ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನ: ಸಿ.ಟಿ.ರವಿ| ಬಾದಾಮಿಯ ಪ್ರವಾಸಿ ತಾಣ ವೀಕ್ಷಣೆ ಮಾಡಿದ ದೃಶ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ| ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಜನರ ಸಹಕಾರವೂ ಬೇಕು|
ಬಾದಾಮಿ[ಅ.21]: ಐತಿಹಾಸಿಕ ಚಾಲುಕ್ಯರ ರಾಜಧಾನಿ ಬಾದಾಮಿ, ಐಹೊಳೆ, ಪಟ್ಟದಕಲ್ಲ ತಾಣಗಳ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ.
ಭಾನುವಾರ ಐತಿಹಾಸಿಕ ಬಾದಾಮಿ ನಗರದ ಮೇಣ ಬಸದಿಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ. ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಜನರ ಸಹಕಾರವೂ ಬೇಕು. ಅಗಸ್ತ್ಯ ತೀರ್ಥ ಹೊಂಡದ ಮೇಲಿರುವ 96 ಮನೆಗಳ ಸ್ಥಳಾಂತರ, ಚಾಲುಕ್ಯರ ಕಾಲದ ಪ್ರವಾಸಿ ತಾಣ ಅಭಿವೃದ್ಧಿ, ಕೇಂದ್ರ ಸರ್ಕಾರದ ಹೃದಯ ಯೋಜನೆ ಸೇರಿದಂತೆ ಪ್ರವಾಸಿ ತಾಣ ಅಧ್ಯಯನ ಮಾಡಲು ಬಂದಿರುವೆ. ಅಧ್ಯಯನ ಮಾಡಿದ ನಂತರ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.
ವಿಶ್ವ ಮಟ್ಟದಲ್ಲಿ ಶಿಲ್ಪಕಲೆಗಳ ಮೂಲಕ ವಿಶ್ವದ ಜನರನ್ನು ಆಕರ್ಷಿಸುವ ಶಿಲ್ಪಕಲೆಯ ತವರೂರು ಬಾದಾಮಿ, ವಿಶ್ವ ಪರಂಪರಾ ತಾಣ ಪಟ್ಟದಕಲ್ಲ, ಐಹೊಳೆ ಮೂರು ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ಕೊಡಲಾಗುವುದು. ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಬಾದಾಮಿ ಪ್ರವಾಸೋದ್ಯಮಕ್ಕೆ 25 ಕೋಟಿ ಅನುದಾನ ಮಂಜೂರಾಗಿತ್ತು. ಬಿಜೆಪಿ ಸರ್ಕಾರ ಅನುದಾನ ಕಡಿತ ಮಾಡುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ರಾಜಕಾರಣ ಮಾಡಲು ಬಂದಿಲ್ಲ. ಜನರಿಗೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ. ಬಾದಾಮಿ ಪ್ರವಾಸಸೋದ್ಯಮಕ್ಕೆ ಅನುದಾನ ಮಂಜೂರಿಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. 25 ಕೋಟಿ ಅನುದಾನ ಮಂಜೂರಿಯಾಗಿದ್ದರೆ ಅದಕ್ಕೆ ಇನ್ನು 25 ಕೋಟಿ ಸೇರಿಸಿ ಅಭಿವೃದ್ಧಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲವು ಸಮಸ್ಯೆಗಳಿವೆ. ಸಿಬ್ಬಂದಿ ಕೊರತೆ ಇದೆ. ಸಹಾಯಕ ನಿರ್ದೇಶಕರ ಕಚೇರಿಯನ್ನು ಬಾದಾಮಿಗೆ ಸ್ಥಳಾಂತರ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆಯೂ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮಮದಾಪೂರ, ತಾಲೂಕ ಅಧ್ಯಕ್ಷ ಶಾಂತಗೌಡ ಪಾಟೀಲ, ನಾಗರಾಜ ಕಾಚೆಟ್ಟಿ, ಅಬ್ದುಲ್‌ರಜಾಕ್ ಅತ್ತಾರ, ಸುನೀಲ ಬಂಗಾರಶೆಟ್ಟರ, ಬಸವರಾಜ ಬೂತಾಳಿ, ನಾಗರಾಜ ಕಡಗದ, ಬೇಲೂರಪ್ಪ ವಡ್ಡರ, ಮುತ್ತು ಹೂಗಾರ, ರವಿ ವಡ್ಡರ, ತಾಪಂ ಇಒ ಡಾ. ಪುನಿತ್, ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಪ್ರವಾಸಿ ಮಾರ್ಗದರ್ಶಕ ಬಸವರಾಜ ಕಟಗೇರಿ ಸೇರಿದಂತೆ ಪ್ರವಾಸೋದ್ಯಮ ಇಲಾಖಾಧಿಕಾರಿ ಹಾಗೂ ಸಿಬ್ಬಂದಿ ಇದ್ದರು. ಬಿಜೆಪಿ ಕಾರ‍್ಯಕರ್ತರು ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳು ಮತ್ತು ಪುರಾತತ್ವ ಸಿಬ್ಬಂದಿ ವರ್ಗ ಇದ್ದರು.