ಸಂಚಾರ ನಿಯಮಗಳ ದಂಡ ಪರಿಷ್ಕರಣೆಯಾದ ಬಳಿಕ ಕಟ್ಟುನಿಟ್ಟಿನ ದಾಳಿಗಿಳಿದಿರುವ ರಾಜಧಾನಿ ಸಂಚಾರ ಪೊಲೀಸರು, ಸಿಗ್ನಲ್ ಸಮೀಪ ಜೀಬ್ರಾ ಕ್ರಾಸ್‌ನಲ್ಲಿ ನಿಲುಗಡೆ, ಎಡದಿಂದ ವಾಹನ ಹಿಂದಿಕ್ಕುವುದು ಹಾಗೂ ಯೂಟರ್ನ್ ನಿರ್ಬಂಧಿತದಲ್ಲಿ ತಿರುವು ತೆಗೆದುಕೊಳ್ಳುವುದು ಸೇರಿದಂತೆ ಸುಮಾರು 60 ವಿವಿಧ ಸೆಕ್ಷನ್‌ಗಳಡಿ ದಂಡ ಹಾಕುತ್ತಿದ್ದಾರೆ.
ಬೆಂಗಳೂರು [ಸೆ.14]: ಸಂಚಾರ ನಿಯಮ ಉಲ್ಲಂಘಿಸುತ್ತಿವವರಿಗೆ ಸಂಚಾರ ಪೊಲೀಸರ ಬಿಸಿ ಜೋರಾಗಿಯೇ ತಾಗುತ್ತಿದ್ದು, ಸಂಚಾರ ಕಾನೂನು ಉಲ್ಲಂಘನೆ ಸಂಬಂಧ ಗುರುವಾರ ಬೆಳಗ್ಗೆಯಿಂದ 11 ರಿಂದ ಶುಕ್ರವಾರ 11 ಗಂಟೆವರೆಗೆ ನಗರದಲ್ಲಿ 18,503 ಪ್ರಕರಣಗಳು ದಾಖಲಾಗಿದ್ದು, 60,80,500 ru. ದಂಡವನ್ನು ಸಂಚಾರ ಪೊಲೀಸರು ಸಂಗ್ರಹಿಸಿದ್ದಾರೆ.
ಸಂಚಾರ ನಿಯಮಗಳ ದಂಡ ಪರಿಷ್ಕರಣೆಯಾದ ಬಳಿಕ ಕಟ್ಟುನಿಟ್ಟಿನ ದಾಳಿಗಿಳಿದಿರುವ ರಾಜಧಾನಿ ಸಂಚಾರ ಪೊಲೀಸರು, ಸಿಗ್ನಲ್ ಸಮೀಪ ಜೀಬ್ರಾ ಕ್ರಾಸ್‌ನಲ್ಲಿ ನಿಲುಗಡೆ, ಎಡದಿಂದ ವಾಹನ ಹಿಂದಿಕ್ಕುವುದು ಹಾಗೂ ಯೂಟರ್ನ್ ನಿರ್ಬಂಧಿತದಲ್ಲಿ ತಿರುವು ತೆಗೆದುಕೊಳ್ಳುವುದು ಸೇರಿದಂತೆ ಸುಮಾರು 60 ವಿವಿಧ ಸೆಕ್ಷನ್‌ಗಳಡಿ ದಂಡ ಹಾಕುತ್ತಿದ್ದಾರೆ.
ಪಾನಮತ್ತ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು, ಹೆಲ್ಮೆಟ್ ಇಲ್ಲದೆ ಚಾಲನೆ, ತ್ರಿಬಲ್ ರೈಡಿಂಗ್, ಸೀಟ್ ಬೆಲ್ಟ್ ಹಾಕಿಕೊಳ್ಳದೆ ಪ್ರಯಾಣ, ಸಿಗ್ನಲ್ ಜಂಪ್, ಕರ್ಕಶ ಹಾರನ್, ಅತಿವೇಗದ ಚಾಲನೆ, ನೋ ಪಾರ್ಕಿಂಗ್ ಹಾಗೂ ಸಿಗ್ನಲ್ ಜಂಪ್ ಸೇರಿದಂತೆ ಕೆಲವು ಸಂಚಾರ ನಿಯಮಗಳನ್ನು ಹೆಚ್ಚಾಗಿ ಜನರು ಉಲ್ಲಂಘಿಸುತ್ತಿದ್ದರು. ಇವುಗಳ ದಂಡ ಅಧಿಕಗೊಂಡ ಬಳಿಕ ಪೊಲೀಸರು, ಸಣ್ಣ ಪುಟ್ಟಪ್ರಕರಣಗಳಿಗೆ ವಿವಿಧ ಸೆಕ್ಷನ್‌ಗಳಡಿ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಜೀಬ್ರಾ ಕ್ರಾಸ್ ಕ್ರಾಸ್ ಮಾಡಿದ್ರೂ ದಂಡ:
ವಾಹನ ಚಾಲಕರು ಮತ್ತು ಸವಾರರು, ವಾಹನ ಓಡಿಸುವಾಗ ಪಥ ಶಿಸ್ತು ಪಾಲಿಸಬೇಕಿದೆ. ಜೀಬ್ರಾ ಕ್ರಾಸಿಂಗ್‌ನಲ್ಲಿ ವಾಹನ ನಿಲ್ಲಿಸಿದ್ದಕ್ಕೂ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ರಸ್ತೆ ಮಧ್ಯೆ ಹಾಕಿರುವ ಗೆರೆಗಳ ಅನುಸಾರ ವಾಹನಗಳ ಸಾಗಬೇಕು. ಆ ಪಥ ಮೀರಿ ನಡೆದರೆ ಕಟ್ ಯೆಲ್ಲೋ ಲೈನ್ ಸೆಕ್ಷನ್‌ನಡಿ 25 ಪ್ರಕರಣ ದಾಖಲಿಸಿ 3,300 ರು. ದಂಡ ವಸೂಲಿ ಮಾಡಿದ್ದಾರೆ. ಅದೇ ರೀತಿ ಎಡಗಡೆಯಿಂದ ವಾಹನ ಹಿಂದಿಕ್ಕುವುದಕ್ಕೆ 2 ಪ್ರಕರಣದಲ್ಲಿ .1 ಸಾವಿರ ದಂಡ, ಝಿಗ್ ಝಾಗ್ ಡ್ರೈವ್‌ಗೆ 6 ಪ್ರಕರಣ ವರದಿಯಾಗಿ 2,600 ರು. ದಂಡ ವಿಧಿಸಿದ್ದಾರೆ. ಹಾಗೆಯೇ ಯೂ ಟರ್ನ್ ನಿರ್ಬಂಧಿಸಿದ ಸ್ಥಳದಲ್ಲಿ ತಿರುವು ತೆಗೆದುಕೊಂಡ ಕಾರಣಕ್ಕೆ 66 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 23,800 ರು. ದಂಡ ತೆತ್ತಿದ್ದಾರೆ.
ರಸ್ತೆ ವಿಭಜಕ ದಾಟಿದರು ಸಹ ದಂಡ ಬಿದ್ದಿದ್ದು, ಈ ಸಂಬಂಧ 7 ಪ್ರಕರಣ ದಾಖಲಾಗಿ 3,500 ರು. ದಂಡ ಹಾಕಲಾಗಿದೆ. ರಸ್ತೆ ತಿರುವುಗಳಲ್ಲಿ ವಾಹನ ನಿಲುಗಡೆ ಮಾಡಿದ ತಪ್ಪಿಗೆ 4 ಜನರು 4 ಸಾವಿರ ರು. ದಂಡ ಕಟ್ಟಿದ್ದಾರೆ. ರಸ್ತೆಗಳಲ್ಲಿ ಅಡ್ಡಿದಿಡ್ಡಿಯಾಗಿ ವಾಹನ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಉಂಟು ಮಾಡಿದರೂ ಎಂಬ ಕಾರಣಕ್ಕೆ 82 ಜನರು, 40,600 ರು. ದಂಡ ಪಾವತಿಸಿದ್ದಾರೆ. ಅಲ್ಲದೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಪಥಗಳ ಸಾಗದೆ ಅಶಿಸ್ತು ತೋರಿಸಿದರೂ ಎಂದು 387 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, 1,46,700 ರು. ದಂಡ ವಿಧಿಸಲಾಗಿದೆ. ಸಿಗ್ನಲ್‌ಗಳಲ್ಲಿ ಪೊಲೀಸರ ಸೂಚಿಸಿದರೂ ವಾಹನ ನಿಲ್ಲಿಸದ ಹೋಗಿದ್ದಕ್ಕೆ 9 ಜನರಿಗೆ 4,100 ರು. ದಂಡ ಬಿದ್ದಿದೆ.
ಮಾಲಿನ್ಯ ಮಾಡಿದ್ರು ಬೀಳುತ್ತೇ ದಂಡ:
ವಾಹನಗಳ ಶಬ್ದ ಮತ್ತು ವಾಯು ಮಾಲಿನ್ಯ ಬಗ್ಗೆ ಸಹ ಸಂಚಾರ ಪೊಲೀಸರು ಕಠಿಣ ನಿಲುವು ತಾಳಿದ್ದಾರೆ. ವಾಹನಗಳು ಕಪ್ಪು ಹೊಗೆ ಸೂಸಿದರೆ, ಶಬ್ದ ಜೋರಾದರೆ, ಕರ್ಕಶ ದನಿ ಮೊಳಗಿಸಿದರೆ ಪ್ರತ್ಯೇಕ ದಂಡ ಬೀಳುತ್ತದೆ. ಹೀಗಾಗಿ ಸಾರ್ವಜನಿಕರು, ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸಬೇಕಿದೆ.
ಇದೇ ರೀತಿ ಒಂದೇ ದಿನದಲ್ಲಿ ಕಪ್ಪು ಹೊಗೆ ಹೊಮ್ಮಿಸಿದ ವಾಹನಗಳಿಗೆ 131 ಪ್ರಕರಣಗಳು, 13,100 ರು. ದಂಡ ಹಾಕಲಾಗಿದೆ. ಅದೇ ರೀತಿ ವಾಯು ಮತ್ತು ಶಬ್ದಮಾಲಿನ್ಯ ಸಂಬಂಧ ಐದು ಪ್ರಕರಣ ದಾಖಲಾಗಿದ್ದು 5 ಸಾವಿರ ರು. ದಂಡ ಬಿದ್ದಿದೆ. ಕರ್ಕಶ ಹಾರನ್ ಮಾಡಿದವರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು, 24 ಪ್ರಕರಣ ಹೂಡಿ 12 ಸಾವಿರ ರು. ದಂಡ ವಿಧಿಸಿದ್ದಾರೆ.
ಸಮವಸ್ತ್ರ ಇಲ್ಲದ ಚಾಲಕರಿಗೆ 2 ಲಕ್ಷ ದಂಡ
ಸಮವಸ್ತ್ರ ಧರಿಸದ ಚಾಲಕರಿಗೆ ಚುರುಕು ಮುಟ್ಟಿಸಿರುವ ಪೊಲೀಸರು, ಒಂದೇ ದಿನದಲ್ಲಿ 505 ಪ್ರಕರಣಗಳು ದಾಖಲಿಸಿ 2,52,500 ರು. ದಂಡ ವಿಧಿಸಿದ್ದಾರೆ. ಸಾಮಾನ್ಯ ಜನರ ಹೊರತುಡಿಸಿ ಸಾರ್ವಜನಿಕ ಸಾರಿಗೆ ವಾಹನಗಳ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ನಿಯಮ ಉಲ್ಲಂಘಿಸಿದವ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದರು. ಈ ಸೂಚನೆ ಬೆನ್ನೆಲೆ ಕಾರ್ಯಾಚರಣೆಗಿಳಿದ ಪೊಲೀಸರು, ಅಶಿಸ್ತು ತೋರಿದ ಚಾಲಕರ ಮೇಲೆ ಗದಾ ಪ್ರಹಾರ ನಡೆಸಿದ್ದಾರೆ.