Bank of Baroda ಗ್ರಾಹಕರಿಗೆ ಬಿಗ್ ಶಾಕ್.. ಟೆನ್ಷನ್ ಬೇಡ, ಈಗಲೇ ನೀವು ಈ ಕೆಲಸ ಮಾಡಲೇಬೇಕು!

Published : Jul 27, 2026, 12:06 PM IST
bank of baroda

ಸಾರಾಂಶ

ಬ್ಯಾಂಕ್ ಆಫ್ ಬರೋಡಾ ಬೃಹತ್ ಸೈಬರ್ ದಾಳಿಗೆ ತುತ್ತಾಗಿದ್ದು, ಹ್ಯಾಕರ್‌ಗಳು ಸುಮಾರು 1TB ಗ್ರಾಹಕರ ಸಂವೇದನಾಶೀಲ ಡೇಟಾವನ್ನು ಕದ್ದಿದ್ದಾರೆ. ಈ ಡೇಟಾವನ್ನು ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಗ್ರಾಹಕರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳು ಸೇರಿವೆ. ಈ ಘಟನೆಯು ಬ್ಯಾಂಕಿಂಗ್ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ನವದೆಹಲಿ: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda) ಬೃಹತ್ ಸೈಬರ್ ದಾಳಿಗೆ ತುತ್ತಾಗಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹ್ಯಾಕರ್ ಒಬ್ಬರು ಬ್ಯಾಂಕ್‌ನ ಸರ್ವರ್‌ಗಳನ್ನು ಭೇದಿಸಿ, ಸುಮಾರು 1 ಟಿಬಿ (1TB) ಗೂ ಅಧಿಕ ಸಂವೇದನಾಶೀಲ ಡೇಟಾವನ್ನು ಕದ್ದು ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸೋರಿಕೆಯಾದ ಡೇಟಾದಲ್ಲಿ ಏನೇನಿದೆ?

ವರದಿಗಳ ಪ್ರಕಾರ, ಸೋರಿಕೆಯಾದ ಡೇಟಾವು ಗ್ರಾಹಕರ ಅತ್ಯಂತ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಒಳಗೊಂಡಿದೆ.

  • ಗ್ರಾಹಕರ ಹೆಸರು ಮತ್ತು ಆಧಾರ್ ಸಂಖ್ಯೆಗಳು.
  • ಉಳಿತಾಯ ಮತ್ತು ಚಾಲ್ತಿ ಖಾತೆಗಳ (Savings & Current Accounts) ವಿವರಗಳು.
  • ಸಾಲದ ದಾಖಲೆಗಳು (Loan Appraisal Documents).
  • ನೆಟ್ ಬ್ಯಾಂಕಿಂಗ್ ಬಳಕೆದಾರರ ಮಾಹಿತಿ.
  • ಎನ್‌ಆರ್‌ಐ (NRI) ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ ದಾಖಲೆಗಳು.
  • ಬ್ಯಾಂಕ್‌ನ ಆಂತರಿಕ ಆಡಿಟ್ ವರದಿಗಳು ಮತ್ತು ಇಮೇಲ್ ಸಂವಹನಗಳು.

ಬಯಲಾಗಿದ್ದು ಹೇಗೆ?

ಕ್ಯಾಶ್‌ಲೆಸ್‌ಕನ್ಸ್ಯೂಮರ್' (CashlessConsumer) ಸಂಸ್ಥೆಯ ಸಂಸ್ಥಾಪಕ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಶ್ರೀಕಾಂತ್ ಲಕ್ಷ್ಮಣನ್ ಅವರು ಈ ಬಗ್ಗೆ ಮೊದಲು ಮಾಹಿತಿ ನೀಡಿದ್ದಾರೆ. ಹ್ಯಾಕರ್ ಹಂಚಿಕೊಂಡಿದ್ದ ಕೆಲವು ಸ್ಯಾಂಪಲ್ ದಾಖಲೆಗಳನ್ನು ಪರಿಶೀಲಿಸಿದ ಶ್ರೀಕಾಂತ್, ಇವು ಬ್ಯಾಂಕ್ ಆಫ್ ಬರೋಡಾದ ಆಂತರಿಕ ದಾಖಲೆಗಳೇ ಆಗಿವೆ ಎಂದು ತಿಳಿಸಿದ್ದಾರೆ. ಇದು ಒಂದು ದೊಡ್ಡ ಸೈಬರ್ ವಿಪತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಜುಲೈ 25 ರಂದು 'ransomware.live' ಎಂಬ ಸೈಟ್‌ನಲ್ಲಿ ಈ ಹ್ಯಾಕಿಂಗ್ ಮೊದಲು ಪತ್ತೆಯಾಗಿದೆ.

ಈ ಕೃತ್ಯದ ಹಿಂದೆ ಯಾರು?

'TripleX' ಎಂಬ ಹೊಸ ಹ್ಯಾಕಿಂಗ್ ಗುಂಪು ಈ ದಾಳಿಯ ಹಿಂದೆ ಇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದೇ ತಂಡವು ಕಳೆದ ಮೇ ತಿಂಗಳಲ್ಲಿ ಇಂಡೋನೇಷ್ಯಾದ ಪ್ರಮುಖ ಬ್ಯಾಂಕ್ ಒಂದನ್ನು ಹ್ಯಾಕ್ ಮಾಡಿ 2 ಟಿಬಿ ಡೇಟಾವನ್ನು ಕದ್ದಿತ್ತು. ಈಗ ಭಾರತದ ಬ್ಯಾಂಕ್ ಆಫ್ ಬರೋಡಾವನ್ನು ಗುರಿಯಾಗಿಸಿಕೊಂಡು, ಕದ್ದ ಡೇಟಾವನ್ನು ಯಾವುದೇ ಹಣದ ಬೇಡಿಕೆಯಿಲ್ಲದೆ ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ ಎನ್ನಲಾಗಿದೆ.

ಬ್ಯಾಂಕ್ ಮತ್ತು ಆರ್‌ಬಿಐ ಪ್ರತಿಕ್ರಿಯೆ ಏನು?

ಈ ಗಂಭೀರ ಆರೋಪಗಳ ಬಗ್ಗೆ ಬ್ಯಾಂಕ್ ಆಫ್ ಬರೋಡಾ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಅತ್ತ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಥವಾ ಸೈಬರ್ ಭದ್ರತಾ ಏಜೆನ್ಸಿ CERT-In ಕೂಡ ಈ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ನೀಡಿಲ್ಲ. ನಿಮ್ಮ ಡೇಟಾ ಸೋರಿಕೆಯಾಗಿರುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಈ ಕೆಳಗಿನ ಕೆಲಸಗಳನ್ನು ಮಾಡುವುದು ಉತ್ತಮ. ತಕ್ಷಣವೇ ನಿಮ್ಮ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ನಿಮ್ಮ ಮೊಬೈಲ್‌ಗೆ ಬರುವ ಯಾವುದೇ ಅಪರಿಚಿತ ಓಟಿಪಿ (OTP) ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಬ್ಯಾಂಕ್ ಹೆಸರಿನಲ್ಲಿ ಬರುವ ಸಂಶಯಾಸ್ಪದ ಕರೆಗಳ ಬಗ್ಗೆ ಎಚ್ಚರವಿರಲಿ.

PREV
Read more Articles on
click me!

Recommended Stories

ಬ್ಯಾಂಕ್ ಆಫ್ ಬರೋಡಾದಿಂದ ಪದವೀಧರರಿಗೆ ಸುವರ್ಣಾವಕಾಶದ ಕರೆ, 5000 ಹುದ್ದೆಗಳಿಗೆ ಅರ್ಜಿ ಆಹ್ವಾನ
ಪದವೀಧರರಿಗೆ ಬಂಪರ್ ಆಫರ್: SBIನಲ್ಲಿ ಬರೋಬ್ಬರಿ 7150 ಹುದ್ದೆಗಳ ಬೃಹತ್ ನೇಮಕಾತಿ, ಅರ್ಜಿ ಸಲ್ಲಿಸಲು ದಿನಗಳಷ್ಟೇ ಬಾಕಿ!