
ಚಿಕ್ಕೋಡಿ (ನ.04) ಗುರ್ಲಾಪೂರದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಬ್ಬು ಬೆಳೆಗಾರರ ಪ್ರತಿಭಟನೆ ಇದೀಗ ಪರಿಸ್ಥಿತಿ ಕೈಮೀರು ಹಂತಕ್ಕೆ ತಲುಪಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇಂದು ರೈತರ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಶಕ್ತಿ ನೀಡಿದ್ದರು. ರೈತರಿಗೆ ಬೆಂಬಲ ಸೂಚಿಸಿ ವಾಪಾಸ್ಸಾಗಬೇಕಿದ್ದ ವಿಜಯೇಂದ್ರ ರೈತರ ಜೊತೆ ಉಳಿದುಕೊಳ್ಳಲು ನಿರ್ಧರಿಸಿದ್ದರು. ಅವರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟ ಮುಂದುವರಿಸಿದ್ದರು. ಇದೀಗ ರೈತರ ಪ್ರತಿಭಟನಾ ಸ್ಥಳದಲ್ಲಿ ಮಲಗಲು ವಿಜಯೇಂದ್ರ ನಿರ್ಧರಿಸಿದ್ದಾರೆ. ಇದರೊಂದಿಗೆ ರೈತ ಪ್ರತಿಭಟನೆ ಮತ್ತೊಂದು ಹಂತಕ್ಕೆ ತಲುಪಿದೆ.
ಬೆಳಿಗ್ಗೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದು ಅವರ ತೊಂದರೆಯಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ. ಬೆಳಿಗ್ಗೆಯಿಂದ ಬರು ಬಿಸಲಿನಲ್ಲಿ ರೈತರು ಪ್ರತಿಭಟನೆ ಮಾಡಿತ್ತಿದ್ದಾರೆ. ಸರ್ಕಾರ ಎಚ್ಚತ್ತು ರೈತರ ತೊಂದರೆಗೆ ಸ್ಪಂದನೆ ನೀಡಬೇಕು ನಾಳೆ ಪ್ರತಿಭಟನಾ ಸ್ಥಳಕ್ಕೆ ಸಚಿವರು ಬರತ್ತೀನಿ ಅಂತಾ ಹೇಳಿದ್ದಾರೆ. ನಾಳೆ ಸಚಿವರು ಬಂದು ರೈತರ ಬೇಡಿಕೆ ಈಡೇರಿಸಬೇಕೆಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ನವೆಂಬರ್ 5 ಬಿವೈ ವಿಜಯೇಂದ್ರ ಹುಟ್ಟು ಹಬ್ಬ.ರೈತ ಹೋರಾಟ ಸ್ಥಳದಲ್ಲೇ ಮಲಗಲು ನಿರ್ಧರಿಸಿರುವ ವಿಜಯೇಂದ್ರ ನಾಳೆ ಹುಟ್ಟುಹಬ್ಬವನ್ನು ರೈತರ ಹೋರಾಟಗಾರರ ಜೊತೆ ಮಾಡುವುದಾಗಿ ಹೇಳಿದ್ದಾರೆ. ಅಹೋರಾತ್ರಿ ಧರಣಿಯಲ್ಲಿ ನಾನು ಕೂಡ ನಿಮ್ಮ ಜೊತೆಗೆ ಇರುತ್ತೇನೆ. ನಾಳೆ ಹುಟ್ಟುಹಬ್ಬ ರೈತರ ಜೊತೆಗೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಒಂದೆರಡು ತಾಸು ಇದ್ದು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಬಂದಿದ್ದೆ. ಆದರೆ ಉರಿ ಬಿಸಿಲಿನಲ್ಲಿ ರೈತರು ಕುಳಿತಿದ್ದನ್ನ ಕಂಡು ಇಲ್ಲೇ ಇರಲು ತೀರ್ಮಾನ ಮಾಡಿದೆ. ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿಗಳ ಜೊತೆಗೆ ನಾನು ಮಾತಾಡಿದ್ದೇನೆ. ರೈತರನ್ನ ಬಹಳ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರನ್ನ ಎದುರು ಹಾಕಿಕೊಂಡ್ರೇ ಸರ್ಕಾರಕ್ಕೆ ಉಳಿಗಾಲವಿಲ್ಲ. ಹಾಗಾಗಿ ಮುಖ್ಯಮಂತ್ರಿಗಳ ಜೊತೆಗೆ ಮಾತಾಡಿ ಎಂದು ಸಚಿವರಿಗೆ ಹೇಳಿದ್ದೇನೆ ಎಂದಿದ್ದಾರೆ.
ಜಿಲ್ಲೆಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಇನ್ನೂ ಕೂಡ ರಾಜ್ಯ ಸರ್ಕಾರ ರೈತರನ್ನ ನಿರ್ಲಕ್ಷ್ಯ ಮಾಡಿದ್ರೆ, ಆ ಭಗವಂತನಿಂದಲೂ ನಿಮ್ಮ ಸರ್ಕಾರ ಕಾಪಾಡಲು ಆಗುವುದಿಲ್ಲ. ಕಬ್ಬು ಬೆಳೆಗಾರರನ್ನ ನಿರ್ಲಕ್ಷ್ಯ ಮಾಡಬೇಡಿ. ಕಣ್ಣು ಮುಚ್ಚಿಕೊಂಡು ಹಾಗೇ ಬೆಂಗಳೂರಲ್ಲೇ ಕುಳಿತ್ರರೆ ಹೇಗೆ? ರೈತರ ಹೋರಾಟದ ಕಿಚ್ಚಿಗೆ ವಿಧಾನಸೌಧ ಸುಡುವ ಶಕ್ತಿ ಇದೆ. ಅಧಿಕಾರಿಗಳು, ರೈತರನ್ನ ಕೂರಿಸಿ ಚರ್ಚೆ ಮಾಡಿ ಅಂತಾ ಹೇಳಿದ್ದೇನೆ ಎಂದರು.