ಅಧಿಕೃತ ಆದೇಶ ಬರೋತನಕ ಯಥಾಪ್ರಕಾರ ದಂಡ

By Kannadaprabha News  |  First Published Sep 15, 2019, 8:11 AM IST

ಅಧಿಕೃತ ಆದೇಶ ಬರುವವರೆಗೂ ಕೂಡ ಈಗಿನ ದಂಡದ ಪ್ರಮಾಣವೇ ಮುಂದುವರಿಯಲಿದೆ. ಬೆಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 


ಬೆಂಗಳೂರು [ಸೆ.15]:  ಸಂಚಾರ ನಿಯಮ ಉಲ್ಲಂಘನೆಗಳ ಪರಿಷ್ಕೃತ ದಂಡ ಜಾರಿಗೆ ತಡೆ ನೀಡಿರುವುದಾಗಿ ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಹೇಳಿಕೆಯು ಸಾರ್ಜಜನಿಕ ವಲಯದಲ್ಲಿ ಗೊಂದಲ ಹುಟ್ಟುಹಾಕಿದ್ದು, ದಂಡದ ಸ್ವರೂಪ ಕುರಿತಂತೆ ಪೊಲೀಸರು ಹಾಗೂ ಸಾರ್ಜಜನಿಕರ ನಡುವೆ ತಿಕ್ಕಾಟ ಉದ್ಭವಗೊಂಡಿದೆ.

ಹೊಸ ದಂಡ ರದ್ದು ಪಡಿಸಿರುವುದಾಗಿ ಮಾಧ್ಯಮಗಳಿಗೆ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ನಾವು ಅಧಿಕ ದಂಡ ಪಾವತಿಸುವುದಿಲ್ಲವೆಂದು ಸಂಚಾರ ನಿಯಮ ಉಲ್ಲಂಘಿಸಿದ ಕೆಲವು ಸವಾರರು ಪಟ್ಟು ಹಿಡಿದ ಘಟನೆಗಳು ನಡೆದಿವೆ.

Latest Videos

ಬದಲಾವಣೆಯಿಲ್ಲ:  ಆದರೆ, ದಂಡ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಆದೇಶ ಹೊರಬೀಳದ ಹಿನ್ನೆಲೆಯಲ್ಲಿ ಪೊಲೀಸರು ಜಾರಿಯಲ್ಲಿರುವ ಬದಲಾದ ದಂಡವನ್ನೇ ವಸೂಲಿ ಮಾಡಲು ಮುಂದಾದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ಸರ್ಕಾರದ ಆದೇಶ ಬರುವರೆಗೆ ಹೊಸ ದಂಡನ್ವಯವೇ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಸಂಚಾರ ನಿಯಮಗಳ ದಂಡದ ಮೊತ್ತವನ್ನು ಅಧಿಕಗೊಳಿಸಿ ಆದೇಶಿಸಿತ್ತು. ಇದಕ್ಕೆ ಸೆ.3ರಂದು ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರವು, ರಾಜ್ಯದಲ್ಲಿ ಪರಿಷ್ಕೃತ ದಂಡ ಜಾರಿಗೆ ಹಸಿರು ನಿಶಾನೆ ತೋರಿತು. ಆದರೆ ಕೇಂದ್ರದ ದಂಡಾಸ್ತ್ರ ವಿರುದ್ಧ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.

ಭರವಸೆ ನೀಡಿದ್ದ ಸಿಎಂ:  ಈ ಅಸಮಾಧಾನ ಹಿನ್ನೆಲೆಯಲ್ಲಿ ಎಚ್ಚೆತ್ತ ಗುಜರಾತ್‌ ಸರ್ಕಾರವು, ತನ್ನ ರಾಜ್ಯದಲ್ಲಿ ಕೇಂದ್ರ ಜಾರಿಗೆ ತಂದ ದಂಡ ಮೊತ್ತವನ್ನು ಕಡಿಮೆಗೊಳಿಸಿತ್ತು. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಸಹ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದರು. ಇತ್ತ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ ಅವರು, ಸಂಚಾರ ನಿಯಮ ಉಲ್ಲಂಘನೆಗಳಿಗೆ ಹಳೆ ದಂಡವನ್ನು ವಿಧಿಸುವಂತೆ ಮೌಖಿಕವಾಗಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದರು.

ಈ ಬಗ್ಗೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯುಕ್ತ ಭಾಸ್ಕರ್‌ ರಾವ್‌ ಅವರು, ನಮಗೆ ಇದುವರೆಗೆ ಸಂಚಾರ ಪರಿಷ್ಕೃತ ದಂಡ ಜಾರಿಗೆ ತಡೆ ನೀಡುವಂತೆ ಸರ್ಕಾರದ ಆದೇಶ ಬಂದಿಲ್ಲ. ಹೀಗಾಗಿ ಸರ್ಕಾರದ ಅಧಿಕೃತ ಆದೇಶ ಬರುವರೆರೆಗೆ ಹೊಸ ನಿಯಮ ಯಥಾಪ್ರಕಾರ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದರು.

10 ಸಾವಿರ ಪ್ರಕರಣ, 38 ಲಕ್ಷ ರು. ದಂಡ

ಇನ್ನು ದಂಡ ಪರಿಷ್ಕರಣೆ ಬಳಿಕ ಸಂಚಾರ ಪೊಲೀಸರ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು, ಮತ್ತೆ ಒಂದೇ ದಿನದಲ್ಲಿ ನಗರದ ವ್ಯಾಪ್ತಿ 10974 ಸಾವಿರ ಪ್ರಕರಣ ದಾಖಲಿಸಿ 38,12,200 ಲಕ್ಷ ರು. ದಂಡವನ್ನು ವಸೂಲಿ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆ 10 ರಿಂದ ಶನಿವಾರ ಬೆಳಗ್ಗೆ 10 ಗಂಟವರೆಗೆ ಈ ದಂಡ ವಿಧಿಸಲಾಗಿದೆ. ಸಂಚಾರ ಪಥ ಪಾಲಿಸದಿರುವ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ, ಮೊಬೈಲ್‌ ಬಳಕೆ, ಹೆಲ್ಮೆಟ್‌ ಇಲ್ಲದೆ ಚಾಲನೆ ಸೇರಿದಂತೆ ಇನ್ನಿತರ 61 ಆರೋಪಗಳಡಿ ಪ್ರಕರಣ ದಾಖಲಾಗಿವೆ. ಇದರಲ್ಲಿ ಪೋಟ್‌ ಬೋರ್ಡ್‌ ಮೇಲೆ ನಿಂತು ಪ್ರಯಾಣಿಸಿದ ತಪ್ಪಿಗೆ ವ್ಯಕ್ತಿಯೊಬ್ಬರಿಗೆ 100 ರು. ದಂಡ ವಿಧಿಸಲಾಗಿದೆ. ನಂಬರ್‌ ಪ್ಲೇಟ್‌ ಇಲ್ಲದ ಕಾರಣಕ್ಕೆ 440 ಪ್ರಕರಣಗಳನ್ನು ಹಾಕಿ 1,40,400 ರು. ದಂಡವನ್ನು ಹೂಡಿದ್ದಾರೆ. ಸಿಗ್ನಲ್‌ ಜಂಪ್‌ ಮಾಡಿದ್ದಕ್ಕೆ 1499 ಪ್ರಕರಣಗಳ ವರದಿಯಾಗಿದ್ದು, 2,65,900 ರು. ದಂಡ ವಸೂಲಿಯಾಗಿದೆ.

click me!