿಕರದ್ದು ಇರಬಹುದು ಎಂದು ಭಾವಿಸಿ ಸುಮ್ಮನಿದ್ದಾರೆ. ಕೊನೆ ನಿಲ್ದಾಣವಾದ ಬೈಲಹೊಂಗಲಕ್ಕೆ ಬಸ್‌ ತಲುಪಿದಾಗ ಎಲ್ಲರೂ ಇಳಿದು ಹೋಗಿದ್ದರೂ ಮಗು ಮಾತ್ರ ಬಸ್‌ನಲ್ಲಿಯೇ ಉಳಿದುಕೊಂಡಿದೆ. ಆಗ ನಿರ್ವಾಹಕ ಹಾಗೂ ಸಾರ್ವಜನಿಕರು ಮಗುವನ್ನು ಸಾರಿಗೆ ಇಲಾಖೆಯ ಕಂಟ್ರೋಲ್‌ ರೂಮ್‌ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಅಲ್ಲಿಯೇ ಇದ್ದ ಆಟೋ ಚಾಲಕರು ಮಗುವನ್ನು ಸಮಾಧಾನಪಡಿಸಿ, ವಾಟ್ಸಪ್‌ ಗ್ರೂಪ್‌ಗೆ ಮಗುವಿನ ಕುರಿತು ವಿವರ ಮಾಹಿತಿ ಹರಿಬಿಟ್ಟಿದ್ದಾರೆ. ಬಳಿಕ ಈ ವಿಚಾರ ಪೋಷಕರಿಗೆ ಗೊತ್ತಾಗಿದೆ. ಅವರಿಗೆ ಮಗು ಒಪ್ಪಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಾಟ್ಸಪ್‌ನಲ್ಲಿ ಬಂದಿರುವ ಮಾಹಿತಿ ತಿಳಿದ ಪೋಷಕರು ಬೈಲಹೊಂಗಲಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಾಮಾಜಿಕ ಹೋರಾಟಗಾರ ರಫೀಕ ಬಡೇಘರ ಹಾಗೂ ಆಟೋ ಚಾಲಕರ ಸಂಘದ ಸದಸ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ಪೋಷಕರನ್ನು ವಿಚಾರಣೆ ನಡೆಸಿ, ನಂತರ ಮಗುವನ್ನು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.

click me!