
ಜನರ ಆಸಕ್ತಿ, ಹವ್ಯಾಸಗಳು ಸಂಪೂರ್ಣ ಭಿನ್ನವಾಗಿರುತ್ತವೆ. ಜನರು ತಮ್ಮ ಶೋಕಿ ಪೂರೈಸಲು ಏನೇನ್ ಮಾಡೋದಿಲ್ಲ ಹೇಳಿ?. ಕೆಲವರು ಫಾರೆನ್ ಟ್ರಿಪ್ ಗೆ ಹೋಗ್ತಾರೆ. ಮತ್ತೆ ಕೆಲವರು ಸಾಹಸ ಮಾಡೋದನ್ನು ಇಷ್ಟಪಡ್ತಾರೆ. ಮತ್ತೆ ಕೆಲವರು ದುಬಾರಿ, ಐಷಾರಾಮಿ ವಾಹವನ್ನು ಖರೀದಿ ಮಾಡ್ತಾರೆ. ಆದರೆ ಮತ್ತೆ ಕೆಲವರಿಗೆ ಕಾರಿಗಿಂತ ವಿಐಪಿ ಸಂಖ್ಯೆ ಮೇಲೆ ಹೆಚ್ಚಿನ ಮೋಹವಿರುತ್ತದೆ. ಇತ್ತೀಚೆಗೆ, ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ವ್ಯಕ್ತಿ ತನ್ನ 1 ಲಕ್ಷದ ಸ್ಕೂಟರ್ ಗಾಗಿ 14 ಲಕ್ಷ ರೂಪಾಯಿ ಖರ್ಚು ಮಾಡಿ ವಿಐಪಿ ನಂಬರ್ ಪ್ಲೇಟ್(VIP number plate) ಖರೀದಿಸಿದ್ದಾನೆ.
ಹಮೀರ್ಪುರದ ಸಂಜೀವ್ ಕುಮಾರ್ ಇಷ್ಟೊಂದು ಹಣ ನೀಡಿ ನಂಬರ್ ಪ್ಲೇಟ್ ಖರೀದಿ ಮಾಡಿದ ಮೊದಲ ವ್ಯಕ್ತಿ ಅಲ್ಲ. ಅವರಿಗಿಂತ ಮುಂಚೆಯೇ, ಭಾರತದಲ್ಲಿ ಅನೇಕ ಜನರು ತಮ್ಮ ನೆಚ್ಚಿನ ನಂಬರ್ ಪ್ಲೇಟ್ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಅವರಂತೆ ನೀವೂ ಕೂಡ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿ ಮಾಡಲು ಬಯಸಿದ್ರೆ ಏನು ಮಾಡ್ಬೇಕು ಗೊತ್ತಾ?
ವಿಐಪಿ ನಂಬರ್ ಪ್ಲೇಟ್ ಹೇಗಿರುತ್ತೆ? : 0001 ರಿಂದ 9999 ರವರೆಗಿನ ಸಂಖ್ಯೆಗಳನ್ನು ವಾಹನಗಳಿಗೆ ಪ್ರತಿ ಸರಣಿಯಲ್ಲಿ ನೀಡಲಾಗುತ್ತೆ. ಸಾರಿಗೆ ಇಲಾಖೆ ಇವುಗಳಲ್ಲಿ ಆಯ್ದ ಸಂಖ್ಯೆಗಳನ್ನು ವಿಐಪಿ ಸಂಖ್ಯೆಗಳಾಗಿ ಹರಾಜು ಮಾಡುವ ಮೂಲಕ ಮಾರಾಟ ಮಾಡುತ್ತದೆ. ಇವುಗಳನ್ನು ಸೂಪರ್ ಎಲೈಟ್, ಸಿಂಗಲ್ ಡಿಜಿಟ್ ಮತ್ತು ಸೆಮಿ ಫ್ಯಾನ್ಸಿ ಸಂಖ್ಯೆಗಳಂತಹ ವರ್ಗಗಳಾಗಿ ವಿಂಗಡಿಸುವ ಮೂಲಕ ಹರಾಜು ಮಾಡುತ್ತದೆ. ಪ್ರತಿಯೊಂದು ನಂಬರ್ ಹರಾಜಿನ ಮೂಲ ಬೆಲೆ ವಿಭಿನ್ನವಾಗಿರುತ್ತದೆ.
ವಿಐಪಿ ಸಂಖ್ಯೆಗಳನ್ನು ವಿವಿಧ ಆರ್ಟಿಒಗಳಲ್ಲಿ ಅಂದ್ರೆ ವಿವಿಧ ರಾಜ್ಯಗಳ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನೀಡಲಾಗುತ್ತದೆ. ಪ್ರತಿ ರಾಜ್ಯದಲ್ಲಿ ವಿಐಪಿ ನಂಬರ್ ಪ್ಲೇಟ್ಗಳ ಹರಾಜಿನ ಸಂಪೂರ್ಣ ಪ್ರಕ್ರಿಯೆಯನ್ನು ಸಾರಿಗೆ ಇಲಾಖೆಯ fancy.parivahan.gov.in ವೆಬ್ಸೈಟ್ನಲ್ಲಿರುವ ಉಲ್ಲೇಖಿಸಲಾಗಿದೆ. ನಿಮ್ಮ ರಾಜ್ಯದ ಆರ್ಟಿಒದಲ್ಲಿ ಹರಾಜಾಗಬೇಕಾದ ವಿಐಪಿ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ನೀವು ಬಯಸಿದರೆ, ನೀವು ಬಿಡ್ ಮಾಡಬಹುದು.
ವಿಐಪಿ ಸಂಖ್ಯೆಯನ್ನು ಹೇಗೆ ಪಡೆಯಬಹುದು? : ವಿಐಪಿ ಸಂಖ್ಯೆಗಳ ಬಿಡ್ಡಿಂಗ್ನಲ್ಲಿ ಭಾಗವಹಿಸಲು ನೀವು ಸಾರಿಗೆ ಇಲಾಖೆಯ fancy.parivahan.gov.in ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮೊದಲು ನೀವು ವೆಬ್ಸೈಟ್ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ, ಹೆಸರು, ಇಮೇಲ್, ಮೊಬೈಲ್ ಮತ್ತು ರಾಜ್ಯದಂತಹ ಮೂಲಭೂತ ಮಾಹಿತಿಯನ್ನು ನೀಡಬೇಕು. ಲಾಗಿನ್ ಮಾಡಿ ಮತ್ತು ಇ-ಹರಾಜು ಪೇಜ್ ಗೆ ಹೋಗಿ. ಫ್ಯಾನ್ಸಿ ಸಂಖ್ಯೆಯನ್ನು ಪಡೆಯಲು ಬಯಸುವ ರಾಜ್ಯವನ್ನು ಆಯ್ಕೆ ಮಾಡಿ. ಆರ್ಟಿಒ ಆಯ್ಕೆಮಾಡಿ. ಇಲ್ಲಿ ನೀವು ಹರಾಜಿಗೆ ಲಭ್ಯವಿರುವ ವಿಐಪಿ ಸಂಖ್ಯೆಗಳನ್ನು ಕಾಣಬಹುದು. ವಿಐಪಿ ಸಂಖ್ಯೆ ಹರಾಜಿನಲ್ಲಿ ಭಾಗವಹಿಸಲು, ನಿಮ್ಮ ವಿವರವಾದ ಮಾಹಿತಿಯನ್ನು ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಾದ ನಂತರ, ನೀವು ಶುಲ್ಕವನ್ನು ಪಾವತಿಸುವ ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಬಿಡ್ ಮಾಡಿದವರಿಗೆ ಸಂಖ್ಯೆಯನ್ನು ನೀಡಲಾಗುತ್ತದೆ.
ನಂಬರ್ ಮೂಲ ಬೆಲೆ ಎಷ್ಟು? : ರಾಜ್ಯಕ್ಕೆ ತಕ್ಕಂತೆ ನಂಬರ್ ಮೂಲ ಬೆಲೆ ಬದಲಾಗುತ್ತದೆ. ಸಾಮಾನ್ಯವಾಗಿ, ದ್ವಿಚಕ್ರ ವಾಹನಗಳಿಗೆ ಮೂಲ ಬೆಲೆ 5000 ರಿಂದ 50 ಸಾವಿರದವರೆಗೆ ಇರುತ್ತದೆ. ನಾಲ್ಕು ಚಕ್ರಗಳ ವಾಹನಗಳಿಗೆ 20 ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ವಾಣಿಜ್ಯ ವಾಹನಗಳಿಗೆ, ಮೂಲ ಬೆಲೆ 10 ಸಾವಿರದಿಂದ 50 ಸಾವಿರ ರೂಪಾಯಿಗಳವರೆಗೆ ಇರುತ್ತದೆ. 0001, 007, 9999 ನಂತಹ ಸೂಪರ್ ವಿಐಪಿ ಸಂಖ್ಯೆಗಳಿಗೆ, ಮೂಲ ಬೆಲೆ 50 ಸಾವಿರದಿಂದ ಎರಡು ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
ವಿಶ್ವದ ದುಬಾರಿ ನಂಬರ್ ಪ್ಲೇಟ್ ಯಾವುದು? : ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಅನ್ನು ದುಬೈನಲ್ಲಿ 122.6 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ದುಬೈನ ಜುಮೇರಾದಲ್ಲಿರುವ ಮೊಹಮ್ಮದ್ ಬಿನ್ ರಶೀದ್ ಗ್ಲೋಬಲ್ ಇನಿಶಿಯೇಟಿವ್ಸ್ 2023 ರಲ್ಲಿ 'P 7' ಎಂಬ VIP ಕಾರಿನ ನಂಬರ್ ಪ್ಲೇಟ್ಗಾಗಿ 55 ಮಿಲಿಯನ್ ದಿರ್ಹಮ್ಗಳನ್ನು (UAE ಕರೆನ್ಸಿ) ಬಿಡ್ ಮಾಡಿತು. ಗಿನ್ನೆಸ್ ಪುಸ್ತಕವು ಇದನ್ನು ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎಂದಿದೆ.