ಬಾದಾಮಿ, ಪಟ್ಟಣದಕಲ್ಲು ಪ್ರವಾಸಿ ತಾಣಗಳಿಗೆ ಮತ್ತಷ್ಟು ಪ್ರವಾಸಿಗರು ಹೆಚ್ಚುವ ಸಾಧ್ಯತೆ| ನೆರೆ ಹೊರತಾಗಿಯೂ ಪ್ರವಾಸಿಗರ ದಂಡು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುತ್ತಲೇ ಇದೆ| ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಬನಶಂಕರಿ ದೇವಾಲಯ, ಶಿವಯೋಗಮಂದಿರ ಇವು ಐತಿಹಾಸಿಕ ಪ್ರವಾಸಿ ತಾಣಗಳು| ಇಲ್ಲಿರುವ ಪ್ರವಾಸಿ ತಾಣಗಳಲ್ಲಿ ಪಟ್ಟದಕಲ್ಲು ಮತ್ತು ಶಿವಯೋಗಮಂದಿರವನ್ನು ಹೊರತುಪಡಿಸಿದರೆ ಇನ್ನುಳಿದ ಯಾವುದೇ ಐತಿಹಾಸಿಕ ಸ್ಥಳಗಳಿಗೆ ಮಲಪ್ರಭಾ ನದಿಯ ಪ್ರವಾಹದ ಬಾಧೆಗೆ ಒಳಗಾಗಿರಲಿಲ್ಲ|
ಶಂಕರ ಕುದರಿಮನಿ
ಬಾದಾಮಿ(ಅ.18): ಶಿಲ್ಪಕಲೆಗಳ ತವರೂರು, ಐತಿಹಾಸಿಕ ತಾಣಗಳಲ್ಲಿ ಕಳೆದ ಮೂರು ತಿಂಗಳ ಹಿಂದೆ ಬಂದ ಪ್ರವಾಹ ತನ್ನ ಅಬ್ಬರವನ್ನು ಪ್ರದರ್ಶಿಸಿತ್ತು. ಈ ವೇಳೆ ತಾಲೂಕಿನ ಐತಿಹಾಸಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿ ಹೋಗಿವೆ. ಆದರೂ ಇಲ್ಲಿನ ತಾಣ ವೀಕ್ಷಿಸಲು ಪ್ರವಾಸಿಗರ ಉತ್ಸಾಹ ಮಾತ್ರ ಕುಗ್ಗಿಲ್ಲ. ಏಕೆಂದರೆ ನೆರೆ ಹೊರತಾಗಿಯೂ ಪ್ರವಾಸಿಗರ ದಂಡು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುತ್ತಲೇ ಇದೆ.
ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಬನಶಂಕರಿ ದೇವಾಲಯ, ಶಿವಯೋಗಮಂದಿರ ಇವು ಐತಿಹಾಸಿಕ ಪ್ರವಾಸಿ ತಾಣಗಳು. ಇಲ್ಲಿರುವ ಪ್ರವಾಸಿ ತಾಣಗಳಲ್ಲಿ ಪಟ್ಟದಕಲ್ಲು ಮತ್ತು ಶಿವಯೋಗಮಂದಿರವನ್ನು ಹೊರತುಪಡಿಸಿದರೆ ಇನ್ನುಳಿದ ಯಾವುದೇ ಐತಿಹಾಸಿಕ ಸ್ಥಳಗಳಿಗೆ ಮಲಪ್ರಭಾ ನದಿಯ ಪ್ರವಾಹದ ಬಾಧೆಗೆ ಒಳಗಾಗಿರಲಿಲ್ಲ. ಸ್ವಲ್ಪ ದಿನ ಪಟ್ಟದಕಲ್ಲು ಗ್ರಾಮದಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಆದರೆ, ಬೇರೆ ಮಾರ್ಗವಾಗಿ ದೇವಾಲಯಗಳ ವೀಕ್ಷಣೆಗೆ ದಾರಿ ಇದ್ದುದ್ದರಿಂದ ಪ್ರವಾಸಿಗರು ಈ ಮಾರ್ಗವಾಗಿ ಬಂದು, ಭೇಟಿ ನೀಡಿ ಅಲ್ಲಿ ಗತ ಇತಿಹಾಸವನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ, ಪ್ರವಾಹ ಬಂದ ಒಂದು ತಿಂಗಳವರೆಗೆ ಮಾತ್ರ ಪ್ರವಾಸಿಗರು ಭೇಟಿ ನೀಡಿರಲಿಲ್ಲ. ಇದನ್ನು ಹೊರತುಪಡಿಸಿ ಪ್ರವಾಹ ಇಳಿಕೆಯಾಗುತ್ತಿದ್ದಂತೆ ಮತ್ತೆ ಪ್ರವಾಸಿಗರು ಈ ತಾಣಗಳತ್ತ ಮುಖ ಮಾಡಲು ಆರಂಭಿಸಿದ್ದಾರೆ. ಅಕ್ಟೋಬರ್ ಕೊನೆ ವಾರದಿಂದ ಈ ಭಾಗದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಅನುಮಾನ ಇಲ್ಲ ಎನ್ನಲಾಗುತ್ತಿದೆ.
2017-18ನೇ ಸಾಲಿನಲ್ಲಿ ಬಾದಾಮಿ ಮತ್ತು ಪಟ್ಟದಕಲ್ಲು ಹಾಗೂ ಬನಶಂಕರಿ ಮಹಾಕೂಟ, ಶಿವಯೋಗಮಂದಿರ ಸ್ಥಳಕ್ಕೆ ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಬಾದಾಮಿ ಗುಹಾಂತರ ದೇವಾಲಯಗಳ ವೀಕ್ಷಣೆಗೆ 4,31,962 ಸ್ವದೇಶಿಯರು, 7,800 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಇನ್ನು ಪಟ್ಟದಕಲ್ಲು ಕ್ಷೇತ್ರಕ್ಕೆ 3,80,273 ಸ್ವದೇಶಿಯರು 4,898 ವಿದೇಶಿ ಪ್ರವಾಸಿಗರು ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಏರುಮುಖವಾಗುತ್ತಿರುವುದು ಈ ಅಂಕಿ-ಅಂಶಗಳಿಂದಲೇ ತಿಳಿದು ಬರುತ್ತದೆ. ಅದರಂತೆಯೇ ಪ್ರವಾಹ ಬಂದಿದ್ದರೂ ಈ ಬಾರಿ ಪ್ರವಾಸಿಗರ ಉತ್ಸಾಹಕ್ಕೆ ತಣಿಯುವುದಿಲ್ಲ ಎಂದು ಹೇಳಲಾಗುತ್ತಿದೆ.
ನೆರೆಯಿಂದ ಯಾವ ತೊಂದರೆ ಇಲ್ಲ:
ಜನವರಿ ತಿಂಗಳಲ್ಲಿ ಬಾದಾಮಿ ಬನಶಂಕರಿ ಒಂದು ತಿಂಗಳವರೆಗೆ ಜಾತ್ರೆ ಆರಂಭವಾಗಲಿದೆ. ಫೆಬ್ರುವರಿ ಕೊನೆ ವಾರದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಬರುವ ಪ್ರವಾಸಿಗರಿಗಾಗಿ ಯಾವುದೇ ರೀತಿ ಮೂಲಭೂತ ಸೌಲಭ್ಯಗಳು ತೊಂದರೆಯಾಗದಂತೆ ಪುರಾತತ್ವ ಇಲಾಖೆ ಕಟ್ಟೆಚ್ಚರವನ್ನು ಈಗಾಗಲೇ ವಹಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರವಾಹದ ಭೀತಿಯಿಂದ ಈ ಭಾಗದ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲು ಯಾವುದೇ ರೀತಿಯಲ್ಲೂ ತೊಂದರೆ ಇಲ್ಲ ಎಂದು ಪುರಾತತ್ವ ಇಲಾಖೆ ಅಧಿಕಾರಿ ಪ್ರಶಾಂತ ಕುಲಕರ್ಣಿ ತಿಳಿಸಿದ್ದಾರೆ.
ಸ್ಮಾರಕಗಳಿಗೆ ಧಕ್ಕೆಯಾಗಿಲ್ಲ:
ರಾಜ್ಯದ ಪ್ರಮುಖ ಪ್ರವಾಸ ಕೇಂದ್ರವಾಗಿರುವ ಪಟ್ಟದಕಲ್ಲು ನೆರೆ ಬಂದ ಸಂದರ್ಭದಲ್ಲಿ ಅತಿಯಾದ ಮಳೆಯಾದ ಕಾರಣದಿಂದ ಆವರಣದಲ್ಲಿ ಕೆಸರು ತುಂಬಿಕೊಂಡು ಅಲ್ಲಿರುವ ಸ್ಥಳೀಯರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಎಲ್ಲೆಡೆ ನೀರು ಆವರಿಸಿದ್ದರಿಂದ ದೇವಾಲಯಗಳ ಸುತ್ತಲು ಇರುವ ಕಾಂಪೌಂಡ್ ನೀರಿನ ರಭಸಕ್ಕೆ ಭಾಗಿ ಹಾಳಾಗಿದೆ. ಈಗಾಗಲೆ ಇಲಾಖೆಯವರು ಅವುಗಳ ದುರಸ್ತಿ ಕಾರ‍್ಯವನ್ನು ಆರಂಭಿಸಿದ್ದಾರೆ. ಸದ್ಯ ಸ್ಮಾರಕಗಳ ಸುತ್ತಲಿನ ಪ್ರದೇಶದಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿದೆ. ಅಲ್ಲಿರುವ ವಿರುಪಾಕ್ಷ, ಮಲ್ಲಿಕಾರ್ಜುನ, ಪಾಪನಾಥ ದೇವಾಲಯಗಳಿಗೆ ಯಾವುದೇ ತರನಾದಂತ ದಕ್ಕೆ ಕೂಡ ಆಗಿಲ್ಲ. ಹೀಗಾಗಿ ಪ್ರವಾಸಿಗರು ಬಂದು ಸ್ಥಳ ವೀಕ್ಷಣೆ ಮಾಡುತ್ತಿದ್ದಾರೆ.
ಪ್ರವಾಹದಿಂದ ಸಂತ್ರಸ್ತವಾದ ಪಟ್ಟದಕಲ್ಲಿಗೆ ಸರ್ಕಾರ ಯಾವ ರೀತಿಯಾಗಿ ಮಹತ್ವ ನೀಡುತ್ತಾರೆ ನೋಡಬೇಕು ಮತ್ತು ಅಲ್ಲಿರುವ ಸಂತ್ರಸ್ತರ ಮನವೂಲಿಸಿ ಸ್ಮಾರಕಗಳ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಬರುವ ದಿನಮಾನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ತೋರಿಸುವ ಇಂತಹ ಸುಂದರ ತಾಣಗಳನ್ನು ನಾವು ಜಾಗೃತವಾಗಿ ಕಾಪಾಡಿಕೊಳ್ಳಬೇಕು. ಬರುವ ಯುವ ಪೀಳಿಗೆಗೆ ಈ ಸ್ಮಾರಕಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ಇದರೊಟ್ಟಿಗೆ ಪ್ರವಾಹ ಬಂದರೂ ಪ್ರವಾಸಿಗರ ಸಂಖ್ಯೆ ಮಾತ್ರ ಐತಿಹಾಸಿಕ ಸ್ಥಳಗಳಲ್ಲಿ ಕಡಿಮೆಯಾಗದೇ ಇರುವುದು ಪ್ರವಾಸಿಗರ ಐತಿಹಾಸಿಕ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.