Bagalkot : 15 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೇಕಾರರಿಂದ ಬೆಳಗಾವಿಗೆ ಪಾದಯಾತ್ರೆ

By Sathish Kumar KHFirst Published Dec 4, 2022, 5:12 PM IST
Highlights

ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ನೇಕಾರರ 15 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರೂ ಈವರೆಗೆ ಒಂದೇ ಒಂದು ಬೇಡಿಕೆ ಕೂಡ ಈಡೇರಿಲ್ಲ. ಈ ಬಾರಿಯಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ನಿಟ್ಟಿನಲ್ಲಿ ಬಾಗಲಕೋಟೆ, ಗದಗ ಮತ್ತು ಕೊಪ್ಪಳ ಜಿಲ್ಲೆಯ ನೇಕಾರರು ಪಾದಯಾತ್ರೆ ಮಾಡುವ ಬಗ್ಗೆ ನಿರ್ಧರಿಸಿದ್ದಾರೆ.

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, 

ಬಾಗಲಕೋಟೆ (ಡಿ.4) : ರಾಜ್ಯದಲ್ಲಿ ಕಳೆದ ವರ್ಷದಿಂದ ನೇಕಾರರ 15 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರೂ ಈವರೆಗೆ ಒಂದೇ ಒಂದು ಬೇಡಿಕೆ ಕೂಡ ಈಡೇರಿಲ್ಲ. ಈ ವರ್ಷವಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ನಿಟ್ಟಿನಲ್ಲಿ ಬಾಗಲಕೋಟೆ, ಗದಗ ಮತ್ತು ಕೊಪ್ಪಳ ಜಿಲ್ಲೆಯ ನೇಕಾರರು ಪಾದಯಾತ್ರೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ.

ರಾಜ್ಯದಲ್ಲಿ ಹಲವು ವರ್ಷಗಳಿಂದ ಸಮಾಜದ ಮುನ್ನೆಲೆಗೆ ಬರಲಾಗದೇ ಹಾಗೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ನೇಕಾರ ಸಮುದಾಯಕ್ಕೆ ಈ ಬಾರಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ನಿರ್ಧರಿಸಿದೆ. ಈ  ನಿಟ್ಟಿನಲ್ಲಿ ಮುಂಬರುವ ಬೆಳಗಾವಿ ಅಧಿವೇಶನದ ವೇಳೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ ತಮ್ಮ 15 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ಕುರಿತು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ತುರ್ತು ಸಭೆಯನ್ನು ಮಾಡಲಾಗಿದೆ. ಈ ವೇಳೆ ನೃಕಾರರು ಹೆಚ್ಚಾಗಿರುವ ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಬೆಳಗಾವಿವರೆಗೂ ಪಾದಯಾತ್ರೆ ಮಾಡುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ವರ್ಷ ನೇಕಾರರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯದ ಹೊರತು ಬರಿಗೈಯಲ್ಲಿ ವಾಪಸ್‌ ಆಗಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ.

Bagalkot : ನೇಕಾರರ ಸಮಸ್ಯೆ ಇತ್ಯರ್ಥಗೊಳಿಸಿ ಇಲ್ಲವೇ ರಾಜಿನಾಮೆ ನೀಡಿ: ಟಿರಕಿ

ಪ್ರಮುಖ ಬೇಡಿಕೆಗಳು: ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೇಕಾರ ಸಮುದಾಯದ ಮುಖಂಡರು ಸಭೆ ಸೇರಿದ್ದರು‌. ನೇಕಾರರಿಗೆ ಸಿಗಬೇಕಾದ ಸೌಲಭ್ಯ ಮತ್ತು ಹಕ್ಕುಗಳ ಕುರಿತು ಸುದೀರ್ಘ ಚರ್ಚೆಯನ್ನು ನಡೆಸಿದರು. ಈ ವೇಳೆ ರಾಜ್ಯದ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ರಾಜ್ಯದಲ್ಲಿರುವ 5 ರಿಂದ 6 ಲಕ್ಷ ನೇಕಾರರಿಗೆ ಕಾರ್ಮಿಕರ ಸೌಲಭ್ಯ ನೀಡುವುದು. ಸಾಲದ ಸುಳಿಯಲ್ಲಿರುವ ರಾಜ್ಯದ ನೇಕಾರರಿಗೆ ಸಂಪೂರ್ಣ ಸಾಲಮನ್ನಾ ಮಾಡುವುದು. ರೈತರಂತೆ ಉಪಕರಣಗಳ ಮೇಲೆ ಸಬ್ಸಿಡಿ ನೀಡುವುದು. ಕಚ್ಚಾಮಾಲು ಪೂರೈಕೆಯಲ್ಲಿ ಸಬ್ಸಿಡಿ ನೀಡುವುದು. ನೇಕಾರರಿಗೆ ಉಚಿತ ವಿದ್ಯುತ್ ನೀಡುವುದು ಸೇರಿ ಹದಿನೈದು ಬೇಡಿಕೆಗಳ ಈಡೇರಿಸಲು ಒತ್ತಾಯಿಸಲು ತೀರ್ಮಾನಿಸಲಾಯಿತು. 

Tumakuru : ಶೀಘ್ರದಲ್ಲೇ ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ

ಕಳೆದ ವರ್ಷ ಪ್ರೊಸೀಡಿಂಗ್‌ ಸಹಿ ಆಗಿತ್ತು: ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾದ್ಯಕ್ಷ ಶಿವಲಿಂಗ ಟಿರ್ಕಿ ಮಾತನಾಡಿ, ರಾಜ್ಯದಲ್ಲಿ ನೇಕಾರರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಬಾರಿ ಬೆಳಗಾವಿ ಅಧಿವೇಶನದಲ್ಲಿಯೇ 15 ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ಮಾಡಲಾಗಿತ್ತು. ಆದರೆ, ಈ ವೇಳೆ ನೇಕಾರರ ಮುಖಂಡರೊಂದಿಗೆ ಸಭೆ ನಡೆಸಿದ ಸಿಎಂ ಬೊಮ್ಮಾಯಿ 15 ಬೇಡಿಕೆಗಳ ಪ್ರೊಸಿಡಿಂಗ್‌ಗೆ  ಸಹಿ ಮಾಡಿದರು. ಆದರೆ, ಈವರೆಗೆ ನೇಕಾರರ ಸೌಲಭ್ಯಗಳನ್ನ ಜಾರಿಗೊಳಿಸಲಿಲ್ಲ. ಈಗ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಬೆಳಗಾವಿ ಅಧಿವೇಶನದ ವೇಳೆ ಪಾದಯಾತ್ರೆ ಮೂಲಕ ತೆರಳಿ ನೇಕಾರರ ಹಕ್ಕುಗಳಿಗಾಗಿ ಹೋರಾಟ ಮಾಡಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ನೇಕಾರರ ಸಭೆಯಲ್ಲಿ ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ದೇವಾಂಗ ಸಂಘದ ರಾಜ್ಯಾದ್ಯಕ್ಷ ರವೀಂದ್ರ ಕಲಬುರ್ಗಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ರಾಜ್ಯ ನೇಕಾರ ಒಕ್ಕೂಟದ ಕಾರ್ಯಾಧ್ಯಕ್ಷ ಅಂಬಾದಾಸ ಕಾಮೂರ್ತಿ,  ಶ್ರೀನಿವಾಸ್ ಬಳ್ಳಾರಿ, ಕರ್ನಾಟಕ ರಾಜ್ಯ ಸೇವಾಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ, ಹೇಮಾದ್ರೆಪ್ಪಾ ಕೊಪ್ಪಳ, ಆರ್ ಜೆ ರಾಮದುರ್ಗ,  ರಾಜೇಂದ್ರ ಮಿರ್ಜಿ, ಸಂಗಪ್ಪಾ ಜಮಖಂಡಿ, ಗಜಾನನ ಗುಂಜೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!