ಬಾಗಲಕೋಟೆ: ಸಂತ್ರಸ್ತರ ಬದುಕು ಕಟ್ಟಿಕೊಡಲು ಎಲ್ಲ ನೆರವು

By Web DeskFirst Published Oct 18, 2019, 10:07 AM IST
Highlights

ಪ್ರವಾಹ ನಂತರದ ಬದುಕು ಕಟ್ಟಿಕೊಳ್ಳುವಲ್ಲಿ ಸಹಾಯ ಸಹಕಾರ ಮಾಡುವ ಸಂಘ-ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು| ಹಿಂದೆಂದೂ ಕಂಡರಿಯದ ದೊಡ್ಡ ಪ್ರಮಾಣದ ಪ್ರವಾಹ ಇದಾಗಿದ್ದು, ಈ ಪ್ರವಾಹದಿಂದ ಜಿಲ್ಲೆಯ ಜನರ ಬದುಕು ಕೊಚ್ಚಿ ಹೋಗಿದೆ| ಆಸ್ತಿ-ಪಾಸ್ತಿ, ಜನ-ಜಾನುವಾರು, ಕೃಷಿ, ತೋಟಗಾರಿಕೆ ಬೆಳೆ ಹಾನಿಗೊಳಗಾಗಿವೆ| ಸಂತ್ರಸ್ತರ ಜೀವನವನ್ನು ಪುನಃ ಕಟ್ಟಿಕೊಡುವ ಕಾರ್ಯ ಮಹತ್ವದ್ದಾಗಿದೆ| ಸರ್ಕಾರದ ಜೊತೆ ಸಮುದಾಯ ಕೈಜೋಡಿಸುವ ಅಗತ್ಯವಿದೆ| 
 

ಬಾಗಲಕೋಟೆ(ಅ.18): ಪ್ರವಾಹ ನಂತರದ ಬದುಕು ಕಟ್ಟಿಕೊಳ್ಳುವಲ್ಲಿ ಸಹಾಯ ಸಹಕಾರ ಮಾಡುವ ಸಂಘ-ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಜಿಲ್ಲಾ​ಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಅವರು ತಿಳಿಸಿದ್ದಾರೆ. 

ಜಿಪಂ ಸಭಾಭವನದಲ್ಲಿ ಗುರುವಾರ ಜಿಲ್ಲೆಯ ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ವಿವಿಧ ಸರ್ಕಾರೇತರ ಹಾಗೂ ಇತರೆ ಸಂಘ-ಸಂಸ್ಥೆಗಳ ಸಮನ್ವಯತೆ ಸಾಧಿ​ಸಲು ಹಮ್ಮಿಕೊಂಡ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಗಮನದಲ್ಲಿಟ್ಟುಕೊಂಡು ತಮ್ಮ ವ್ಯಾಪ್ತಿಯಲ್ಲಿ ಏನೆಲ್ಲ ಸಹಾಯ ಮಾಡಬಹುದಾಗಿದೆ ಎಂಬುದನ್ನು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದೆಂದೂ ಕಂಡರಿಯದ ದೊಡ್ಡ ಪ್ರಮಾಣದ ಪ್ರವಾಹ ಇದಾಗಿದ್ದು, ಈ ಪ್ರವಾಹದಿಂದ ಜಿಲ್ಲೆಯ ಜನರ ಬದುಕು ಕೊಚ್ಚಿ ಹೋಗಿದೆ. ಆಸ್ತಿ-ಪಾಸ್ತಿ, ಜನ-ಜಾನುವಾರು, ಕೃಷಿ, ತೋಟಗಾರಿಕೆ ಬೆಳೆ ಹಾನಿಗೊಳಗಾಗಿವೆ. ಸಂತ್ರಸ್ತರ ಜೀವನವನ್ನು ಪುನಃ ಕಟ್ಟಿಕೊಡುವ ಕಾರ್ಯ ಮಹತ್ವದ್ದಾಗಿದ್ದು, ಸರ್ಕಾರದ ಜೊತೆ ಸಮುದಾಯ ಕೈಜೋಡಿಸುವ ಅಗತ್ಯವಿದೆ. ಪ್ರವಾಹದ ನೀರು ನುಗ್ಗಿ ದೈನಂದಿನ ಬದುಕು ಕಟ್ಟಿಕೊಳ್ಳುವ ದೃಷ್ಟಿಯಿಂದ ತುರ್ತಾಗಿ ಪ್ರತಿ ಕುಟುಂಬಕ್ಕೆ 10 ಸಾವಿರ ಹಾಗೂ ವಿಶೇಷ ಆಹಾರ ಪ್ಯಾಕೆಟ್‌ಗಳನ್ನು 46 ಸಾವಿರ ಕುಟುಂಬಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ತಾರತಮ್ಯ ಇಲ್ಲ:

ಪರಿಹಾರದಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ. ನಡೆಯಲು ಆಸ್ಪದ ಕೂಡ ನೀಡುವುದಿಲ್ಲ. ಹಾನಿಗೊಳಗಾದ ಮನೆಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಛಾಯಾಚಿತ್ರದ ಸಮೇತ ಟ್ಯಾಗ್‌ ಮಾಡಲಾಗುತ್ತಿದೆ. ಪ್ರತಿಯೊಂದು ಸಂತ್ರಸ್ತರಿಗೆ ಆರ್‌ಟಿಜಿಎಸ್‌ ಮೂಲಕ ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಪರಿಹಾರ ಧನವನ್ನು ಜಮಾ ಮಾಡಲಾಗುತ್ತಿದೆ. 138ಕ್ಕೂ ಅಧಿ​ಕ ಸರ್ಕಾರಿ ಶಾಲಾ ಕೊಠಡಿಗಳು ಹಾನಿಯಾಗಿದ್ದು, ಈಗಾಗಲೇ ಪರಿಹಾರ ಕೇಂದ್ರಕ್ಕಾಗಿ ಸ್ಥಾಪಿಸಲಾದ ಶೆಡ್‌ ಖಾಲಿಯಾಗಿದ್ದರಿಂದ ಅಲ್ಲಿಯೇ ಶಾಲೆ ಮತ್ತು ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 70 ಶೆಡ್‌ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ದಾನಿಗಳಿಂದ, ಸಂಘ ಸಂಸ್ಥೆಗಳಿಂದ ಸಾಕಷ್ಟು ಸಹಾಯವಾಗಿದೆ. ಊಟ, ಮೆಡಿಸಿನ್‌, ಬಟ್ಟೆ, ಇತರೆ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಪ್ರವಾಹದ ನಂತರ ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು ವಿವಿಧ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯವಾಗಿದೆ. ಕೌಶಲ ತರಬೇತಿ, ಉದ್ಯೋಗ ಒದಗಿಸುವುದು ಸೇರಿದಂತೆ ಕೆಲವೆಡೆ ಸಣ್ಣ ಪುಟ್ಟಅಂಗಡಿಗಳು, ವಾಣಿಜ್ಯ ಚಟುವಟಿಕೆಗಳಿಗೆ ದಾನಿಗಳ ಸಹಾಯ ಅಗತ್ಯವಿದೆ ಎಂದು ತಿಳಿಸಿದರು.

ಮಾಹಿತಿ ನೀಡಿ:

ವಿಪ್ರೋ ಕಂಪನಿಯ ವತಿಯಿಂದ ಜಗನ್ನಾಥ ಮತ್ತು ರಘು ಎಂಬುವರು ಜಿಲ್ಲೆಗೆ ಆಗಮಿಸಿದ್ದು, ಇವರು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ದತ್ತು ಪಡೆಯಲಿದ್ದಾರೆ. ಇದರಂತೆ ಸಹಾಯಕ್ಕಾಗಿ ಇತರೆ ಸಂಘ ಸಂಸ್ಥೆಗಳು ತಾವು ಯಾವ ಯಾವ ಕ್ಷೇತ್ರಗಳಲ್ಲಿ ಯಾವ ರೀತಿ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಜಿಲ್ಲಾಧಿ​ಕಾರಿಗಳು ತಿಳಿಸಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡ ಹುಮಾನಿಟೇರಿಯನ್‌ ರಿಲೀಫ್‌ ಸೊಸೈಟಿಯವರು 15.90 ಲಕ್ಷ ವೆಚ್ಚದಲ್ಲಿ 64 ಮನೆ, 50 ಶೌಚಾಲಯ ನಿರ್ಮಿಸಲು ತಿಳಿಸಿದರು. ರುಡ್‌ಸೆಟ್‌ ಸಂಸ್ಥೆ 20-30 ಬ್ಯಾಚ್‌ಗಳಲ್ಲಿ ಕೌಶಲ ತರಬೇತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಮುಖ ಉಪಕರಣ, ಎಪಿಡಿ ಸಂಸ್ಥೆಯಿಂದ 400 ಜನರಿಗೆ ವಿಶೇಷ ಚೇತನರಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಬೇಕಾದ ತರಬೇತಿ ನೀಡುವುದಾಗಿ ತಿಳಿಸಿದರು.

ರೀಚ್‌ ಸಂಸ್ಥೆಯಿಂದ 90-120 ಜನರಿಗೆ ಕೌಶಲ ತರಬೇತಿ, ಆ್ಯಕ್ಷನ್‌ ಏಡ್‌ ಸಂಸ್ಥೆಯಿಂದ ಮುಧೋಳ ತಾಲೂಕಿನ 5 ಗ್ರಾಪಂಗಳ ತುರ್ತು ನಿರ್ವಹಣೆ, ದೇವದಾಸಿ ಮಹಿಳೆಯರಿಗೆ ಸಹಾಯ, ತಕ್ಷಶಿಲಾ ಸಂಸ್ಥೆಯಿಂದ ಹುನಗುಂದ ತಾಲೂಕಿನ 5 ಗ್ರಾಮಗಳಲ್ಲಿ ಜಾನುವಾರುಗಳ ಆರೋಗ್ಯ ಶಿಬಿರ, ಶಾಯಿ ಸಂಸ್ಥೆಯಿಂದ ಹೊಲಿಗೆ, ಸ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡುವುದಾಗಿ ತಿಳಿಸಿದರು.

ರೆಡ್‌ ಕ್ರಾಸ್‌ ಸಂಸ್ಥೆಯ ಅಧ್ಯಕ್ಷ ಆನಂದ ಜಿಗಜಿನ್ನಿ ಮಾತನಾಡಿ, ಸದ್ಯ ಜಿಲ್ಲೆಯಲ್ಲಿನ ಪ್ರವಾಹ ಸಂದರ್ಭದಲ್ಲಿ ಸಂಸ್ಥೆಯಿಂದ 200 ತಾತ್ಕಾಲಿಕ ಶೆಡ್‌ಗಳನ್ನು 52 ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ. ಪ್ರವಾಹಕ್ಕೆ ತುತ್ತಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ ಮತ್ತು ಪ್ರತಿ ತಾಲೂಕಿಗೆ 30 ಯುವಕರನ್ನು ಪ್ರವಾಹ ಎದುರಿಸುವ ನಿಟ್ಟಿನಲ್ಲಿ ತರಬೇತಿ ನೀಡುವ ಕಾರ್ಯ ಮಾಡಲಿದ್ದೇವೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಪ್ರೊಬೇಷನರಿ ಐ.ಎ.ಎಸ್‌ ಅ​ಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿ​ಕಾರಿ ಮಹಾದೇವ ಮುರಗಿ ಸೇರಿದಂತೆ 26 ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿ​ಗಳು ಹಾಗೂ ವಿವಿಧ ಇಲಾಖೆಯ ಅ​ಧಿಕಾರಿಗಳು ಉಪಸ್ಥಿತರಿದ್ದರು.

7500 ಮನೆಗಳಿಗೆ ಹಾನಿ

ಆಕಸ್ಮಿಕವಾಗಿ ಬಂದೊದಗಿದ ಪ್ರವಾಹದಿಂದ ಎದೆಗುಂದದೇ ಮಾನಸಿಕವಾಗಿ, ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸದಾ ಸನ್ನದ್ಧರಾಗಿರಬೇಕೆಂಬ ಅನಿವಾರ್ಯತೆ ಇದೆ. ಪ್ರವಾಹದಿಂದ ಶೇ.25, ಶೇ,25 ರಿಂದ 75 ಹಾಗೂ ಶೇ.75ಕ್ಕಿಂತ ಹೆಚ್ಚಿಗೆ ಹಾನಿಗೊಳಗಾದ ಮನೆಗಳು ಒಟ್ಟು 7500 ಇದ್ದು, ಸಂಪೂರ್ಣ ಹಾನಿಗೊಳಗಾದ ಮನೆ ಕಟ್ಟಿಕೊಡಲು ಈಗಾಗಲೇ ರಾಜೀವ ಗಾಂಧಿ ​ವಸತಿ ನಿಗಮಕ್ಕೆ ಅಪ್‌ಲೋಡ್‌ ಮಾಡಲಾಗಿದೆ ಎಂದು ತಿಳಿಸಿದರು.
 

click me!