'ವಾಲ್ಮೀಕಿ ರಾಮಾಯಣ ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ'

By Web Desk  |  First Published Oct 14, 2019, 11:22 AM IST

ಜಿಲ್ಲಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ| ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ| ವಾಲ್ಮೀಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ| ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ| ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ|


ಬಳ್ಳಾರಿ(ಅ.14): ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ವಾಲ್ಮೀಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಕರಿಯಪ್ಪ ಮಾಳಗಿ ಹೇಳಿದರು.

ಜಿಲ್ಲಾಡಳಿತದಿಂದ ಇಲ್ಲಿನ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ. ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಆದಿ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಮಹಾಕಾವ್ಯ ದಾರಿದೀಪವಾಗಿ ತೋರುತ್ತದೆ ಎಂದು ತಿಳಿಸಿದ್ದಾರೆ. 

ವಾಲ್ಮೀಕಿ ಸಮಾಜ ಇಂದಿಗೂ ಅಕ್ಷರ ಸಂಸ್ಕೃತಿಯಿಂದ ದೂರ ಉಳಿದಿದೆ. ಹಟ್ಟಿಗಳಲ್ಲಿ ಜೀವನ ನಡೆಸುವವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರನ್ನು ಅಕ್ಷರ ಲೋಕಕ್ಕೆ ಕರೆದು ತರುವ ಕೆಲಸವಾಗಬೇಕಾಗಿದೆ. ವಾಲ್ಮೀಕಿ ಸಮಾಜಕ್ಕೆ ಬಹುದೊಡ್ಡ ಸಾಂಸ್ಕೃತಿಕ ಪರಂಪರೆ ಇದ್ದು, ಅದನ್ನು ಜತನದಿಂದ ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅನ್ಯ ಸಮುದಾಯಗಳ ಜತೆ ಸ್ನೇಹ-ವಿಶ್ವಾಸದಿಂದ ಇದ್ದು ಸೌಹಾರ್ದತೆಯುತ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.

ಪ್ರಮುಖವಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಕಟ್ಟಿಕೊಡಬೇಕಾದ ಕಾರ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಳ ಸಮುದಾಯವಾದ ಈ ಸಮಾಜಕ್ಕೆ ರಾಜಕೀಯವಾಗಿ ಸಿಕ್ಕಿರುವ ಮೀಸಲಾತಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಿಗಬೇಕಾಗಿದೆ ಎಂದು ಹೇಳಿದ್ದಾರೆ. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾಕಾವ್ಯ ಕೊಟ್ಟಮಹಾನ್‌ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರು ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಈ ಸಮುದಾಯಕ್ಕೆ ಮೀಸಲಾತಿ ದೊರೆಯಬೇಕಾಗಿದ್ದು ಸಚಿವ ಶ್ರೀರಾಮುಲು ಅವರು ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ. ಇನ್ನೆರೆಡು ತಿಂಗಳಲ್ಲಿ ಮೀಸಲಾತಿ ಜಾರಿಯಾಗಲಿದೆ ಎಂದರು.

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗಿದ್ದಾಗ ಶ್ರೀರಾಮುಲು ಅವರ ಸತತ ಪ್ರಯತ್ನದಿಂದಾಗಿ ನಗರದಲ್ಲಿ ಸುಸಜ್ಜಿತವಾದ ವಾಲ್ಮೀಕಿ ಭವನ ನಿರ್ಮಾಣವಾಯಿತು. 2005ರಲ್ಲಿ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು 8 ಕೋಟಿ ಅನುದಾನ ತಂದಿದ್ದರು ಎಂದು ತಿಳಿಸಿದರಲ್ಲದೆ, ವಾಲ್ಮೀಕಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯವಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ನಾನು ಹಾಗೂ ಶ್ರೀರಾಮುಲು ಸೇರಿ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ರೆಡ್ಡಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಮಹರ್ಷಿ ವಾಲ್ಮೀಕಿ ಅವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಇಡೀ ಮನುಕುಲಕ್ಕೆ ಬೇಕಾದ ಮಹಾನ್‌ ಸಂತರಾಗಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ನಾವು ಹೇಗೆ ಮೌಲ್ಯಯುತ ಬದುಕು ಕಟ್ಟಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಆ ಮಹಾನ್‌ ದಾರ್ಶನಿಕರ ಹಾಕಿಕೊಟ್ಟಹೆಜ್ಜೆಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಪ್ಪ ಹಾಗೂ ವಿನೋದ್‌ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ದೊಡ್ಡ ಬಸವಗವಾಯಿ ಡಿ. ಕಗ್ಗಲ್‌ ಅವರು ವಾಲ್ಮೀಕಿ ಮಹರ್ಷಿ ಕುರಿತ ಗೀತೆಗಳನ್ನು ಹಾಡಿದರು.

ಕನ್ನಡಪ್ರಭ ಕಾರ್ಯ ಶ್ಲಾಘನೀಯ

ಪ್ರತಿವರ್ಷ ಕನ್ನಡಪ್ರಭ ದಿನಪತ್ರಿಕೆ ಮಹರ್ಷಿ ವಾಲ್ಮೀಕಿ ಅವರ ಕುರಿತ ವಿಶೇಷ ಸಂಚಿಕೆ ಹೊರ ತರುತ್ತಿದ್ದು, ನಿಜಕ್ಕೂ ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಬಣ್ಣಿಸಿದರು.

ವಾಲ್ಮೀಕಿ ಜಯಂತಿ ಹಿನ್ನಲೆಯಲ್ಲಿ ಕನ್ನಡಪ್ರಭ ಹೊರ ತಂದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಅವರು, ವಿಶೇಷ ಸಂಚಿಕೆ ಅತ್ಯುತ್ತಮವಾಗಿ ಮೂಡಿ ಬಂದಿದೆ. ಮಹರ್ಷಿ ಕುರಿತ ಅನೇಕ ಲೇಖನಗಳು ಇದ್ದು ಇವುಗಳನ್ನು ಓದಿ ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಕರಿಯಪ್ಪ ಮಾಳಗಿ ಅವರು ವಿಶೇಷ ಸಂಚಿಕೆ ಕುರಿತು ಪ್ರಸ್ತಾಪಿಸಿ, ಕನ್ನಡಪ್ರಭ ಕನ್ನಡದ ಪ್ರಭಾವಿ ದಿನಪತ್ರಿಕೆ. ಪ್ರತಿವರ್ಷ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸಂಭ್ರಮದ ಮೆರವಣಿಗೆ

ವಾಲ್ಮೀಕಿ ಜಯಂತಿ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಅವರ ಬೃಹತ್‌ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಚಾಲನೆ ನೀಡಿದರು.

ಇಲ್ಲಿನ ಮುನ್ಸಿಪಲ್‌ ಕಾಲೇಜು ಮೈದಾನದಿಂದ ಶುರುವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ವಾಲ್ಮೀಕಿ ಭವನ ಸೇರಿತು. ನಂದಿಕೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು. ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪುತ್ಥಳಿ ಅನಾವರಣ:

ನಗರದ ವಾಲ್ಮೀಕಿ ಭವನ ಮುಂಭಾಗ ಮಹರ್ಷಿ ವಾಲ್ಮೀಕಿ ಅವರ 9.5 ಅಡಿ ಎತ್ತರದ ಪುತ್ಥಳಿಯನ್ನು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅನಾವರಣಗೊಳಿಸಿದರು.

click me!