
ಬೆಳಗಾವಿ (ಡಿ.18) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕಾರು ಅಪಘಾತಕ್ಕೀಡಾಗಿದೆ. ಬೆಳಗಾವಿಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಈ ಅಪಘಾತ ನಡೆದಿದೆ. ರಾಜೇಂದ್ರ ಪ್ರಸಾದ್ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತನನ್ನು 30 ವರ್ಷದ ಮಂಜುನಾಥ್ ಬೈರ್ನಟ್ಟಿ ಎಂದು ಗುರುತಿಸಿಲಾಗಿದೆ. ಇತ್ತ ರಾಜೇಂದ್ರ ಪ್ರಸಾದ್ ಹಾಗೂ ಕಾರು ಚಾಲನಿಗೂ ಗಾಯವಾಗಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಅಧಿವೇಶನದ ಕಾರಣದಿಂದ ಸಚಿವರು, ಕಾರ್ಯದರ್ಶಿಗಳು, ಅಧಿಕಾರಿಗಳು ಸೇರಿದಂತೆ ಪ್ರಮುಖರು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತ ಕೆಲಸ ಕಾರ್ಯಗಳ ಮುಗಿಸಿದ ರಾಜೇಂದ್ರ ಪ್ರಸಾದ್ ಸವದತ್ತಿಯ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ತೆರಳಿದ್ದಾರೆ. ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ರಾಜೇಂದ್ರ ಪ್ರಸಾದ್ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಕಾರಿನ ಮೂಲಕ ಮರಳಿದ್ದಾರೆ. ಸವದತ್ತಿ ಪಟ್ಟಣದ ಹೊರವಲಯದಲ್ಲಿ ಕಾರು ಹಾಗೂ ಬೈಕ್ ಡಿಕ್ಕಿಯಾಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭೀಕರ ಅಪಘಾತದಲ್ಲಿ ಬೈಕ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಕಾರು ಪಲ್ಟಿಯಾಗಿದೆ. ವೇಗದ ಕಾರಣದಿಂದ ಅಪಘಾತದ ತೀವ್ರತೆ ಹೆಚ್ಚಾಗಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ ಡಿಸಿಎಂ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಕಾರು ಚಾಲಕನಿಗೂ ಗಾಯವಾಗಿದೆ. ಸಚಿವೆ ಹೆಬ್ಬಾಳ್ಕರ್ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೊರಟ್ಟಿದ್ದ ಮಂಜುನಾಥ್ ದಾರಿ ನಡುವೆ ಅಪಘಾತಕ್ಕೀಡಾಗಿ ದುರಂತ ಅಂತ್ಯ ಕಂಡಿದ್ದಾರೆ. ಕೆಲಸಕ್ಕೆ ಬೈಕ್ ಮೂಲಕ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿದೆ. ಮಂಜುನಾಥ್ ತಲೆಗೆ ಗಂಬೀರವಾಗಿ ಗಾಯಗೊಂಡ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ.