ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದ ಅಥಣಿಯ ಸರ್ಕಾರಿ ಶಾಲೆ!

By Web DeskFirst Published Nov 13, 2019, 11:21 AM IST
Highlights

ಗಡಿಶಾಲೆಯಲ್ಲಿ ಮಕ್ಕಳ ಸಂಖ್ಯೆ 90 ರಿಂದ 207ಕ್ಕೆ ಏರಿಕೆ|ಮಕ್ಕಳ ಕಲಿಕೆಗೆ ಪೂರಕವಾಗಿ ಬುಕ್‌ ಬ್ಯಾಂಕ್‌ ಸೌಲಭ್ಯ ಆರಂಭ| ವಿದ್ಯಾರ್ಥಿಗಳು  ತಮಗೆ ಅವಶ್ಯ ಎನಿಸಿದರೆ ಬುಕ್‌, ಪೆನ್‌, ಪೆನ್ಸಿಲ್‌, ರಬ್ಬರ್‌ ಇನ್ನಿತರ ವಸ್ತುಗಳು ಬೇಕಾದಾಗ ಬುಕ್‌ ಬ್ಯಾಂಕ್‌ನಿಂದ ಪಡೆಯಬಹುದಾಗಿದೆ| ಪಡೆದ ವಸ್ತುಗಳನ್ನು ತಮಗೆ ಅನುಕೂಲವಾದಾಗ ಮರಳಿಸುವ ಸೌಲಭ್ಯ ಕಲ್ಪಿಸಲಾಗಿದೆ|ಗೋಡೆ ಮತ್ತು ಕಿಟಕಿಗಳು ಪಾಠ ಹೇಳುತ್ತವೆ|

ಸಿ.ಎ.ಇಟ್ನಾಳಮಠ

ಅಥಣಿ[ನ.13]: ಸರ್ಕಾರಿ ಶಾಲೆ ಅಂದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೂಗು ಮುರಿಯುವವರೇ ಜಾಸ್ತಿ. ಆದರೆ, ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಯೊಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆದಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದೆ. ಫಲವಾಗಿ 2014ರಲ್ಲಿ 90 ಮಕ್ಕಳಿದ್ದ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಬಡಕಂಬಿ ತೋಟದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಕಾರ್ಯಕ್ಷಮತೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಕಂಡ ಪಾಲಕರು ಸ್ವಯಂ ಪ್ರೇರಣೆಯಿಂದ ಖಾಸಗಿ ಶಾಲೆ ಬಿಡಿಸಿ ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಕೇವಲ 5 ಗುಂಟೆ ವಿಸ್ತೀರ್ಣದಲ್ಲಿ 4 ಕೋಣೆಗಳನ್ನು ಹೊಂದಿರುವ ಈ ಶಾಲೆಗೆ 1958ರಲ್ಲಿ ಇದೇ ತೋಟದ ಮಹಾಂತೇಶ ಐಗಳಿ ಎಂಬವರು ಜಮೀನನ್ನು ದಾನವಾಗಿ ನೀಡಿದ್ದಾರೆ.

ಬುಕ್‌ ಬ್ಯಾಂಕ್‌:

ಮಕ್ಕಳ ಕಲಿಕೆಗೆ ಪೂರಕವಾಗಿ ಬುಕ್‌ ಬ್ಯಾಂಕ್‌ ಸೌಲಭ್ಯ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಒಂದೊಮ್ಮೆ ತಮಗೆ ಅವಶ್ಯ ಎನಿಸಿದರೆ ಬುಕ್‌, ಪೆನ್‌, ಪೆನ್ಸಿಲ್‌, ರಬ್ಬರ್‌ ಇನ್ನಿತರ ವಸ್ತುಗಳು ಬೇಕಾದಾಗ ಬುಕ್‌ ಬ್ಯಾಂಕ್‌ನಿಂದ ಪಡೆಯಬಹುದಾಗಿದೆ. ಹೀಗೆ ಪಡೆದ ವಸ್ತುಗಳನ್ನು ತಮಗೆ ಅನುಕೂಲವಾದಾಗ ಮರಳಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಹೈಟೆಕ್‌ ಶೌಚಾಲಯ:

ಮುಖ್ಯಶಿಕ್ಷಕ ಎ.ಎಸ್‌.ಪೂಜಾರಿ ಅವರು ಎಸ್‌ಡಿಎಂಸಿ ಸದಸ್ಯರ ಸಹಕಾರದಿಂದ ಸರ್ಕಾರದ ಅನುದಾನದ ಜತೆಗೆ ತಮ್ಮ ಕೈಯಿಂದಲೂ ಹಣ ಖರ್ಚು ಮಾಡಿ ಶಾಲೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಹೈಟೆಕ್‌ ಶೌಚಾಲಯ ನಿರ್ಮಿಸಿದ್ದಾರೆ. ಇದರೊಂದಿಗೆ ಶಾಲೆಯಲ್ಲಿ ನೈರ್ಮಲ್ಯದ ವಾತಾವರಣ ಸೃಷ್ಟಿಗೆ ಕಾರಣರಾಗಿದ್ದಾರೆ. ಇನ್ನು ಶಾಲೆಯ ಮಕ್ಕಳು ಓದು, ಬರಹದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ. 8 ವಿದ್ಯಾರ್ಥಿಗಳು ಇತ್ತೀಚೆಗೆ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಗೊಂಡಿದ್ದಾರೆ. ಸರ್ಕಾರಿ ಶಾಲೆಯ ಸಮವಸ್ತ್ರ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲೇ ವಾರದಲ್ಲಿ ಎರಡು ದಿನ ಟೀ ಶರ್ಟ್‌ ಮತ್ತು ಪ್ಯಾಂಟ್‌ ಸಮವಸ್ತ್ರದ ವ್ಯವಸ್ಥೆ ಮಾಡಲಾಗಿದೆ.

ಕೊರತೆಯೇನಿದೆ..?

ಈ ಶಾಲೆಗೆ ಆಟದ ಮೈದಾನದ ಕೊರತೆಯಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆ ಆವರಣವಿಲ್ಲ. ಶಾಲೆಗೆ ಕನಿಷ್ಠ 8 ಕೋಣೆಗಳ ಅಗತ್ಯವಿದ್ದು, ಈಗ ಕೇವಲ ನಾಲ್ಕು ಕೋಣೆಗಳಲ್ಲಿ 207 ಮಕ್ಕಳಿಗೆ 1 ರಿಂದ 7ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇನ್ನೂ 4 ಕೊಠಡಿಗಳ ಅಗತ್ಯವಿದ್ದು, ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಗೋಡೆ ಮತ್ತು ಕಿಟಕಿಗಳು ಪಾಠ ಹೇಳುತ್ತವೆ..!

ಮುಖ್ಯೋಪಾಧ್ಯಾಯ ಎ.ಎಸ್‌.ಪೂಜಾರಿ ಅವರ ಕಾರ್ಯಕ್ಷಮತೆಯಿಂದ ಶಾಲೆಯ ಗೋಡೆಗಳು ಮತ್ತು ಕಿಟಕಿ ಬಾಗಿಲುಗಳ ಮೇಲೆ ಕನ್ನಡ ನಾಣ್ಣುಡಿಗಳು, ಗಾದೆಮಾತುಗಳು, ವಿಜ್ಞಾನ ಸೇರಿದಂತೆ ಮಾಹಿತಿಗಳು ಚಿತ್ತಾಕರ್ಷಕವಾಗಿ ಮೂಡಿವೆ. ಶಾಲೆಯ ಪರಿಸರ, ಶಿಕ್ಷಕರ ಶ್ರಮ ಮತ್ತು ಗುಣಮಟ್ಟದ ಬೋಧನಾ ಚಟುವಟಿಕೆಗಳಿಗೆ ಪೋಷಕರು ಮನಸೋತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ  ಮುಖ್ಯೋಪಾಧ್ಯಾಯ ಎ.ಎಸ್‌.ಪೂಜಾರಿ ಅವರು, ಸರ್ಕಾರಿ ಸೌಲಭ್ಯಗಳನ್ನು ಮಕ್ಕಳಿಗೆ ನೀಡುವ ಮೂಲಕ ಎಲ್ಲರೂ ಪರಿಶ್ರಮ ವಹಿಸಿ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದೇವೆ. ಖಾಸಗಿ ಶಾಲೆಯ ಮಕ್ಕಳಿಗೆ ಸರಿಸಮನಾದ ಸವಲತ್ತುಗಳನ್ನು ನೀಡಲು ಶಾಲಾ ಮೇಲುಸ್ತುವಾರಿ ಸಮಿತಿಯವರು ಸಹಕಾರ ನೀಡುತ್ತಿದ್ದಾರೆ. ಈ ಶಾಲೆಗೆ ನಾನು ಬಂದಾಗ ಅಂದರೆ 2014ರಲ್ಲಿ ಕೇವಲ 90 ಮಕ್ಕಳು ದಾಖಲಾಗಿದ್ದರು. ಹಂತ ಹಂತವಾಗಿ ಶಾಲಾ ಸುಧಾರಣೆ ಮತ್ತು ಕಲಿಕೆ ಗುಣಮಟ್ಟ ನೋಡಿ ಪಾಲಕರು ಸ್ವಯಂ ಪ್ರೇರಿತರಾಗಿ ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

click me!