ಎಥೆನಾಲ್‌ನಿಂದ ಚಲಿಸುವ ದೇಶದ ಮೊದಲ ಬೈಕ್ ಅನ್ನು ಟಿವಿಎಸ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ರಾಜ್ಯಗಳಲ್ಲಿ ಮಾತ್ರವೇ ಲಭ್ಯವಾಗಲಿದೆ.
ನವದೆಹಲಿ [ಜು.13]: ಪೆಟ್ರೋಲ್‌ಗಿಂತ ಅಗ್ಗದಲ್ಲಿ ದೊರೆಯುವ ಪರ್ಯಾಯ ಇಂಧನ ಎಥೆನಾಲ್‌ನಿಂದ ಚಲಿಸುವ ದೇಶದ ಮೊದಲ ಬೈಕ್ ಅನ್ನು ಟಿವಿಎಸ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯ ಜನಪ್ರಿಯ ಮಾಡೆಲ್ ಆಗಿರುವ ‘ಅಪಾಚೆ’ಯ ಎಥೆನಾಲ್ ಆವೃತ್ತಿ ಇದಾಗಿದೆ.
ಹೆಚ್ಚು ಸಕ್ಕರೆ ಉತ್ಪಾದಿಸುವ ಮೂರು ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಲ್ಲಿ ಮಾತ್ರ ಲಭ್ಯವಿರುವ ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 1.20 ಲಕ್ಷ ರು. 200 ಸಿಸಿ ಇಂಧನ ಸಾಮರ್ಥ್ಯದ ಈ ಬೈಕ್ ಗಂಟೆಗೆ ಗರಿಷ್ಠ 129 ಕಿ.ಮೀ. ವೇಗದಲ್ಲಿ ಓಡುತ್ತದೆ. ಸಂಪೂರ್ಣ ಎಥೆನಾಲ್‌ನಿಂದ ಚಲಿಸುತ್ತದೆ.
ಗರಿಷ್ಠ ಶೇ.20 ರಷ್ಟು ಮಾತ್ರವೇ ಪೆಟ್ರೋಲ್ ಮಿಶ್ರಣ ಮಾಡಬಹುದು. ಸದ್ಯ ಲೀಟರ್ ಪೆಟ್ರೋಲ್ ಬೆಲೆ 75 ರು. ಆಸುಪಾಸಿನಲ್ಲಿದೆ. ಆದರೆ ಲೀಟರ್ ಎಥೆನಾಲ್ 53 ರು. ಗೆ ಸಿಗುತ್ತದೆ. ಆದರೆ ಪೆಟ್ರೋಲ್‌ನಷ್ಟು ಸುಲಭವಾಗಿ ಲಭ್ಯ ಇಲ್ಲ. ಎಥನಾಲ್ ಬಂಕ್‌ಗಳು ದೇಶದಲ್ಲೆಲ್ಲೂ ಇಲ್ಲ. ಹೀಗಾಗಿ ಎಥೆನಾಲ್ ಲಭ್ಯತೆ ನೋಡಿ ಈ ಬೈಕ್ ಖರೀದಿಸಬೇಕು. ಎಥೆನಾಲ್ ಇಂಧನ ಸಾಂಧ್ರತೆ ಕಡಿಮೆ ಇರುವ ಕಾರಣ ಪೆಟ್ರೋಲ್‌ನಷ್ಟು ಮೈಲೇಜ್ ನಿರೀಕ್ಷಿಸಲಾಗದು.
ಬೈಕ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ದೇಶದಲ್ಲಿ ಎಥೆನಾಲ್ ಬಂಕ್‌ಗಳನ್ನು ತೆರೆಯುವಂತೆ ಪೆಟ್ರೋಲಿಯಂ ಸಚಿವಾಲಯವನ್ನು ಕೋರುವುದಾಗಿ ತಿಳಿಸಿದ್ದಾರೆ.