
ಬಳ್ಳಾರಿ (ಡಿ.24): ತಮಿಳುನಾಡಿನ ದೇವಸ್ಥಾನದ ದರ್ಶನ ಮುಗಿಸಿ ಅವರು ಮನೆಗೆ ವಾಪಾಸಾಗುತ್ತಿದ್ದರು. ಇನ್ನೇನು 10 ಕಿಲೋಮೀಟರ್ ಪ್ರಯಾಣ ಮಾಡಿದರೆ ಮನೆ ತಲುಪುತ್ತಿದ್ದರು. ಅದರೆ, ವಿಧಿಯಾಟ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ರಸ್ತೆ ಬದಿಯ ಕಿರುಸೇತುವೆಗೆ ಕಾರು ಢಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವು ಕಂಡಿದ್ದರೆ, ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.
ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಗ್ರಾಮದ ಒಂದೇ ಕುಟುಂಬದ ಐವರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಕಳೆದ ನಾಲ್ಕು ದಿನಗಳಿಂದ ಅವರು ತಮಿಳುನಾಡಿದ ವಿವಿಧ ದೇವಸ್ಥಾನಗಳ ದರ್ಶನಕ್ಕೆ ತೆರಳಿದ್ದರು. ಎಲ್ಲಾ ದೇವಸ್ಥಾನಗಳನ್ನು ನೋಡಿಕೊಂಡು ಊರಿಗೆ ವಾಪಾಸಾಗುವ, ಮನೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ.ನಿಟ್ಟೂರು ಪ್ರಸಾದ್ ರಾವ್ ಮತ್ತು ಜೊತೆಗಿದ್ದ ಇಬ್ಬರು ಮಹಿಳೆಯರು ಸಂಧ್ಯಾ ಹಾಗೂ ವಿಜಯಾ ಸೇರಿ 3 ಜನ ಸಾವು ಕಂಡಿದ್ದರೆ, ಗಂಭೀರ ಗಾಯಗೊಂಡ ಇಬ್ಬರನ್ನು ಆಂಬುಲೆನ್ಸ್ ನಲ್ಲಿಯೇ ಬಳ್ಳಾರಿಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬಳ್ಳಾರಿ ಮತ್ತು ಸಿರುಗುಪ್ಪ ರಸ್ತೆ ಮಧ್ಯ ಬರುವಾಗ ದೇವಿನಗರ ಕ್ಯಾಂಪ್ ಬಳಿ, ರಸ್ತೆಯ ಕಿರು ಸೇತುವೆಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದ ಮತ್ತು ಮಂಜುಗಟ್ಟಿದ್ದ ವಾತಾವರಣ ಇದ್ದ ಹಿನ್ನಲೆಯಲ್ಲಿ ರಸ್ತೆ ಕಾಣುತ್ತಿರಲಿಲ್ಲ. ಇದರಿಂದಾಗಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.