ಕನ್ನಡಿಗರ ಕೈ ತಪ್ಪುತ್ತಿರುವ ಬ್ಯಾಂಕಿಂಗ್ ಉದ್ಯೋಗಗಳು: ಟಿ.ಎಸ್.ನಾಗಾಭರಣ ಬೇಸರ

By Suvarna News  |  First Published Oct 29, 2020, 10:39 PM IST

ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದಂತೆ ಐಬಿಪಿಎಸ್‌ನ ಕ್ರಮಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


 ಬೆಂಗಳೂರು, (ಅ.29): ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಾಯಿಸುತ್ತಿದ್ದು, ಈ ಸಂಬಂಧ  ಹಲವು ಭಾರಿ ಕೇಂದ್ರ ವಿತ್ತ ಸಚಿವರನ್ನು ಖುದ್ದು ಭೇಟಿ ನೀಡಿ ಮನವಿಗಳನ್ನು, ಕೋರಿಕೆಗಳನ್ನು ಸಲ್ಲಿಸಲಾಗಿದ್ದರೂ ಸಹ ಹಳೆಯ ಮಾರ್ಗಸೂಚಿಗಳನ್ವಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಐಬಿಪಿಎಸ್‌ನ ಕ್ರಮ ಖಂಡನಾರ್ಹವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

 ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅನುವು ಮಾಡಿಕೊಡುವಂತೆ ಮನವಿ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸುವುದಾಗಿ ಕೇಂದ್ರ ಸಚಿವರು ಭರವಸೆಗಳನ್ನು ನೀಡಿದ್ದರು. 

Tap to resize

Latest Videos

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಕೇಂದ್ರ ಸಚಿವರ ಭರವಸೆಗಳು ಹುಸಿಯಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳು ಕನ್ನಡಿಗರ   ಕೈ ತಪ್ಪುತ್ತಿರುವುದು ಅತ್ಯಂತ ನೋವಿನ ವಿಷಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 ಬ್ಯಾಂಕಿಂಗ್ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡವು ಸೇರಿದಂತೆ ಎಲ್ಲ ರಾಜ್ಯಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು  ಟಿ.ಎಸ್.ನಾಗಾಭರಣ ಅವರು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ.

ಟಿ.ಎಸ್.ನಾಗಾಭರಣ ಪತ್ರ
ಸಂವಿಧಾನದ ಪರಿಚ್ಛೇದ-8ರಲ್ಲಿ ಎಲ್ಲ ರಾಜ್ಯಭಾಷೆಗಳಿಗೂ ಮಾನ್ಯತೆ ನೀಡುವಂತೆ ವಿವರಿಸಲಾಗಿದೆ. ಹಾಗಾಗಿ ಬ್ಯಾಂಕಿಂಗ್ ನೇಮಕಾತಿಗೆ ಐಬಿಪಿಎಸ್ ನಡೆಸುವ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಬೇಕೆಂದು ಕೇಂದ್ರ ಸಚಿವರಿಗೆ ಬರೆಯಲಾಗಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಹೀಗಿದ್ದರೂ ಮುಂದಿನ ಜನವರಿಯಲ್ಲಿ ನಡೆಯಲಿರುವ ಬ್ಯಾಂಕಿಂಗ್ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಸಲು ಐಬಿಪಿಎಸ್ ಸಿದ್ಧತೆ ನಡೆಸುತ್ತಿರುವುದರಿಂದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದ್ದು, ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಐಬಿಪಿಎಸ್‌ಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ.

ಗ್ರಾಮಮಟ್ಟದಲ್ಲೂ ಬ್ಯಾಂಕಿಂಗ್ ಸೌಲಭ್ಯವಿರುವುದರಿಂದ ಗ್ರಾಮೀಣರಿಗೆ ಸ್ಥಳೀಯ ಭಾಷೆಯಲ್ಲಿ ಮಾತ್ರ ಸಂವಹನ ನಡೆಸಲು ಸಾಧ್ಯವಿರುತ್ತದೆ. ಹಾಗಾಗಿ ರಾಜ್ಯಭಾಷೆಗಳ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರೂಪಿಸಿ ಕನ್ನಡವೂ ಸೇರಿದಂತೆ ಎಲ್ಲ ರಾಜ್ಯಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸುವಂತೆ ಆಗ್ರಹಿಸಿದ್ದಾರೆ.
 

click me!