ಭಾರಿ ಮಳೆಯಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ| ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಕೂಡಲೇ ತ್ವರಿತವಾಗಿ ರೈತರ ನಷ್ಟದ ಅಂದಾಜು ಮಾಡಿ ಪರಿಹಾರ ನೀಡಬೇಕು| ಮನೆಯನ್ನು ಕಳೆದುಕೊಂಡವರಿಗೆ ಸೂರನ್ನು ನೀಡಬೇಕು| ಎಕರೆಗೆ 60 ಸಾವಿರ ಬೆಳೆ ನಷ್ಟ| ಸರ್ಕಾರ ಪ್ರತಿ ಎಕರೆಗೆ 50 ಸಾವಿರ ಪರಿಹಾರವನ್ನು ನೀಡಬೇಕು| ಸಂಪೂರ್ಣ ಮನೆಯನ್ನು ಕಳೆದುಕೊಂಡ ಸಂತ್ರಸ್ತರಿಗೆ ಒಂದು ಮನೆಗೆ 10 ಲಕ್ಷ ಪರಿಹಾರ ನೀಡಬೇಕು|
ಕೂಡ್ಲಿಗಿ(ಅ.27): ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಹೀಗಾಗಿ ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಕೂಡಲೇ ತ್ವರಿತವಾಗಿ ರೈತರ ನಷ್ಟದ ಅಂದಾಜು ಮಾಡಿ ಪರಿಹಾರ ನೀಡಬೇಕು ಹಾಗೂ ಮನೆಯನ್ನು ಕಳೆದುಕೊಂಡವರಿಗೆ ಸೂರನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಬಳ್ಳಾರಿ ಜಿಲ್ಲಾಧ್ಯಕ್ಷ ದೇವರಮನಿ ಮಹೇಶ ಅವರು ತಹಸೀಲ್ದಾರ್ ಮೂಲಕ ಮನವಿ ಪತ್ರ ನೀಡಿದರು.
ರೈತರು ಸಾಲ ಮಾಡಿ ಜೋಳ, ಮೆಕ್ಕೆಜೋಳ, ಸಜ್ಜೆ, ಮಿಡಿಸೌತೆ, ಮೆಣಸಿನಕಾಯಿ, ಪಪ್ಪಾಯಿ, ಈರುಳ್ಳಿ,ಟೊಮೇಟೊ ಮುಂತಾದ ಬೆಳೆಗಳನ್ನು ಬೆಳೆದಿದ್ದರು ಅಲ್ಪಸ್ವಲ್ಪ ಮಳೆಗೆ ಫಸಲು ಬಂದಿತ್ತು. ಆದರೆ ಫಸಲು ಬರುವ ಸಮಯದಲ್ಲಿ ಮಳೆಗೆ ಎಲ್ಲ ಬೆಳೆಗಳು ನೆಲಸಮವಾಗಿ ಕೊಳೆತು ಫಸಲು ಕೈಗೆ ಬರದೇ ರೈತರ ಬದುಕೀಗ ಅತಂತ್ರ ಪರಿಸ್ಥಿತಿಯಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಕರೆಗೆ 60 ಸಾವಿರ ಬೆಳೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ಪ್ರತಿ ಎಕರೆಗೆ 50 ಸಾವಿರ ಪರಿಹಾರವನ್ನು ನೀಡಬೇಕು. ಮಳೆಯಿಂದ ಸಂಪೂರ್ಣ ಮನೆಯನ್ನು ಕಳೆದುಕೊಂಡ ಸಂತ್ರಸ್ತರಿಗೆ ಒಂದು ಮನೆಗೆ 10 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಕೂಡ್ಲಿಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್. ಫಕ್ಕೀರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಎಂ. ಪ್ರಕಾಶ, ಎಂ. ಸೋಮಣ್ಣ,ತಾಲೂಕು ರೈತ ಸಂಘದ ಗೌರವಾಧ್ಯಕ್ಷ ವೀರಭದ್ರಪ್ಪ, ಸಂಡೂರು ತಾಲೂಕು ಅಧ್ಯಕ್ಷ ಡಿ.ಹನುಮಂತಪ್ಪ, ಹಸಿರುಸೇನೆ ಕೂಡ್ಲಿಗಿ ಪಟ್ಟಣ ಅಧ್ಯಕ್ಷ ಮೌಲಾ ಹುಸೇನ್, ಖಜಾಂಚಿ ರಾಜಸಾಬ್, ರೈತ ಮುಖಂಡರಾದ ಬೊಪ್ಪಲಾಪುರ ಪರುಸಪ್ಪ, ಎಸ್. ಬೊಮ್ಮಪ್ಪ, ಎ.ಷಣ್ಮುಖಪ್ಪ ಮುಂತಾದವರು ಇದ್ದರು.