ಗೋಕಾಕ ಭ್ರಷ್ಟಾಚಾರದ ಹಾಡು ಭಾರೀ ವೈರಲ್

By Web DeskFirst Published Oct 10, 2019, 10:20 AM IST
Highlights

ದಿನದಿಂದ ದಿನಕ್ಕೆ ಜಾರಕಿಹೊಳಿ ಸಹೋದರರ ನಡುವಿನ ಕಲಹ ಹೆಚ್ಚಾಗುತ್ತಿದೆ| ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಅವರ ನಡುವಿನ ಮನಸ್ತಾಪಗಳು ಈಗ ಮತ್ತಷ್ಟು ಬೀದಿಗೆ ಬಂದಿದೆ| ರಮೇಶ ಅವರ ಅಳಿಯ ಅಂಬಿರಾವ್ ಪಾಟೀಲ ಹಾಗೂ ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಹೊಸದೊಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ| 

ಗೋಕಾಕ(ಅ.10): ದಿನದಿಂದ ದಿನಕ್ಕೆ ಜಾರಕಿಹೊಳಿ ಸಹೋದರರ ನಡುವಿನ ಕಲಹ ಹೆಚ್ಚಾಗುತ್ತಿದೆ. ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಅವರ ನಡುವಿನ ಮನಸ್ತಾಪಗಳು ಈಗ ಮತ್ತಷ್ಟು ಬೀದಿಗೆ ಬಂದಿದೆ. 

ಇದುವರೆಗೆ ಮಾತಿನ ಏಟು, ಎದಿರೇಟು ನೀಡುತ್ತಿದ್ದ ಸತೀಶ ಜಾರಕಿಹೊಳಿ ಈಗ ಒಂದು ಹೆಜ್ಜೆ ಮುಂದೆ ಹೋಗಿ ಗೋಕಾಕ ಕ್ಷೇತ್ರದಲ್ಲಿ ತೀವ್ರ ಸಂಚಾರ ನಡೆಸುತ್ತಿದ್ದಾರೆ. ಮಾತ್ರವಲ್ಲ ರಮೇಶ ಅವರ ಅಳಿಯ ಅಂಬಿರಾವ್ ಪಾಟೀಲ ಹಾಗೂ ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಹೊಸದೊಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಿಶುನಾಳ ಷರೀಫ ಅವರು ಬರೆದಿರುವ ‘ಗುಡಿಯ ನೋಡಿರಣ್ಣ ದೇಹದ ಗುಡಿಯ ನೋಡಿರಣ್ಣ’ ಹಾಡಿನ ಶೈಲಿಯಲ್ಲಿಯೇ ‘ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ’ ಎಂಬ ಹಾಡು ಈಗ ಭಾರಿ ವೈರಲ್ ಆಗಿದೆ. ಹಾಡಿನಲ್ಲಿ ನಗರಸಭೆಯವರು ಕೋಟಿ ಕೋಟಿ ಕೊಳ್ಳೆ ಹೊಡೆದಿರುವುದು, ಪ್ರವಾಹ ಬಂದು ನಗರಕ್ಕೆ ಅಪ್ಪಳಿಸಿದಾಗ ಜನರು ಅನುಭವಿಸಿದ ಸಂಕಷ್ಟ, ಪ್ರವಾಹ ಸಂತ್ರಸ್ತರಿಗೆ ನೀಡಿದ ಪರಿಹಾರದಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದ ನುಡಿಗಳು ಹಾಡಿನಲ್ಲಿವೆ. 

ಪಕ್ಕಾ ಜನಪದ ಶೈಲಿಯಲ್ಲಿಯೇ ಈ ಹಾಡನ್ನು ರಚನೆ ಮಾಡಲಾಗಿದೆ. ಗೋಕಾಕ ನಗರಸಭೆಯ ಭ್ರಷ್ಟಾಚಾರದ ಕರ್ಮ ಕಾಂಡ ಎಂದು ತಲೆ ಬರಹ ಕೊಟ್ಟು ವಿಡಿಯೋ ಹಾಡನ್ನು ಮಾಡಲಾಗಿದೆ. 
ಹಾಡಿನ ಪ್ರಮುಖ ಅಂಶಗಳು ಹೀಗಿವೆ

ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ ಗೋಕಾವಿ ನಾಡಿನ ನಗರ ಸಭೆಯವ್ರ ಕೋಟಿ ಕೋಟಿ ಕೊಳ್ಳೆ ಹೊಡೆದಾರೋ ಹಣ ಹೊಳೆಯು ಬಂದು ಹೊಕ್ಕಿ, ಜನರು ಅಳತಿದ್ರು ಬಿಕ್ಕಿ ಬಿಕ್ಕಿ ಸಹಾಯ ಮಾಡಲು ಬಂದರು ಸಾಗಿ. ದುಪ್ಪಟ್ಟು ಹಣವನು ತಿಂದ್ರು ತೇಗಿ ಒಂದು ಎರಡು ಗಾಡಿ ಸಹಾಯ ಮಾಡಿದಂಗ ಮಾಡಿ, ಜನರ ಕಣ್ಣಿಗೆ ಮಣ್ಣೆರಚಾರೋ ಪುಡಿ ನಗರಸಭೆ ಕೆಲ ಸದಸ್ಯರೆಲ್ಲ ರಾಜಕಾರಣಿಗಳ ಜೊತೆ ಕೂಡಿ... ಹೀಗೆ ಹಾಡು ಸಾಗುತ್ತದೆ. 

ಇಷ್ಟು ಮಾತ್ರವಲ್ಲ, ಹಾಡಿನ ವಿಡಿಯೋ ಆರಂಭವಾಗುತ್ತಿದ್ದಂತೆ ನಗರಸಭೆಯವರು ಒಂದು ಟ್ರಿಪ್ ಟ್ರ್ಯಾಕ್ಟರ್ ಬಾಡಿಗೆ 400 ಕೊಟ್ಟು 1200 ಖರ್ಚು ಹಾಕಿದ್ದಾರೆ. ತಲಾ 800 ನಂತೆ 80 ಲಕ್ಷ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರಂಭದಲ್ಲೇ ಶಾಸಕ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಮತ್ತು ನಗರಸಭೆ ಆಯುಕ್ತರ ಫೋಟೊ ಹಾಕಲಾಗಿದೆ.

ಉಪಚುನಾವಣೆಯ ಮೇಲೆ ಕಣ್ಣು: 

ರಮೇಶ ಜಾರಕಿಹೊಳಿ ಅವರನ್ನು ಅನರ್ಹಗೊಳಿಸಿದ ನಂತರ ಚುನಾವಣಾ ಆಯೋಗ ಡಿ.5ರಂದು ಉಪ ಚುನಾವಣೆಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ಶತಾಯಗತಾಯ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರೊಟ್ಟಿಗೆ ಕ್ಷೇತ್ರದಲ್ಲಿ ತೀವ್ರ ಪ್ರಚಾರ ನಡೆಸಿದ್ದಾರೆ. ಮಾತ್ರವಲ್ಲ ಈ ಹಾಡನ್ನು ಕೂಡ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದ ಮತದಾರರನ್ನು ತಮ್ಮತ್ತ ಸೆಳೆಯುವ ತಂತ್ರಗಾರಿಕೆ ಅನುಸರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಇತ್ತೀಚೆಗೆ ಬಂದ ಪ್ರವಾಹದಿಂದ ಗೋಕಾಕ ಜನತೆ ಕಣ್ಣೀರು ಹಾಕುತ್ತಿದ್ದರು. ಆದರೆ ಗೋಕಾಕ ನಗರಸಭೆಯವರು ಚೆಲ್ಲಾಟ ಆಡುತ್ತಿದ್ದರು. ಇದರ ಸತ್ಯಾಂಶವನ್ನು ಹಾಡಿನ ರೂಪದಲ್ಲಿ ಕೊಟ್ಟಿದ್ದೇವೆ, ಲೈಕ್ ಆದ್ರೆ ಶೇರ್ ಮಾಡಿ ಎಂದು ಹೇಳಿದ್ದಾರೆ. 
 

click me!