ಗೋಕಾಕ: ಪ್ರತಿಷ್ಠೆಯನ್ನೇ ಪಣಕಿಟ್ಟ ಜಾರಕಿಹೊಳಿ ಸಹೋದರರು!

By Web DeskFirst Published Nov 7, 2019, 10:38 AM IST
Highlights

ಸಹೋದರರ ನಡುವಿನ ಸಮರಕ್ಕೆ ಕ್ಷೇತ್ರದ ಜನತೆಯ ಮೌನ | ಹೈವೋಲ್ಟೇಜ್ ಕಣವಾಯಿತೇ ಕ್ಷೇತ್ರ|ಸಹೋದರರ ನಡುವೆ ಆರೋಪ-ಪ್ರತ್ಯಾರೋಪ| ಸಹೋದರರ ನಡುವೆ ಮಾತ್ರವಲ್ಲ, ಅವರ ಬೆಂಬಲಿಗರ ನಡುವೆಯ ಆರಂಭವಾದ ವಾಕ್ಸಮರ| 

ಗೋಕಾಕ[ನ.7]: ಉಪಕದನದಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿರುವ ಗೋಕಾಕನಲ್ಲಿ ಈಗಿನಿಂದಲೇ ಜಿದ್ದಾಜಿದ್ದಿಯ ರಾಜಕೀಯ ಆರಂಭಗೊಂಡಿದೆ. ಜತೆಗೆ ಸಹೋದರರ ನಡುವೆ ಆರೋಪ-ಪ್ರತ್ಯಾರೋಪಗಳು ಕೂಡ ಜೋರಾಗಿವೆ. ಇದರ ನಡುವೆ ಅವರ ಬೆಂಬಲಿಗರ ಕೂಡಯಾವ ಕಡೆ ವಾಲುತ್ತಾರೆ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಸತೀಶ ಜಾರಕಿಹೊಳಿ ಅವರು ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. 

ಇದುವರೆಗೆ ಹೇಗೆ ಚುನಾವಣೆಯನ್ನು ನಡೆಸಿದ್ದರೋ ಅದಕ್ಕಿಂತಲೂ ತುಸು ಹೆಚ್ಚಾಗಿಯೇ ಸವಾಲಾಗಿ ಸ್ವೀಕರಿಸಿರುವ ಸಹೋದರರು ತಮ್ಮ ಪ್ರತಿಷ್ಠೆಯನ್ನೇ ಪಣಕ್ಕೆ ಇಟ್ಟಿದ್ದಾರೆ. ಉಪ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಜಾರಕಿಹೊಳಿ ಸಹೋದರರ ನಡುವೆ ಮಾತ್ರವಲ್ಲ, ಅವರ ಬೆಂಬಲಿಗರ ನಡುವೆಯ ವಾಕ್ಸಮರದ ಭರಾಟೆ ಕೂಡ ತುಸು ಹೆಚ್ಚಾಗಿಯೇ ನಡೆದಿದೆ. ಸದ್ಯ ಉಪ ಚುನಾವಣೆ ಇದೆ ಮುಂದೇನು ಎಂಬ ಪ್ರಶ್ನೆ ಕೂಡ ಕ್ಷೇತ್ರದ ಜನರನ್ನುಕಾಡುತ್ತಿದೆ. 

ಮೌನಕ್ಕೆ ಜಾರಿದರೆ ಜನರು?: 

ಕ್ಷೇತ್ರದಲ್ಲಿ ಕಳೆದ 20-25  ವರ್ಷಗಳಿಂದ ರಮೇಶ ಜಾರಕಿಹೊಳಿಯೇ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ. ಜತೆಗೆ ಆಡಳಿತ ನಡೆಸುತ್ತಾ ಬಂದಿದ್ದಾರೆ. ಇದುವರೆಗೆ ಇಲ್ಲದ ಭ್ರಷ್ಟಾಚಾರ ಆರೋಪಗಳು ಈಗ ಎಲ್ಲಿಲ್ಲದ ಸದ್ದು ಮಾಡಲು ಆರಂಭಿಸಿವೆ. ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಅಸ್ತಿತ್ವ ಸಾಧಿಸಬೇಕು ಎಂಬುವುದು ಉಭಯ ಸಹೋದರರ ಆಶಯ. ಆದರೆ, ಇವೆಲ್ಲಕ್ಕಿಂತ ಮುಖ್ಯವಾದ ಅಂಶವೆಂದರೆ, ಇಲ್ಲಿ ಸಹೋದರರೇ ನೇರವಾಗಿ ಅಖಾಡಕ್ಕೆ ಇಳಿದಿರುವುದರಿಂದ ಆರೋಪ ಪ್ರತ್ಯಾರೋಪಗಳು ಅವರವರ ಮಟ್ಟದಲ್ಲಿ ನಡೆಯುತ್ತಿದೆ. ಹೀಗಾಗಿ ಅವರ ಬೆಂಬಲಿಗರು ಮೌನದಲ್ಲಿಯೇ ಉತ್ತರ ನೀಡುತ್ತಿದ್ದು, ಯಾರನ್ನು ಬೆಂಬಲಿಸಿ ಬಹಿರಂಗವಾಗಿ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಸಾಧನೆಯನ್ನೇ ಮುಂದಿಟ್ಟುಕೊಂಡು ಮಾಜಿ ಸಚಿವ, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಮುಂದಿನ ಹೋರಾಟದ ರೂಪುರೇಶೆಗಳನ್ನು ತಯಾರಿಸಿದ್ದಾರೆ. ಮಾತ್ರವಲ್ಲ,ತಮ್ಮ ಬೆಂಬಲಿಗ ಪಡೆಯನ್ನು ತಳಮಟ್ಟದಿಂದ ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯಕ್ಕೆ ಸದ್ದಿಲ್ಲದೆ ಅಣಿಯಾಗಿದ್ದಾರೆ. ಇವೆಲ್ಲದರ ಜತೆಗೆ ತಮ್ಮೆಲ್ಲ ಪ್ರತಿಷ್ಠೆ ಮತ್ತು ಶ್ರಮವನ್ನು ಹಾಕಿದ್ದಾರೆ. ಹೀಗಾಗಿ ರಮೇಶ ಜಾರಕಿಹೊಳಿ ಅವರು ಮತ್ತಷ್ಟು ಹಿಡಿತ ಸಾಧಿಸುತ್ತಿರುವುದು ವೇದ್ಯವಾಗುತ್ತಿದೆ ಎಂಬುವುದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತು. ಆದರೆ, ತಮ್ಮ ಸಹೋದರನ ಗೆಲುವಿನ ನಾಗಾಲೋಟ ಮತ್ತು ಹಿಡಿತವನ್ನು ಸಡಿಲಗೊಳಿಸಬೇಕು ಎಂಬ ಕಾರಣಕ್ಕೆ ಶಾಸಕ ಸತೀಶ ಜಾರಕಿಹೊಳಿ ಅವರು ಕೂಡ ಕ್ಷೇತ್ರದಲ್ಲಿ ಕಾಲಿಗೆಚಕ್ರ ಕಟ್ಟಿಕೊಂಡು ತಮ್ಮ ಪಡೆಯನ್ನೇ ಕಟ್ಟಿಕೊಂಡುತಿರುಗಾಡುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಷ್ಟು ಮಾತ್ರವಲ್ಲ, ಕ್ಷೇತ್ರದಲ್ಲಿ ನಡೆದಿರುವ ನೆಲಮಟ್ಟದ ಭ್ರಷ್ಟಾಚಾರವನ್ನು ಹೆಕ್ಕಿ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ,ಈ ತಂತ್ರಗಾರಿಕೆ ಅವರಿಗೆ ಫಲ ಕೊಡುತ್ತದೆಯೇ ಎಂಬ ಪ್ರಶ್ನೆ ಕ್ಷೇತ್ರದ ಜನರೇ ಉತ್ತರಿಸಬೇಕಿದೆ. ಗೋಕಾಕ ಕ್ಷೇತ್ರದ ಕೆಲವು ಗ್ರಾಪಂಗಳಲ್ಲಿ ಕಡತ ಪರಿಶೀಲನೆಯನ್ನೂ ಮಾಡಿರುವ ಅವರು ಭ್ರಷ್ಟಾಚಾರದ ಕುರಿತು ಸಮರ್ಪಕ ದಾಖಲೆಗಳು ಸಿಕ್ಕಿರುವ ಅಥವಾ ಸಿಗದಿರುವ ಕುರಿತೂ ಯಾವ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕ್ಷೇತ್ರದಲ್ಲಿ ಮಾತ್ರ ಯಾಕೆ ಈ ರೀತಿಯಾದ ಹುಡುಕಾಟ ಮಾಡಬೇಕು ಎಂಬ ಪ್ರಶ್ನೆ ರಮೇಶ ಪಾಳಯದಿಂದ ಹರಿದು ಬರುತ್ತಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಕ್ಷೇತ್ರದಲ್ಲಿ ಮುಂದಿನ ಹೋರಾಟ ಎಷ್ಟರ ಮಟ್ಟಿಗೆ ಹೋಗುತ್ತದೆ ಎಂಬುವುದನ್ನು ನಿರೀಕ್ಷೆ ಮಾಡುವುದು ಕೂಡ ಕಷ್ಟ ಸಾಧ್ಯ.
 

click me!