2020ರ ಅಕ್ಟೋಬರ್‌ನಿಂದ ವಾಹನ ಸುರಕ್ಷತೆಗೆ ಸಂಬಂಧಿಸಿದ ‘ಭಾರತ್ ಹೊಸ ವಾಹನ ಸುರಕ್ಷತಾ ಮೌಲ್ಯಮಾಪನ ಯೋಜನೆ’ ಆರಂಭವಾಗಲಿದ್ದು ಇದೇ ವೇಳೆ ಜನಪ್ರಿಯ ಮಾರುತಿ ಒಮ್ನಿ ಉತ್ಪಾದನೆಯೂ ಕೂಡ ಸ್ಥಗಿತವಾಗಲಿದೆ.
ನವದೆಹಲಿ : ತನ್ನ ಜನಪ್ರಿಯ ಬ್ರ್ಯಾಂಡ್ ‘ಮಾರುತಿ ಓಮ್ನಿ’ ಉತ್ಪಾದನೆಯನ್ನು 2020ರ ಅಕ್ಟೋಬರ್‌ನಿಂದ ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ನಿರ್ಧರಿಸಿದೆ. 2020ರ ಅಕ್ಟೋಬರ್‌ನಿಂದ ವಾಹನ ಸುರಕ್ಷತೆಗೆ ಸಂಬಂಧಿಸಿದ ‘ಭಾರತ್ ಹೊಸ ವಾಹನ ಸುರಕ್ಷತಾ ಮೌಲ್ಯಮಾಪನ ಯೋಜನೆ’ ಆರಂಭವಾಗಲಿದ್ದು, ಅಂದಿನಿಂದ ಹಲವು ವಾಹನಗಳ ಉತ್ಪಾದನೆ ಸ್ಥಗಿತವಾಗಲಿದೆ.
ಅದರಲ್ಲಿ ಮಾರುತಿ ಓಮ್ನಿ ಕೂಡ ಒಂದು’ ಎಂದು ಮಾರುತಿ ಸುಝುಕಿ ಇಂಡಿಯಾ ಚೇರ್ಮನ್ ಆರ್.ಸಿ. ಭಾರ್ಗವ ಹೇಳಿದ್ದಾರೆ. ‘ಈ ಹಿಂದೆ ಮಾರುತಿ 800 ಕಾರು ನಮ್ಮ ಮಹತ್ವದ ಮಾಡೆಲ್ ಆಗಿತ್ತು. ಅದನ್ನು ಸ್ಥಗಿತಗೊಳಿಸಿದ ರೀತಿಯಲ್ಲಿ ಓಮ್ನಿಯನೂ ಸ್ಥಗಿತಗೊಳಿಸಲಿದ್ದೇವೆ’ ಎಂದು ಭಾರ್ಗವ ಹೇಳಿದ್ದಾರೆ.
undefined
1983ರಲ್ಲಿ ಭಾರತ ಮತ್ತು ಜಪಾನ್ ಸಹಕಾರದಲ್ಲಿ ಆರಂಭವಾಗಿದ್ದ ಕಂಪನಿಯು ಮಾರುತಿ 800 ಕಾರುಗಳನ್ನು ಬಿಡುಗಡೆ ಮಾಡಿತ್ತು. 1984ರಲ್ಲಿ ಮಾರುತಿ ಸುಝುಕಿ ಕಂಪನಿಯ ಎರಡನೇ ಉತ್ಪನ್ನವಾಗಿ ಮಾರುತಿ ವ್ಯಾನ್ ಬಿಡುಗಡೆಯಾಗಿತ್ತು. 1998ರಲ್ಲಿ ಕಾರಿನ ಹೆಸರನ್ನು ಮಾರುತಿ ಓಮ್ನಿ ಎಂದು ಬದಲಾಯಿಸಲಾಗಿತ್ತು. ಕಳೆದ 34 ವರ್ಷಗಳಲ್ಲಿ ಓಮ್ನಿ ಕಾರುಗಳು, ನಂತರದ 34 ವರ್ಷಗಳಲ್ಲಿ ದೇಶದ ರಸ್ತೆಯನ್ನು ಬಹುವಾಗಿ ಆಳಿತ್ತು. ಕಳೆದ 34 ವರ್ಷಗಳಲ್ಲಿ ಮೂಲ ಕಾರಿನ ಮಾದರಿಯಲ್ಲಿ ಕೇವಲ 2 ಬಾರಿ ಮಾತ್ರ ಬದಲಾವಣೆ ಮಾಡಲಾಗಿತ್ತು. 1998ರಲ್ಲಿ ಹೆಡ್‌ಲ್ಯಾಂಪ್ ಮತ್ತು 2005ರಲ್ಲಿ ಕಾರಿನ ಮುಂಭಾಗ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು.
ಶಾಲಾ ವಾಹನಗಳು, ಕ್ಯಾಬ್‌ಗಳಿಗಾಗಿ ಜನಪ್ರಿಯವಾಗಿದ್ದ ಓಮ್ನಿ ಕಾರುಗಳು ಸುರಕ್ಷತಾ ಸಮಸ್ಯೆ ಎದುರಿಸುತ್ತಿವೆ. ಅಪಘಾತದಂಥ ಸಂದರ್ಭದಲ್ಲಿ ಅತ್ಯಂತ ಜರೂರಾಗಿ ಬೇಕಾದ ಸುರಕ್ಷತಾ ಮಾನದಂಡಗಳನ್ನು ಅವು ಹೊಂದಿಲ್ಲ ಎಂಬ ದೂರುಗಳು ಜನರಿಂದ ಕೇಳಿಬರುವುದು ಸಾಮಾನ್ಯ.
ವಿನ್ಯಾಸ ಬದಲು: ಇದೇ ವೇಳೆ, ಮಾರುತಿ ಇಕೋ ಹಾಗೂ ಆಲ್ಟೋ-800 ಕಾರುಗಳಲ್ಲಿ ಕೂಡ ಸುರಕ್ಷತೆಗೆ ಸಂಬಂಧಿಸಿದ ದೋಷಗಳಿದ್ದು, ಅವುಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಸುರಕ್ಷತಾ ಮಾನದಂಡಗಳು ಪಾಲನೆಯಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಉತ್ಪಾದನೆ ಸ್ಥಗಿತ ಏಕೆ?
2020ರ ವೇಳೆಗೆ ಎಲ್ಲಾ ವಾಹನಗಳೂ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಅಂದರೆ ಅಪಘಾತದ ವೇಳೆ ವಾಹನ ಒಳಗಿನ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸುವುದು ಈ ಮಾನದಂಡ ಉದ್ದೇಶ. ಆದರೆ ಮಾರುತಿ ಓಮ್ನಿ ಕಾರಿನ ಮುಂಭಾಗ ಅತ್ಯಂತ ನೇರವಾಗಿದ್ದು, ಅಪಘಾತದ ಸಂದರ್ಭದಲ್ಲಿ ಕಾರಿನ ಒಳಗಿದ್ದವರಿಗೆ ಯಾವುದೇ ಸುರಕ್ಷತೆ ಇರದು. ಹೊಸ ಮಾನದಂಡ ಅಳವಡಿಸಲು ಓಮ್ನಿ ಮಾಡೆಲ್‌ನಲ್ಲಿ ಸಾಧ್ಯವಿಲ್ಲ. ಹೀಗಾಗಿ ಈ ಮಾಡೆಲ್ ಅನ್ನೇ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.