ಲೋಕಾಪುರದಲ್ಲಿ ಹಂದಿಗಳ ಹಾವಳಿ: ಸಾಂಕ್ರಾಮಿಕ ರೋಗಗಳ ಭೀತಿ

Published : Oct 11, 2019, 09:06 AM IST
ಲೋಕಾಪುರದಲ್ಲಿ ಹಂದಿಗಳ ಹಾವಳಿ: ಸಾಂಕ್ರಾಮಿಕ ರೋಗಗಳ ಭೀತಿ

ಸಾರಾಂಶ

ಹಂದಿಗಳ ಹಾವಳಿಗೆ ಜನ ಬೇಸ್ತು| ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಂದಿಗಳ ಉಪಟಳ| ಸಾಂಕ್ರಾಮಿಕ ರೋಗಗಳ ಭೀತಿ| ಹಂದಿ ಸಾಕಾಣಿಕೆದಾರರಿಗೆ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು| ಕಾನೂನು ಪಾಲಿಸದಿದ್ದರೆ ಪ್ರಕರಣ ದಾಖಲಿಸಬೇಕು| ಹಂದಿಗಳನ್ನು ಹಿಡಿದು ಊರಾಚೆ ಬಿಟ್ಟು ಬರಬೇಕು| ದೊಡ್ಡ ಉದ್ಯಮವಾದ ಹಂದಿ ಸಾಕಾಣಿಕೆ| ಸಣ್ಣ, ಸಣ್ಣ ಹಂದಿಗಳನ್ನು ತಂದು ಊರಲ್ಲಿ ಬಿಡುತ್ತಿರುವ ಸಾಕಾಣಿಕೆದಾರರು|

ಲೋಕಾಪುರ(ಅ.11): ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಪ್ರಯಾಣಿಕರು ಓಡಾಡುವುದಕ್ಕೂ ಹೆದರುತ್ತಿದ್ದಾರೆ.

ಹೌದು! ಪಟ್ಟಣದ ಸುಭಾಷನಗರ, ಶ್ರೀನಿವಾಸ ಚಿತ್ರಮಂದಿರ, ಬಡಿಗೇರ ಓಣಿ, ಕುಬಸದ ಗಲ್ಲಿ, ಬಸ್‌ ನಿಲ್ದಾಣ, ಅಂಚೆ ಕಚೇರಿ, ಜನತಾ ಪ್ಲಾಟ್‌, ವೆಂಕಟೇಶ್ವರ ನಗರ, ಯಾದವಾಡ ರಸ್ತೆ, ಪ್ರದೇಶದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ರಸ್ತೆಯ ಮೇಲೆ ಹಂದಿಗಳು ದಿಢೀರನೇ ಅಡ್ಡ ಬಂದಾಗ ಕಕ್ಕಾಬಿಕ್ಕಿಯಾಗುವ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಹಂದಿಗಳು ಸಾವನ್ನಪ್ಪಿದರೆ ಮನುಷ್ಯರಿಗೆ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಹಾಗೂ ಹಂದಿಗಳ ಮಾಲೀಕರು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಂದಿ ಸಾಕಾಣಿಕೆದಾರರಿಗೆ ಎಚ್ಚರಿಕೆ ನೀಡಬೇಕು ಎಂಬುವುದು ಸಾರ್ವಜನಿಕರ ಒತ್ತಾಯ.

ದೊಡ್ಡ ತಂಡ:

ನಾಡ ಹಂದಿಗಳ ಮಾಂಸಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಒಂದು ಕೆಜಿ ಮಾಂಸಕ್ಕೆ 300 ರಿಂದ 350 ದರ ಸಿಗುತ್ತಿರುವುದರಿಂದ ಕೆಲವರು ಇದನ್ನೇ ಉದ್ಯಮವಾಗಿಸಿಕೊಂಡಿದ್ದಾರೆ. ಮತ್ತೊಂದೆಡೆ ಹೊರ ರಾಜ್ಯದ ಗೋವಾದಲ್ಲಿ ಹಂದಿ ಮಾಂಸಕ್ಕೆ ಅಧಿಕ ಬೇಡಿಕೆ ಬಂದಾಗ ಇಲ್ಲಿಯ ನಾಡ ಹಂದಿಗಳನ್ನು ರಫ್ತು ಮಾಡುವ ದೊಡ್ಡ ತಂಡ ಇದರ ಹಿಂದೆ ಇದೆ ಎಂದು ಹೆಸರು ಪ್ರಕಟಿಸಲಿಚ್ಚಿಸದ ವ್ಯಕ್ತಿಯೊಬ್ಬರು ಹೇಳಿದರು. ನಾಡ ಹಂದಿಗಳು ಕೊಳಚೆ ಪ್ರದೇಶದಲ್ಲಿಯೇ ಹೆಚ್ಚಾಗಿರುತ್ತವೆ. ಗ್ರಾಪಂ ಅನುಮತಿ ಪಡೆಯದೇ ಬೇಕಾಬಿಟ್ಟಿಯಾಗಿ ಹೊರಗಿನಿಂದ ಮರಿ ತಂದು ಬಿಟ್ಟು, ಅದು ದಷ್ಟಪುಷ್ಟವಾದ ಮೇಲೆ ಪುನಃ ಹಿಡಿದುಕೊಂಡು ಹೋಗುತ್ತಾರೆ.

ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಾಕಾಣಿಕೆ ಮಾಡಬೇಕು. ನಾಡಹಂದಿ ಸಾಕಾಣಿಕೆ ಮಾಡುವವರಿಗೆ ಗ್ರಾಮ ಪಂಚಾಯತಿಯವರು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು ಎಂದು ಸುಭಾಷನಗರ ನಿವಾಸಿಗಳು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸಾವಿರಾರು ಹಂದಿಗಳಿದ್ದು ಪಟ್ಟಣದ ಅಂದ ಕೆಡಿಸುವುದಲ್ಲದೆ ಚರಂಡಿಗಳಲ್ಲಿ ಹೊರಳಾಡಿ ಬಂದು ಮೈ ಕೊಡವುದರಿಂದ ಉಂಟಾಗುವ ದುರ್ವಾಸನೆಯ ಜತೆಗೆ ಜನರ ಬಟ್ಟೆಗಳನ್ನು ಹೊಲಸು ಮಾಡುತ್ತವೆ. ಇನ್ನು ಪಟ್ಟಣಕ್ಕೆ ಬಂದ ಅಪರಿಚಿತರು ಆಹಾರ ಪದಾರ್ಥಗಳನ್ನು ಬೈಕ್‌ ಸೈಡ್‌ಬ್ಯಾಗ್‌, ಸೈಕಲ್‌ಗಳಲ್ಲಿ ಇಟ್ಟು ಮೋಸ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.

ಆತಂಕದಲ್ಲಿ ಜನತೆ 

ಹಂದಿಗಳ ಹಾವಳಿಯನ್ನು ತಪ್ಪಿಸದಿದ್ದರೆ ಮುಂದೇನು ಎನ್ನುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಜನತಾ ಪ್ಲಾಟ್‌ನಲ್ಲಿರುವ ಹಂದಿಗಳ ಮಾಲೀಕರಿಗೆ ಗ್ರಾಪಂ ಕಡೆಯಿಂದ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಸಾರ್ವಜನಿರಕು ತಾಳ್ಮೆ ಕಳೆದುಕೊಳ್ಳುವ ಮೊದಲೆ ಗ್ರಾಪಂ ಹಂದಿ ಸಾಕಾಣಿಕೆದಾರರಿಗೆ ನೋಟಿಸ್‌ ನೀಡಬೇಕು. ಸ್ಪಂದಿಸದಿದ್ದ ಪಕ್ಷದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಲೋಕಾಪುರ ಪಿಡಿಒ ಸುಭಾಸ ಗೊಳಶೆಟ್ಟಿ ಅವರು, ಗ್ರಾಪಂ ವತಿಯಿಂದ ಹಂದಿಗಳ ಮಾಲೀಕರಿಗೆ ಸಾಕಷ್ಟು ಬಾರಿ ಮೌಖಿಕವಾಗಿ ಹೇಳಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಮುಂದುವರೆದರೆ ಗ್ರಾಪಂ ವತಿಯಿಂದ ಶಿಸ್ತು ಕ್ರಮ ಕೈಗೊಂಡು ಮಾಲೀಕರಿಗೆ ಕಾನೂನು ಕ್ರಮ ಕೈಗೊಳ್ಳಲು ಸರ್ವಸದಸ್ಯರ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. 

ಸುಭಾಸ ನಗರದಲ್ಲಿ ಹಂದಿಗಳ ಹಾವಳಿಯಿಂದ ಮಕ್ಕಳಿಗೆ ಡೆಂಘೀ ಜ್ವರ ಹೆಚ್ಚಾಗಿದೆ. ಸಂಬಂಧಪಟ್ಟ ಹಂದಿಗಳ ಮಾಲೀಕರು ಇದರ ಬಗ್ಗೆ ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಸಾರ್ವಜನಿಕರೆ ಹೋರಾಟ ಮಾಡಲಾಗುವುದು ಎಂದು ಮಾಜಿ ಗ್ರಾಪಂ ಸದಸ್ಯ ಮೈಬೂಬ ರಾಮದುರ್ಗ ಅವರು ಹೇಳಿದ್ದಾರೆ.  
 

PREV
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ