ಕನ್ಫ್ಯೂಷನ್ನೇ ಜಾಸ್ತಿ, ಸೊಲ್ಯೂಷನ್ನು ನಾಸ್ತಿ;ಗರ್ಲ್ ಫ್ರೆಂಡಾ, ಬೆಸ್ಟ್‌ ಫ್ರೆಂಡಾ!

By Kannadaprabha NewsFirst Published Jan 16, 2020, 9:55 AM IST
Highlights

ಅದು ಸೆಪ್ಟೆಂಬರ್‌. ಪತ್ರಿಕೋದ್ಯಮ ವಿಭಾಗಕ್ಕೆ ಸೇರಿ ಎರಡು ತಿಂಗಳಾಗಿತ್ತು. ಐಟಿಐ ಓದಿ ಬಂದಿದ್ದ ನನಗೆ ಪತ್ರಿಕೋದ್ಯಮದ ಬಗ್ಗೆ ಏನು ಗೊತ್ತಿದ್ದಿಲ್ಲ. ನಮ್ಮ ಕ್ಲಾಸಿನಲ್ಲಿ 23 ವಿದ್ಯಾರ್ಥಿಗಳಿದ್ದರು. ನಮ್ಮ ಅದೃಷ್ಟವೋ ದುರಾದೃಷ್ಟವೋ ಒಬ್ಬ ಹುಡುಗಿಯೂ ನಮ್ಮ ವಿಭಾಗಕ್ಕೆ ಸೇರಲಿಲ್ಲ. 

ಮಂಜುನಾಥ್‌ ಬಳ್ಳಾರಿ

ಎಸ್‌ಡಿಎಂ ಕಾಲೇಜು, ಉಜಿರೆ

ನಮ್ಮ ಕ್ಲಾಸಿನಲ್ಲಿ ಮೋಜು-ಮಸ್ತಿ ಸ್ವಲ್ಪ ಜಾಸ್ತಿನೇ ಇತ್ತು. ಕಾಲೇಜಿನ ಯಾವುದೇ ವಿಭಾಗದ ಕಾರ್ಯಕ್ರಮ ನಡೆದರೂ ನಾವೇ ಹೋಗಿ ಫೋಟೋ ವರದಿ ಮಾಡುತ್ತಿದ್ದೆವು, ಹೀಗೆ ಹೇಳಿ ಕ್ಲಾಸ್‌ ಬಂಕ್‌ ಮಾಡಿ ಸಿನಿಮಾಕ್ಕೂ ಹೋಗಿದ್ದೆವು. ಪ್ರಾಂಶುಪಾಲರ ಕೈಗೆ ಸಿಕ್ಕು ಎರಡು ಮೂರು ಬಾರಿ ಸಸ್ಪೆಂಡ್‌ ಆಗಿದ್ದೆವು. ಯಾವುದೇ ಹುಡುಗಿಯರ ಚಿಂತೆಯಿಲ್ಲದೆ ಡಿಗ್ರಿ ಮುಗಿಯುವಷ್ಟರಲ್ಲಿ ಪತ್ರಿಕೋದ್ಯಮದ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೆ. ನನ್ನ ಗೆಳೆಯರೆಲ್ಲರೂ ಸಿಇಟಿ ಕೋಚಿಂಗ್‌, ಕೆಲಸ ಅಂತ ದೂರವಾದರೂ ಆಗ ಏನೂ ತೋಚದೆ ಇದ್ದ ಸಮಯದಲ್ಲಿ ನನ್ನ ಗುರುಗಳ ಸಲಹೆ ಮೇರೆಗೆ ಉಜಿರೆಯ ಎಂ.ಸಿ.ಜೆ ವಿಭಾಗಕ್ಕೆ ಸೇರಿಕೊಂಡೆ.

ಗುಡ್‌ಬೈ 2019: ಈ ವರ್ಷ ಕಾಲೇಜು ಹುಡುಗ- ಹುಡುಗಿಯರ ಇಷ್ಟಕಷ್ಟಗಳಿವು!

ಅದು ಕಾಲೇಜಿನ ಮೊದಲನೇ ದಿನ ಕ್ಲಾಸಿಗೆ ಬಹಳ ಉತ್ಸಾಹದಿಂದ ಹೋಗಿದ್ದೆ. ಆದರೆ ಅಲ್ಲಿ ಆಗಿದ್ದೇ ಬೇರೆ, ಕ್ಲಾಸಿನ ತುಂಬೆಲ್ಲ ಬರೀ ಹುಡುಗಿಯರೇ. ಕೇವಲ ನಾಲ್ಕು ಜನ ಹುಡುಗರು ಮಾತ್ರ ಇದ್ದರು. ಒಂದು ಕ್ಷಣ ಹೊರಗೆ ಬಂದು ಕ್ಲಾಸ್‌ರೂಮ್‌ ನಂಬರ್‌ ನೋಡಿ ಖಚಿತಪಡಿಸಿಕೊಂಡು ಕೊನೆಯ ಬೆಂಚಿನಲ್ಲಿ ಕೂತು ಎಲ್ಲರನ್ನು ನೋಡ್ತಾ ಇದ್ದೆ. ಅದರಲ್ಲಿ ಒಬ್ಬ ಹುಡುಗಿಯ ಮೇಕಪ್‌ ನೋಡಿ ಹೆದರಿಯೇ ಬಿಟ್ಟಿದ್ದೆ.

ಹೀಗೆ ದಿನಗಳು ಕಳೆದವು. ಒಂದು ಕಡೆ ಸೀನಿಯರ್ಸ್‌ ಕಾಟ, ಇನ್ನೊಂದು ಕಡೆ ಹುಡುಗಿಯರ ರೇಗಾಟ. ಇದನ್ನು ನೋಡಿ ಬೇಸತ್ತು ಹೋಗಿದ್ದೆ. ಒಂದು ದಿನ ಗೆಳೆಯನೊಂದಿಗೆ ಬೇರೆ ವಿಭಾಗದ ಒಂದು ಕಾರ್ಯಕ್ರಮಕ್ಕೆ ಫೋಟೋ ತೆಗೆಯಲು ಹೋಗಿದ್ದಾಗ ಹುಡುಗಿಯೆಂದರೆ ಹೆದರುತ್ತಿದ್ದ ನಾನು ಅಂದು ಏನಾಯ್ತೋ ಏನೋ. ಒಬ್ಬಳನ್ನು ನೋಡಿ ತುಂಬಾ ತಲೆ ಕೆಡಿಸಿಕೊಂಡೆ. ಕಾರ್ಯಕ್ರಮದ ಫೋಟೋಗಿಂತ ಅವಳ ಫೋಟೋವನ್ನೆ ಜಾಸ್ತಿ ತೆಗೆದಿದ್ದೆ.

ಈ ವಿಷಯವನ್ನು ಮೊದಲು ನನ್ನ ಗೆಳೆಯನಿಗೆ ತಿಳಿಸಿದೆ, ತನ್ನ ಗೆಳತಿಯ ಸಹಾಯದಿಂದ ಅವಳ ಎಲ್ಲಾ ಮಾಹಿತಿಯನ್ನು ಪಡೆದೆ. ಹೇಗಾದರೂ ಮಾಡಿ ಅವಳ ಗೆಳೆತನ ಸಂಪಾದಿಸಬೇಕು ಅಂದುಕೊಂಡೆ. ಅವಳು ಮುಂದೆ ಇದ್ದರೂ ಮಾತನಾಡಿಸಲು ಭಯವಾಗುತ್ತಿತ್ತು. ಹೀಗೆ ಅವಳನ್ನು ದೂರದಿಂದ ನೋಡುತ್ತಿದ್ದೆ ಮತ್ತು ಅವಳ ನೋಡಿದ ತಕ್ಷಣ ಹೆದರಿ ಹಿಂದಕ್ಕೆ ಬರುತ್ತಿದ್ದೆ. ಅದು ನವಂಬರ್‌ 23. ನನ್ನ ಹುಟ್ಟಿದ ಹಬ್ಬ. ನನಗೆ ಸರ್ಪೆ್ರೖಸ್‌ ಕಾದಿತ್ತು. ಏಕಾಏಕಿ ಅವಳು ನನ್ನ ಕ್ಲಾಸಿಗೆ ಬಂದು ವಿಶ್‌ ಮಾಡಿ ಹೋದಳು.

ಅವಳು ಮಾತನಾಡಿಸಿದ ಖುಷಿಗಿಂತ ಅವಳು ನನಗೆ ಯಾಕೆ ವಿಶ್‌ ಮಾಡಿದಳು ಅನ್ನೋ ಚಿಂತೆಯೇ ಜಾಸ್ತಿ ನನಗೆ. ನಮ್ಮ ಕ್ಲಾಸಿನಲ್ಲಿ ಅವಳ ಫ್ರೆಂಡ್‌ ಇದ್ದಳು. ಅವಳನ್ನು ವಿಚಾರಿಸಿದಾಗ ತಿಳಿಯಿತು, ಅವಳು ಕೂಡ ನನ್ನ ಬಗ್ಗೆ ವಿಚಾರಿಸಿದ್ದಾಳೆ ಅಂತ. ಆಗ ನನಗೆ ಹೇಳಿಕೊಳ್ಳಲಾಗದಷ್ಟುಖುಷಿ. ನಾನು ಇಷ್ಟಪಡುವ ಹುಡುಗಿ ನನ್ನ ಬಗ್ಗೆ ವಿಚಾರಿಸಿದ್ದಾಳೆ ಅಂದ್ರೆ ಅದರ ಅರ್ಥ?

ಅದರ ಖುಷಿನೇ ಬೇರೆ. ಹಾಗೋಹೀಗೋ ಮಾಡಿ ಅವಳ ಪರಿಚಯ ಮಾಡಿಕೊಂಡೆ. ಕೆಲವು ದಿನಗಳು ಓಡಾಟ, ಸುತ್ತಾಟ ನಡೆಯಿತು. ನಾನು ಅವಳಿಗೆ ಏನು ಕೊಡಿಸಿದವನಲ್ಲ. ಅವಳು ಮಾತ್ರ ಎಲ್ಲಾ ತಂದು ಕೊಡುವವಳು. ಎಲ್ಲಿಗೆ ಹೋದರೂ ಜೊತೆ ಕರೆಯುತ್ತಿದ್ದಳು. ಕಷ್ಟ-ಸುಖ ಹೇಳಿಕೊಳ್ಳುತ್ತಿದ್ದಳು. ಇದು ಪ್ರೀತಿನೇ ಅಂದುಕೊಂಡೆ. ಕ್ರಿಸ್ಮಸ್‌ ಹಬ್ಬಕ್ಕೆ ಬಲವಂತವಾಗಿ ಮನೆಗೆ ಕರೆದುಕೊಂಡು ಹೋದಳು. ಆಶ್ಚರ್ಯ ಎಂದರೆ ಅವಳ ಮನೆಯಲ್ಲಿ ಎಲ್ಲರಿಗೂ ನನ್ನ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು. ನನ್ನನ್ನು ಮನೆಯ ಮಗನಂತೆ ನೋಡಿಕೊಂಡರು. ಅವಳ ಅಣ್ಣ ಬೈಕಿನಲ್ಲಿ ನನಗೆ ಇಡೀ ಊರು ತೋರಿಸಿದ. ಎರಡು ದಿನದ ನಂತರ ಕಾಲೇಜಿಗೆ ಬರುವಾಗ ನನ್ನ ಮನೆಯನ್ನೇ ಬಿಟ್ಟು ಬಂದಂತಾಯಿತು.

ಪ್ರೀತಿಯನ್ನು ಮೀರಿದ ಸಂಬಂಧವೊಂದಿದೆ ಅದುವೇ ಗೆಳೆತನ, ಪ್ರೀತಿ ಯಾರಿಗಾದರೂ ಸಿಗುತ್ತದೆ. ಆದರೆ ಒಳ್ಳೆ ಗೆಳೆತನ ಸಿಗುವುದು ಬಹಳ ಕಷ್ಟ. ಈ ಹೊಸ ವರ್ಷಕ್ಕೆ ಈ ಗೆಳೆತನವೇ ಸಾಕು ಎಂದು ಬೇರೆ ಅಲೋಚನೆ ಬಿಟ್ಟು ಅವಳಿಗೆ ಒಳ್ಳೆ ಗೆಳೆಯನಾಗಿದ್ದೇನೆ. ಅವಳ ಹೆಸರು ‘ಸಾರ’ ಎಂದಿರಲಿ. ಸ್ನೇಹಕ್ಕೆ ಜಯವಾಗಲಿ.

click me!