Asianet Suvarna News Asianet Suvarna News

ಬಿಜೆಪಿ ಅಡಿಪಾಯವೇ ಇಲ್ಲದ ತಮಿಳುನಾಡಿಗೆ ಮೋದಿ 'ಪ್ರಣಾಳಿಕೆ' ವಾಗ್ದಾನ, ಪೆರಿಯಾರ್‌ ಪಾಲಿಟಿಕ್ಸ್‌ಗೆ ತಿರುವಳ್ಳುವರ್ ರಣತಂತ್ರ!

ಬಹುಶಃ ದೇಶದ ದೊಡ್ಡ ರಾಜ್ಯಗಳ ಪೈಕಿ ಯಾವುದಾದರೂ ಒಂದು ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವವೇ ಇಲ್ಲ ಎಂದರೆ ಅದು ತಮಿಳುನಾಡಿನಲ್ಲಿ ಮಾತ್ರ. ಆದರೆ, ಈ ಬಾರಿ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಕನಿಷ್ಠ 4 ಕ್ಷೇತ್ರದಲ್ಲಾದರೂ ಬಿಜೆಪಿ ಗೆಲ್ಲಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.

Prime Minister Narendra Modi BJP manifesto promises the world to the Tamil people san
Author
First Published Apr 14, 2024, 4:26 PM IST

ನವದೆಹಲಿ (ಏ.14): ಮುಂಬರುವ ಲೋಕಸಭೆ ಚುನಾವಣೆಗೆ ಸಂಕಲ್ಪ ಪತ್ರ ಎಂದೂ ಕರೆಯಲ್ಪಡುವ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತಮಿಳುನಾಡು ಹಾಗೂ ತಮಿಳು ಭಾಷೆಯ ಕುರಿತಾಗಿ ಬಿಜೆಪಿ ದೊಡ್ಡ ವಾಗ್ದಾನವನ್ನು ಮಾಡಲಾಗಿದೆ. ಪ್ರಣಾಳಿಕೆಯ ಭಾಗವಾಗಿ ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯ ಉತ್ತೇಜನಕ್ಕೆ ಪ್ರೋತ್ಸಾಹ ನೀಡೋದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಪೆರಿಯಾರ್‌ ಅವರನ್ನೇ ಆರಾಧಿಸುವ ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧ ತಿರುವಳ್ಳುವರ್ ರಣತಂತ್ರವನ್ನು ಮೋದಿ ರೂಪಿಸಿದ್ದಾರೆ. ಅದರಂತೆ, ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳನ್ನು ತಮಿಳಿನ ಜಾಗತಿಕ ಖ್ಯಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ. ತಮಿಳುನಾಡಿನಲ್ಲಿ ಅತ್ಯಂತ ಕನಿಷ್ಠ ಅಸ್ತಿತ್ವ ಹೊಂದಿರುವ ಬಿಜೆಪಿ ಲೋಕಸಭೆ ಚುನಾವಣೆಯ ವೇಳೆ ತಮಿಳು ಭಾಷಿಕರ ಪ್ರೀತಿ ಸಂಪಾದಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿದ್ದು, ಕನಿಷ್ಠ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಇಂಗಿತ ಬಿಜೆಪಿಯದ್ದಾಗಿದೆ. ಅದಲ್ಲದೆ, ಬಿಜೆಪಿಯ ತಮಿಳು ಪ್ರೇಮ, ಬರೀ ಲೋಕಸಭೆ ಚುನಾವಣೆಗೆ ಮಾತ್ರವಲ್ಲ 2026ರ ವಿಧಾನಸಭಾ ಚುನಾವಣೆ ಬಿಜೆಪಿ ಮುಖ್ಯ ಉದ್ದೇಶ ಎನ್ನಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಮೋದಿ ಕನಿಷ್ಠ ಏಳು ಬಾರಿ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಲೋಕಸಭೆಯ ಒಟ್ಟು 543 ರಲ್ಲಿ ಬಿಜೆಪಿಯ ಲೋಕಸಭೆಯ ಸಂಖ್ಯೆಯನ್ನು 370 ಕ್ಕಿಂತ ಮೀರಿ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಪ್ರಧಾನಿಯಿಂದ ರಾಜ್ಯವು ಹೆಚ್ಚಿನ ಗಮನವನ್ನು ಪಡೆದಿದೆ.

ಯಾರಿವರು ತಿರುವಳ್ಳುವರ್ ?: ಸಾಮಾನ್ಯವಾಗಿ ವಳ್ಳುವರ್ ಎಂದು ಕರೆಯಲ್ಪಡುವ ತಿರುವಳ್ಳುವರ್ ಅವರು ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿಯಾದ ಪ್ರಾಚೀನ ತಮಿಳು ತತ್ವಜ್ಞಾನಿಯಾಗಿದ್ದು, ನೀತಿಶಾಸ್ತ್ರದಿಂದ ಅರ್ಥಶಾಸ್ತ್ರದವರೆಗಿನ ವಿಷಯಗಳ ಮೇಲೆ 1,330 ದ್ವಿಪದಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ತಿರುವಳ್ಳುವರ್ ಅವರ ಕೃತಿಗಳ ಸಂಕಲನವಾದ ತಿರುಕ್ಕುರಲ್‌ನಲ್ಲಿ ಅಹಿಂಸೆಯು ವ್ಯಾಪಕವಾದ ಸಂದೇಶಗಳಲ್ಲಿ ಒಂದಾಗಿದೆ. ವಿವಿಧ ಅಂದಾಜಿನ ಪ್ರಕಾರ ಕ್ರಿಸ್ತಪೂರ್ವ ಮೂರನೇ ಮತ್ತು ಆರನೇ ಶತಮಾನದ ನಡುವಿನ ಕೃತಿಗಳು ಇದು ಎನ್ನಲಾಗಿದೆ. ಭಾರತದ ಇತರ ಭಾಗಗಳಲ್ಲಿ ಶ್ರೀ ನಂತೆ ಸಾಮಾನ್ಯವಾಗಿ ಗೌರವದ ಸಂಕೇತವಾಗಿ ತಮಿಳುನಾಡಿನಲ್ಲಿ ಹೆಸರಿನ ಮೊದಲು ತಿರು ಎಂಬ ಪೂರ್ವಪ್ರತ್ಯಯವನ್ನು ಸೇರಿಸಲಾಗುತ್ತದೆ. ಕೆಲವು ವರ್ಷಗಳಿಂದ ತಮಿಳುನಾಡಿನ ಮತದಾರರನ್ನು ಮೋದಿ ತಲುಪುತ್ತಿದ್ದಾರೆ.

ಭಾರತದ ಇತರ ರಾಜ್ಯಗಳಲ್ಲಿ ಬಿಜೆಪಿ ಬಲಿಷ್ಠವಾಗಲು ಸಹಾಯ ಮಾಡಿದ ಹಿಂದೂ ಐಡೆಂಟಿಟಿ ರಾಜಕೀಯ ಮತ್ತು ರಾಷ್ಟ್ರೀಯತೆ ತಮಿಳುನಾಡಿನಲ್ಲಿ ಈವರೆಗೂ ಕೆಲಸ ಮಾಡಿಲ್ಲ. ಅಲ್ಲಿ ತಮಿಳು ಐಡೆಂಟಿಟಿಯೇ ಹೆಚ್ಚಾಗಿ ಪ್ರತಿಧ್ವನಿಸಿದೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ (UNGA) 74 ನೇ ಅಧಿವೇಶನದಲ್ಲಿ, ಮೋದಿ ಅವರು ಅಂತರ್ಗತ ನೀತಿಗಳಿಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸಲು ತತ್ವಜ್ಞಾನಿ ಕಣಿಯನ್ ಪುಂಗುಂದ್ರನಾರ್ ಅವರ 3,000 ವರ್ಷಗಳಷ್ಟು ಹಳೆಯದಾದ ತಮಿಳು ಉಲ್ಲೇಖವನ್ನು ಹೇಳಿದ್ದರು. 2022ರ ಜನವರಿಯಲ್ಲಿ ಪ್ರಧಾನಮಂತ್ರಿಯವರು ಚೆನ್ನೈನಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು.

ಮೋದಿ ಅವರು ಗುಜರಾತಿ ಮತ್ತು ಪಪುವಾ ನ್ಯೂಗಿನಿಯಾದ ಟೋಕ್ ಪಿಸಿನ್ ಭಾಷೆ ಸೇರಿದಂತೆ ತಿರುಕ್ಕುರಲ್‌ನ ವಿವಿಧ ಅನುವಾದಗಳನ್ನು ಬಿಡುಗಡೆ ಮಾಡಿದ್ದಾರೆ. 2021 ರಲ್ಲಿ, ಅವರ ತವರು ಕ್ಷೇತ್ರವಾದ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ತಮಿಳು ಅಧ್ಯಯನದ ಸುಬ್ರಮಣ್ಯ ಭಾರತಿ ಕೇಂದ್ರವನ್ನು ಉದ್ಘಾಟನೆ ಮಾಡಿದ್ದರು.

ತಮಿಳುನಾಡಿನಲ್ಲಿ ದಳಪತಿ ವಿಜಯ್‌ ವಿರುದ್ಧ ಸ್ಪರ್ಧೆ ಮಾಡೋಕೆ ರೆಡಿ ಎಂದ ಕ್ರೇಜಿಸ್ಟಾರ್‌ ಹೀರೋಯಿನ್‌!

ಸುಬ್ರಮಣ್ಯಂ ಭಾರತಿ ಅವರು ತಮಿಳುನಾಡಿನ ಅತ್ಯಂತ ಪ್ರಸಿದ್ಧ ಆಧುನಿಕ ಕವಿಯಾಗಿದ್ದು, ಅವರ ಕ್ರಾಂತಿಕಾರಿ ಮನೋಭಾವ ಮತ್ತು ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಪ್ರಗತಿಪರ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದಾರೆ. ಟೋಕಿಯೊಗೆ ಭೇಟಿ ನೀಡಿದಾಗ, ಮೋದಿ ಅವರು ತಮ್ಮ ಜಪಾನ್ ಪ್ರಧಾನಿಗೆ ಪಟ್ಟಮಡೈ (ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಭಾಗ) ದಲ್ಲಿ ತಯಾರಿಸಿದ ರೇಷ್ಮೆ ಚಾಪೆಗಳನ್ನು ಉಡುಗೊರೆಯಾಗಿ ನೀಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಹೆಚ್ಚಿನ ಅಭ್ಯರ್ಥಿಗಳು ರೈತರು, ಉದ್ಯಮಿ, ವಕೀಲರು!

ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಹಾಗೂ ತಳಮಟ್ಟದಲ್ಲಿ ಪಕ್ಷವನ್ನು ಪ್ರಚಾರ ಮಾಡುವಲ್ಲಿ ಬಿಜೆಪಿ  ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೆಲಸ ಮಾಡಿರುವ ಕಾರಣ, 2024 ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ತನ್ನ ವೋಟ್‌ ಶೇರ್‌ನಲ್ಲಿ ದೊಡ್ಡ ಮಟ್ಟದ ಜಿಗಿತ ಕಾಣುವ ಸಾಧ್ಯತೆ ಇದೆ. ಆದರೆ, ಈ ಹೆಚ್ಚುವರಿ ಮತಗಳು ಬಿಜೆಪಿಗೆ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ತಂದುಕೊಡುವ ಸಾಧ್ಯತೆಯಿಲ್ಲ. ಮಾರ್ಚ್ 2024 ರಲ್ಲಿ ನೆಟ್‌ವರ್ಕ್ 18 ಬಿಡುಗಡೆ ಮಾಡಿದ ಅಭಿಪ್ರಾಯ ಸಂಗ್ರಹವು ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ರಾಜ್ಯದಲ್ಲಿ 5 ಸ್ಥಾನಗಳನ್ನು ಪಡೆಯಬಹುದು ಎಂದು ತೋರಿಸಿದೆ. ಬಹುಕಾಲದ ಮಿತ್ರ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಚುನಾವಣೆಗೆ ಮೈತ್ರಿ ತೊರೆದಿರುವ ಕಾರಣ ಎನ್‌ಡಿಎ ದುರ್ಬಲವಾಗಿರುವ ಸಾಧ್ಯತೆ ಇದೆ.

ಹೆಚ್ಚು ಭದ್ರವಾದ ಪ್ರತಿಸ್ಪರ್ಧಿ, ದ್ರಾವಿಡ ಮುನ್ನೇತ್ರ ಕಳಗಂ (ಬಿಜೆಪಿಯ ರಾಷ್ಟ್ರೀಯ ಪ್ರತಿಸ್ಪರ್ಧಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಹೋರಾಡುತ್ತಿದೆ) ತಮಿಳುನಾಡಿನಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲ್ಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

Follow Us:
Download App:
  • android
  • ios