ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಸಲು ಕೊನೆಯ ದಿನ

By Kannadaprabha News  |  First Published Jan 15, 2020, 8:18 AM IST

ಫಾಸ್ಟ್ಯಾಗ್ ಅಳವಡಿಕೆಗೆ ಇಂದೇ ಕೊನೆಯ ದಿನವಾಗಿದ್ದು, ಮತ್ತೊಮ್ಮೆ ಡೆಡ್ ಲೈನ್ ವಿಸ್ತರಣೆ ಮಾಡುವುದು ಅನುಮಾನವಾಗಿದೆ. 


ಬೆಂಗಳೂರು[ಜ.15]:  ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಕೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಜ.15ಕ್ಕೆ ಅಂತ್ಯಗೊಳ್ಳಲಿದೆ. ರಾಜ್ಯದಲ್ಲಿ ಈವರೆಗೆ ಶೇ.65ರಷ್ಟುವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಂಡಿವೆ. ಶೇ.15ರಷ್ಟುವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಕೆಗೆ ವಿನಾಯಿತಿ ನೀಡಲಾಗಿದೆ. ಇನ್ನುಳಿದ ಶೇ.20ರಷ್ಟುವಾಹನಗಳು ಇನ್ನೂ ಫಾಸ್ಟ್ಯಾಗ್‌ ಅಳವಡಿಕೆ ಮಾಡಿಕೊಂಡಿಲ್ಲ. ಫಾಸ್ಟ್ಯಾಗ್‌ ಅಳವಡಿಕೆಗೆ ಈವರೆಗೆ ಎರಡು ಬಾರಿ ಗಡುವು ವಿಸ್ತರಿಸಿರುವುದರಿಂದ ಮತ್ತೊಮ್ಮೆ ಗಡುವು ವಿಸ್ತರಣೆ ಅನುಮಾನವಾಗಿದೆ.

ಏತನ್ಮಧ್ಯೆ, ಜ.15ರ ಮಧ್ಯರಾತ್ರಿಯಿಂದ ಪ್ರತಿ ಟೋಲ್‌ ಪ್ಲಾಜಾದಲ್ಲಿ ಒಂದು ಲೇನ್‌ ಮಾತ್ರ ಹೈಬ್ರಿಡ್‌ ಆಗಿರಲಿದೆ. ಅದರಲ್ಲಿ ಫಾಸ್ಟ್ಯಾಗ್‌ ಅಳವಡಿಸದ ವಾಹನಗಳು ನಗದು ಪಾವತಿಸಿ ಸಾಗಬಹುದಾಗಿದೆ. ಉಳಿದೆಲ್ಲಾ ಲೇನ್‌ಗಳು ಫಾಸ್ಟ್ಯಾಗ್‌ ಅಳವಡಿಸಿದ ವಾಹನಗಳಿಗೆ ಮೀಸಲಾಗಿದ್ದು, ಒಂದು ವೇಳೆ ಫಾಸ್ಟ್ಯಾಗ್‌ ಇಲ್ಲದ ವಾಹನಗಳು ಆ ಲೇನ್‌ಗೆ ಪ್ರವೇಶಿಸಿದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Tap to resize

Latest Videos

undefined

ಫಾಸ್ಟ್ಯಾಗ್‌ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ ಕಟ್ಟಬೇಕಿಲ್ಲ...

ಈಗಾಗಲೇ ರಾಜ್ಯದಲ್ಲಿ ಫಾಸ್ಟ್ಯಾಗ್‌ ಖರೀದಿ ಕಡಿಮೆಯಾಗಿದೆ. ಟೋಲ್‌ ಪ್ಲಾಜಾಗಳಲ್ಲಿ ತೆರೆದಿರುವ ಫಾಸ್ಟ್ಯಾಗ್‌ ಸೆಂಟರ್‌ಗಳು ಹಾಗೂ ಬ್ಯಾಂಕ್‌ಗಳಿಗೆ ಬರುವ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಫಾಸ್ಟ್ಯಾಗ್‌ಗಳ ಪೂರೈಕೆಯಲ್ಲಿ ವ್ಯತ್ಯಯವಿಲ್ಲ ಎಂದರು.

ಆನ್‌ಲೈನ್‌ನಲ್ಲಿ ವಿಳಂಬ:

ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್‌ ಬುಕ್‌ ಮಾಡಿದವರಲ್ಲಿ ಅನೇಕರು ಪೇಚಿಗೆ ಸಿಲುಕಿದ್ದಾರೆ. 15 ದಿನದ ಹಿಂದೆ ಫಾಸ್ಟ್ಯಾಗ್‌ ಬುಕ್‌ ಮಾಡಿದ ಅನೇಕರಿಗೆ ಈವರೆಗೂ ಫಾಸ್ಟ್ಯಾಗ್‌ ಕೈಸೇರಿಲ್ಲ. ಹೀಗಾಗಿ ಅವರು ಟೋಲ್‌ ಪ್ಲಾಜಾಗಳಲ್ಲಿ ಅನಿವಾರ್ಯವಾಗಿ ಕ್ಯಾಶ್‌ ಲೇನ್‌ನಲ್ಲೇ ತೆರಳಬೇಕು. ಇಲ್ಲವೇ ಎರಡು ಪಟ್ಟು ಶುಲ್ಕ ತೆತ್ತು ಫಾಸ್ಟ್ಯಾಗ್‌ ಲೇನ್‌ನಲ್ಲಿ ಸಂಚರಿಸಬೇಕಿದೆ.

ಮೀಸಲು ಲೇನ್‌ ಕಡ್ಡಾಯ:

ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್‌ ಲೇನ್‌, ಕ್ಯಾಶ್‌ ಲೇನ್‌ ಹಾಗೂ ವಿವಿಐಪಿ ಲೇನ್‌ ಎಂದು ಮೀಸಲಿರಿಸಲಾಗಿದೆ. ಈ ಮೀಸಲಿಗೆ ಅನುಗುಣವಾಗಿ ವಾಹನಗಳು ಆಯಾಯ ಲೇನ್‌ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಇಷ್ಟುದಿನ ಕ್ಯಾಶ್‌ ಲೇನ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ ಒಂದೆರಡು ಫಾಸ್ಟ್ಯಾಗ್‌ ಲೇನ್‌ಗಳಲ್ಲೂ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಇನ್ನುಮುಂದೆ ಇಂತಹ ಯಾವುದೇ ಬದಲಾವಣೆ ಇಲ್ಲ. ಮೀಸಲು ಲೇನ್‌ಗಳಿಗೆ ಅನುಗುಣವಾಗಿ ಸಂಚರಿಸಬೇಕು ಎಂದು ಎನ್‌ಎಚ್‌ಎಐನ ಅಧಿಕಾರಿಯೊಬ್ಬರು ಹೇಳಿದರು.

ಫಾಸ್ಟ್ಯಾಗ್‌ ಅಳವಡಿಕೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಜ.15ಕ್ಕೆ ಅಂತ್ಯಗೊಳ್ಳಲಿದೆ. ಇನ್ನುಮುಂದೆ ವಾಹನಗಳು ಟೋಲ್‌ ಪ್ಲಾಜಾಗಳಲ್ಲಿ ಕಡ್ಡಾಯವಾಗಿ ನಿಗದಿತ ಲೇನ್‌ಗಳಲ್ಲೇ ಸಂಚರಿಸಬೇಕು. ಫಾಸ್ಟ್ಯಾಗ್‌ ಅಳವಡಿಕೆಗೆ ಮತ್ತೊಮ್ಮೆ ಗಡುವು ವಿಸ್ತರಿಸುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

- ಶ್ರೀಧರ್‌, ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿ ಪ್ರಧಾನ ವ್ಯವಸ್ಥಾಪಕ

click me!